ಮೈಸೂರು

ಸಮಗ್ರ ಕೃಷಿ ರಕ್ಷಣೆಗೆ ಯಾವ ನೀತಿಯನ್ನೂ ಬಜೆಟ್ ನಲ್ಲಿ ರೂಪಿಸಿಲ್ಲ : ಕೆ.ಎಸ್.ಪುಟ್ಟಣ್ಣಯ್ಯ ಅಸಮಾಧಾನ

ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಹಳ್ಳಿ ಮತ್ತು ಕೃಷಿಯಲ್ಲಿ ಕ್ರಾಂತಿಯ ನಿರೀಕ್ಷೆ ಇತ್ತು. ಆದರೆ, ಕೃಷಿ ಕ್ಷೇತ್ರಕ್ಕೆ 10 ಲಕ್ಷ ಕೋಟಿ ಸಾಲ ನೀಡುವುದಾಗಿ ಹೇಳಿರುವುದನ್ನು ಬಿಟ್ಟರೆ ಸಮಗ್ರ ಕೃಷಿ ರಕ್ಷಣೆಗೆ ಯಾವ ನೀತಿಯನ್ನೂ ಮಾಡಿಲ್ಲ ಎಂದು ಶಾಸಕ ಹಾಗೂ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ವೇತನ ಆಯೋಗ ರಚನೆ ಸೇರಿದಂತೆ ಆಯವ್ಯಯದಲ್ಲಿ ಮಹತ್ತರ ಬದಲಾವಣೆಯ ನಿರೀಕ್ಷೆ ಇತ್ತು. ನೋಟು ಅಮಾನ್ಯೀಕರಣದ ನಂತರ ಕಪ್ಪು ಹಣ ಎಷ್ಟು ಸಂಗ್ರಹವಾಯ್ತು ಎಂಬುದನ್ನೂ ಹೇಳಿಲ್ಲ. ಸ್ವಾಮಿನಾಥನ್ ಆಯೋಗದ ವರದಿ ಅನುಷ್ಠಾನವನ್ನೂ ಮಾಡಿಲ್ಲ ಎಂದು ಬೇಸರಿಸಿದರು.
ಬೆಲೆ ನೀತಿ ಇಲ್ಲದೆ, ಖಾಸಗಿ ಸಾಲದಿಂದ ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಆಯವ್ಯಯದಲ್ಲಿ ಚಕಾರ ಎತ್ತಿಲ್ಲ. ರೈತರ ಆತ್ಮಹತ್ಯೆಗೆ ಸಾಂತ್ವನ ಹೇಳುವುದಾಗಲಿ, ದುಃಖ ವ್ಯಕ್ತಪಡಿಸುವುದಾಗಲಿ ಮಾಡದೆ ರೈತರನ್ನು ನಿರ್ಲಕ್ಷ್ಯ ಮಾಡಿದೆ. ಗುಳೆ ಮತ್ತು ಖುಷ್ಕಿ ಪ್ರದೇಶದ ಕೃಷಿ ನೀತಿಯ ಬಗ್ಗೆ ಆಲೋಚನೆಯೇ ಮಾಡಿಲ್ಲ. ನರೇಗಾದಲ್ಲಿ ನಿತ್ಯದ ಕೂಲಿ ನಿಗದಿ  ಮಾಡದಿರುವುದು ಮಾನವ ಶಕ್ತಿಗೆ ಬೆಲೆ ಇಲ್ಲದಂತೆ ಮಾಡಿದೆ. 100 ದಿನ ಉದ್ಯೋಗ ಸೃಷ್ಟಿ ಮಾಡುವುದು ದೊಡ್ಡ ಕಾರ್ಯಕ್ರಮ. ಕೃಷಿಗೆ ನರೇಗಾ ಜೋಡಿಸಿದ್ದರೆ, ಸಮರ್ಪಕವಾಗಿ ಜನರಿಗೆ ಉದ್ಯೋಗ ಒದಗಿಸಿ ಗುಳೆ ಹೋಗುವುದನ್ನು ತಪ್ಪಿಸಬಹುದಿತ್ತು ಎಂದು ಅಭಿಪ್ರಾಯಪಟ್ಟರು.
ಸ್ತ್ರೀಶಕ್ತಿ ಬಗ್ಗೆ ಆಯವ್ಯಯದಲ್ಲಿ ಒಂದು ಶಬ್ದವು ಇಲ್ಲ. ಬಡ ವರ್ಗದ ಮಹಿಳೆಯರಿಗೆ ಸಮಗ್ರ ಆರೋಗ್ಯ ನೀತಿ ಜಾರಿಯಾಗಬೇಕು. ಈ ವರ್ಗದ ಮಹಿಳೆಯರ ಆರೋಗ್ಯ ರಕ್ಷಣೆಗಾಗಿ ಉಚಿತ ಹೆಲ್ತ್ ಕಾರ್ಡ್ ನೀಡಬೇಕು ಎಂದರು.
ದೇಶದಲ್ಲಿ ಸಮಾನ ಶಿಕ್ಷಣ ನೀತಿ ತರುವ ನಿರೀಕ್ಷೆಯು ಈಡೇರಿಲ್ಲ. ಜಲ್ಲಿಕಟ್ಟಿಗೆ ಸುಗ್ರೀವಾಜ್ಞೆ ತರುವುದಾದರೆ ಸಮಾನ ಶಿಕ್ಷಣಕ್ಕೆ ಸುಗ್ರೀವಾಜ್ಞೆ ಯಾಕೆ ತರಬಾರದು ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರ, ಕಪ್ಪುಹಣದ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ, ಲೋಕಪಾಲ್ ಮಸೂದೆಗೆ ಹೆಚ್ಚು ಒತ್ತು ನೀಡತ್ತಿಲ್ಲ. ನೋಟು ಅಮಾನ್ಯಮಾಡಿದ ಮೇಲೆ ಯಾವ ಶ್ರೀಮಂತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರಶ್ನಿಸಿದ ಅವರು, ಆರ್ಥಿಕ ತಜ್ಞರು ಯಾವ ಮಾನದಂಡದ ಮೇಲೆ ಜಿಡಿಪಿ ಬರೆಯುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಅವರು ಕುರುಡಾಗಿ ಬರೆಯುತ್ತಿದ್ದಾರೆ. ನಾವೂ ಕುರುಡಾಗಿ ಒಪ್ಪಿಕೊಳ್ಳುತ್ತಿದ್ದೇವೆ. ರಾಜ್ಯ ಕೃಷಿ ಬೆಲೆ ಆಯೋಗವಂತು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ನೀಡಿರುವ ವರದಿಯ ಅನುಷ್ಠಾನಕ್ಕೆ ಸರ್ಕಾರ ಮುಂದಾಗುತ್ತಿಲ್ಲ ಎಂದು ದೂರಿದರು.
ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ರೈತ ಮುಖಂಡರಾದ ಮರಂಕಯ್ಯ, ಸರಗೂರು ನಟರಾಜ್, ಕೆಂಪೇಗೌಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: