ದೇಶ

ಉಗ್ರ ಮಸೂದ್ ಅಜರ್ ಆಸ್ತಿ ಮುಟ್ಟುಗೋಲು ಹಾಕಿದ ಪಾಕ್

ಇಸ್ಲಾಮಾಬಾದ್,ಮೇ 3-ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಮಸೂದ್ ಅಜರ್ ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಘೋಷಿಸಿದ ಬಳಿಕ ಇದೀಗ ಪಾಕಿಸ್ತಾನ ಅಜರ್ ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಮಸೂದ್ ಅಜರ್ ಆಸ್ತಿಯನ್ನು ಮುಟ್ಟುಗೋಲು ಹಾಕುವಂತೆ ಪಾಕಿಸ್ತಾನ ಸರ್ಕಾರ ಆದೇಶಿಸಿದೆ. ಅಲ್ಲದೆ, ಆತನ ವಿದೇಶಿ ಪ್ರಯಾಣದ ಮೇಲೆ ನಿಷೇಧ ಹೇರಲಾಗಿದೆ. ವಿಶ್ವಸಂಸ್ಥೆ ಅಜರ್ಮೇಲೆ ನಿಷೇಧ ಹೇರಿರುವುದರಿಂದ ಆತನಿಗೆ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಹಾಗೂ ಕೊಂಡುಕೊಳ್ಳುವುದರ ಮೇಲೂ ನಿಷೇಧ ಜಾರಿಯಾಗಿದೆ. ಅಜರ್ ವಿರುದ್ಧ ನಾವು ಸಂಪೂರ್ಣವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಪಾಕಿಸ್ತಾನ ತಿಳಿಸಿದೆ.

ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಸೂದ್ ಅಜರ್ ವಿರುದ್ಧ ನಾಲ್ಕು ಬಾರಿ ನಿರ್ಣಯಗಳಾಗಿದ್ದವು. ಪ್ರತೀ ಬಾರಿಯೂ ಚೀನಾ ಪಾಕಿಸ್ತಾನದ ಪರವಾಗಿ ನಿಂತು ಪಾಕಿಸ್ತಾನವನ್ನು ರಕ್ಷಿಸುತ್ತಿತ್ತು. ಆದರೆ ಬಾರಿ ಚೀನಾವು ಬೆಂಬಲ ಹಿಂಪಡೆದ ಕಾರಣ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಲು ಸಾಧ್ಯವಾಯಿತು.

ಪುಲ್ವಾಮಾ ದಾಳಿ ಬಳಿಕ ಫ್ರಾನ್ಸ್, ಬ್ರಿಟನ್ ಮತ್ತು ಅಮೆರಿಕಾ ದೇಶಗಳು ಮಸೂದ್ ಅಜರ್ನನ್ನು ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ಪ್ರಸ್ತಾವವನ್ನು ಮತ್ತೊಮ್ಮೆ ಮುಂದಿಟ್ಟಿದ್ದವು. ಇತ್ತೀಚಿನ ದಿನಗಳಲ್ಲಿ ಚೀನಾದ ಮನವೊಲಿಸಲು ಭಾರತ ಸಾಕಷ್ಟು ಪ್ರಯತ್ನ ಮಾಡಿತು. ಫ್ರಾನ್ಸ್ ಮತ್ತು ಅಮೆರಿಕಾ ದೇಶಗಳೂ ಚೀನಾ ಮೇಲೆ ಒತ್ತಡ ಹಾಕಿದವು. ಹೀಗಾಗಿ, ಚೀನಾ ತನ್ನ ನಿರ್ಧಾರವನ್ನು ಬದಲಿಸಿತು.

ಮಂಡಳಿಯಲ್ಲಿ ಒಟ್ಟು 15 ಸದಸ್ಯ ರಾಷ್ಟ್ರಗಳಿರುತ್ತವೆ. ಅವುಗಳ ಪೈಕಿ ರಷ್ಯಾ, ಅಮೆರಿಕಾ, ಬ್ರಿಟನ್, ಫ್ರಾನ್ಸ್ ಮತ್ತು ಚೀನಾ ಐದು ರಾಷ್ಟ್ರಗಳು ಖಾಯಂ ಸದಸ್ಯತ್ವ ಹೊಂದಿವೆ. ಉಳಿದ 10 ಸದಸ್ಯರನ್ನು ಪ್ರಾದೇಶಿಕತೆ ಆಧಾರದ ಮೇಲೆ ಆವರ್ತನೆ ಮಾಡಲಾಗುತ್ತದೆ.

ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಪಾಲನೆಯ ಜವಾಬ್ದಾರಿ ಇದಕ್ಕಿದೆ. ವಿಶ್ವಸಂಸ್ಥೆಗೆ ಹೊಸ ಸದಸ್ಯ ರಾಷ್ಟ್ರಗಳನ್ನು ಸೇರಿಸಲು ಅಥವಾ ಅದರ ನಿಯಮಾವಳಿಯಲ್ಲಿ ಏನಾದರೂ ಬದಲಾವಣೆ ಮಾಡಲು ಮಂಡಳಿಯ ಅನುಮೋದನೆ ಅಗತ್ಯವಾಗಿರುತ್ತದೆ. (ಎಂ.ಎನ್)

 

Leave a Reply

comments

Related Articles

error: