ದೇಶಪ್ರಮುಖ ಸುದ್ದಿ

ಫೋನಿ ಚಂಡಮಾರುತದ ಆರ್ಭಟ: ಐವರು ಬಲಿ

ಭುವನೇಶ್ವರ/ನವದೆಹಲಿ,ಮೇ 3-ಪುರಿ ಸಮೀಪದ ಕರಾವಳಿ ತೀರಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ್ದು, ಫೋನಿಯ ಆರ್ಭಟಕ್ಕೆ ಐವರು ಬಲಿಯಾಗಿದ್ದಾರೆ.

ಪುರಿಯಲ್ಲಿ ಮನೆಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಭುವನೇಶ್ವರ, ಗಂಜಾಮ್‌ ಮತ್ತು ಬಾಲಸೋರ್‌ನಲ್ಲಿ ಮೂವರು ಮಳೆಗೆ ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇತ್ತೀಚಿನ ಮಾಹಿತಿಗಳ ಪ್ರಕಾರ ಗಂಟೆಗೆ 180 ಕಿ.ಮೀಟರ್ ವೇಗದಲ್ಲಿ ಭಾರಿ ಗಾಳಿ ಬೀಸುತ್ತಿರುವುದರಿಂದ ಒಡಿಶಾದ ಕರಾವಳಿ ತೀರ ಸೇರಿದಂತೆ ಪುರಿಯ ಸುತ್ತ ಮುತ್ತಲಿನಲ್ಲಿ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಸಾವಿರಾರು ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.

ಫೋನಿಯ ಅಬ್ಬರ ಆಂಧ್ರಪ್ರದೇಶದಲ್ಲೂ ಮುಂದುವರೆದಿದ್ದು, ಶ್ರೀಕಾಕುಳಂನಲ್ಲಿ 20ಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿವೆ. ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಫೋನಿಯಾ ಅಬ್ಬರಕ್ಕೆ ಒಡಿಶಾ, ಆಂಧ್ರ ಹಾಗೂ ಪಶ್ಚಿಮ ಬಂಗಾಳದ ಕರಾವಳಿ ತೀರ ಪ್ರದೇಶಗಳಲ್ಲಿ ಸಾಕಷ್ಟು ಹಾನಿ ಸಂಭವಿಸುವ ಸಾಧ್ಯತೆಗಳಿವೆ. ಅನಾಹುತಗಳನ್ನು ತಪ್ಪಿಸಲು ವಿಪತ್ತು ನಿರ್ವಹಣ ಪಡೆಗಳು, ಸೇನೆ, ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಂ ಹೂಡಿದ್ದಾರೆ.

10 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದ್ದು ಸಾವಿರಾರು ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಹೆಲಿಕಾಫ್ಟರ್‌ ಮೂಲಕ ಆಹಾರ ಪೂರೈಕೆ ಮಾಡುವ ವ್ಯವಸ್ಥೆ ಮಾಡಲಾಗಿದೆ.

ಒಡಿಶಾದ ರಾಜಧಾನಿ ಭುವನೇಶ್ವರ ಸೇರಿದಂತೆ ಕರಾವಳಿ ತೀರದ 15 ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ವಿದ್ಯುತ್ ಸಂಪರ್ಕವನ್ನು ನಿಲ್ಲಿಸಲಾಗಿದೆ. ಬಸ್‌ ಸಂಚಾರ, ರೈಲು ಸಂಚಾರ ಮತ್ತು ವಿಮಾನ ಸಂಚಾರವನ್ನು ನಿಲ್ಲಿಸಲಾಗಿದೆ. ಮೂರು ದಿನಗಳ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. (ಎಂ.ಎನ್)

Leave a Reply

comments

Related Articles

error: