ದೇಶಪ್ರಮುಖ ಸುದ್ದಿ

ಗಂಡ ಪಬ್‍ಜಿ ಅವಕಾಶ ಕೊಡುತ್ತಿಲ್ಲವೆಂದು ವಿಚ್ಛೇದನ ಕೋರಿದ ಹೆಂಡತಿ!

ಹೊಸದಿಲ್ಲಿ (ಮೇ 3): ಗಂಡ ‘ಪಬ್‍ಜಿ’ ಗೇಮ‍್ ಆಡದಂತೆ ತನ್ನನ್ನು ತಡೆದಿದ್ದಾನೆಂಬ ಕಾರಣ ನೀಡಿ ಆತನಿಂದ ಮಹಿಳೆಯೊಬ್ಬಳು ವಿಚ್ಛೇದನ ಕೋರಿದ್ದಾಳೆ! ಸಂಯುಕ್ತ ಅರಬ್ ಸಂಸ್ಥಾನದ ಅಜ್ಮಾನ್ ನಿವಾಸಿಯಾಗಿರುವ ಈ ಮಹಿಳೆ ಇಪ್ಪತ್ತರ ಅಸುಪಾಸಿನವಳಾಗಿದ್ದು, ತನ್ನ ಪತಿ ತನಗೆ ಈ ಜನಪ್ರಿಯ ಆನ್ ಲೈನ್ ಆಟ ಆಡಲು ಬಿಡುತ್ತಿಲ್ಲ ಎಂಬುದು ಆಕೆಯ ಅಳಲಾಗಿದೆ.

ಪಬ್‍ಜಿ ಗೇಮ್ ಆಡುವ ಕುರಿತಂತೆ ಆಕೆ ಮತ್ತಾಕೆಯ ಪತಿಯ ನಡುವಿನ ಜಗಳ ಹಿಂಸೆಯ ರೂಪಕ್ಕೆ ತಾಳಿದ ನಂತರ ಆಕೆ ಅಜ್ಮಾನ್ ಪೊಲೀಸರ ಸಾಮಾಜಿಕ ಕೇಂದ್ರದ ಸಹಾಯ ಕೋರಿದ್ದಾಳಂತೆ! ತನಗಿಷ್ಟವಾದ ಮನರಂಜನಾ ಸಾಧನವನ್ನು ಆಯ್ದುಕೊಳ್ಳಲು ತನಗೆ ಅನುಮತಿ ನಿರಾಕರಿಸಿದ್ದರಿಂದ ಆಕೆ ಈ ಗೇಮ್ ಆಡುವ ಸಂತೋಷದಿಂದ ವಂಚಿತಳಾಗಿದ್ದಾಳೆಂದು ಮಹಿಳೆ ತನ್ನ ವಿಚ್ಛೇದನ ಬೇಡಿಕೆಯನ್ನು ಸಮರ್ಥಿಸಿಕೊಂಡಿದ್ದಾಳೆ ಎಂದು ಅಜ್ಮಾನ್ ಪೊಲೀಸರ ಸೋಶಿಯಲ್ ಸೆಂಟರ್ ನಿರ್ದೇಶಕ ಕ್ಯಾಪ್ಟನ್ ವಫಾ ಖಲೀಲ್ ಆಲ್ ಹೊಸಾನಿ ಹೇಳಿದ್ದಾರೆ.

ಪಬ್‍ಜಿ ಆಡಲು ಬಿಟ್ಟರೆ ಆಕೆ ಅದಕ್ಕೆ ಅಂಟಿಕೊಂಡು ತನ್ನ ಕುಟುಂಬದ ಕಡೆಗಿರುವ ಜವಾಬ್ದಾರಿ ಮರೆತು ಬಿಡಬಹುದೆಂದು ಆಕೆಯ ಪತಿ ದೂರಿದರೆ ತಾನು ಇತಿಮಿತಿಯಲ್ಲಿಯೇ ಆಡುತ್ತಿರುವುದಾಗಿ ಮಹಿಳೆ ಹೇಳಿದ್ದಾಳಲ್ಲದೆ ತಾನು ಅಪರಿಚಿತರೊಡನೆ ಸಂಪರ್ಕ ಸಾಧಿಸುವ ಚ್ಯಾಟ್ ಆಪ್ಶನ್ ಇನ್ನೂ ಆಕ್ಟಿವೇಟ್ ಮಾಡಿಲ್ಲ ಹಾಗೂ ಈ ಗೇಮ್ ಅನ್ನು ಕೇವಲ ತನ್ನ ಸ್ನೇಹಿತೆಯರು ಹಾಗೂ ಸಂಬಂಧಿಕರ ಜತೆಗೆ ಮಾತ್ರ ಆಡುತ್ತಿರುವುದಾಗಿಯೂ ಆಕೆ ಹೇಳಿದ್ದಾಳೆ.

ಆದರೆ ತಾನು ಆಕೆಯ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮನಸ್ಸು ಹೊಂದಿಲ್ಲ ಆದರೆ ತಮ್ಮ ಕುಟುಂಬ ಒಂದಾಗಿಯೇ ಇರುವಂತೆ ಮಾಡುವುದು ತನ್ನ ಉದ್ದೇಶ ಹಾಗೂ ಪತ್ನಿ ತನ್ನಿಂದ ಈ ಕಾರಣಕ್ಕೆ ವಿಚ್ಛೇದನ ಕೋರಬಹುದೆಂದು ತಾನು ಊಹಿಸಿರಲಿಲ್ಲ ಎಂದು ಪತಿ ಹೇಳಿದ್ದಾನೆ. (ಎನ್.ಬಿ)

Leave a Reply

comments

Related Articles

error: