ಮೈಸೂರು

ಓದುವುದಕ್ಕೂ- ಅನುಷ್ಠಾನಗೊಳಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ : ಹೆಚ್.ಎಸ್.ಬಿಂದ್ಯಾ ಅಭಿಮತ

ಮೈಸೂರು,ಮೇ.4:- ಓದುವುದಕ್ಕೂ- ಅನುಷ್ಠಾನಗೊಳಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ನಾವು ಬರವಣಿಗೆಯಲ್ಲಿ ಏನನ್ನು ನೋಡುತ್ತೇವೋ ಅದನ್ನು ಯಥಾವತ್ತಾಗಿ ಅನುಷ್ಠಾನಗೊಳಿಸುವುದು ಸ್ವಲ್ಪ ಕಷ್ಟದ ವಿಚಾರ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಹೆಚ್.ಎಸ್.ಬಿಂದ್ಯಾ ಅಭಿಪ್ರಾಯಪಟ್ಟರು.

ಅವರಿಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಕರಾಮುವಿ ಡಾ. ಬಾಬು ಜಗಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಡಾ.ಬಾಬು ಜಗಜೀವನ್ ರಾಮ್ ಅವರ 112ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಡಾ.ಬಾಬು ಜಗಜೀವನ್ ರಾಮ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಶ್ರದ್ಧಾ ಪೂರ್ವಕವಾಗಿ ಆಚರಿಸುವ ಎರಡು ವ್ಯಕ್ತಿತ್ವಗಳು.  ಡಾ.ಬಾಬು ಜಗಜೀವನ್ ರಾಮ್, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಯಾರೇ ಇರಲಿ ಅವರನ್ನು ಹುಟ್ಟಿದ ಸಮುದಾಯಕ್ಕೆ ಸೀಮಿತಗೊಳಿಸಿ ಆ ಸಮುದಾಯದ ನಾಯಕರನ್ನಾಗಿ ಮಾಡುವುದು ಸಣ್ಣತನವಾಗಲಿದೆ. ದೊಡ್ಡ ಸಮುದಾಯದಲ್ಲಿ ಹುಟ್ಟಿದರೆಂಬ ಕಾರಣಕ್ಕೆ ಅವರನ್ನು ಆ ಸಮುದಾಯದ ನಾಯಕರನ್ನಾಗಿ ಮಾಡುವುದು ನಮ್ಮ ಸಣ್ಣ ವ್ಯಕ್ತಿತ್ವವಾಗುತ್ತದೆ ಎಂದರು.  ಬಾಲ್ಯದಿಂದಲೇ ವ್ಯಕ್ತಿಯ ಪರಿಚಯ ಯಾಕೆ ಮಾಡುತ್ತೇವೆಂದರೆ ವ್ಯಕ್ತಿತ್ವ ಬಾಲ್ಯದ ಹಿನ್ನೆಲೆಯನ್ನು ಒಳಗೊಂಡಿರುತ್ತದೆ. ನೋವು ನಲಿವು ಅವರ ವ್ಯಕ್ತಿತ್ವವನ್ನು ಪ್ರತಿಬಿಂಬಿಸತ್ತೆ. ಬಾಲ್ಯ  -ಜೀವನ ವ್ಯಕ್ತಿಯ ಸಾಧನೆಯ ಪ್ರತಿರೂಪಗಳಾಗಿರುತ್ತವೆ. ನೋವು-ನಲಿವು ಸಾಧನೆಯಲ್ಲಿ ಪ್ರತಿಬಿಂಬಿಸತ್ತೆ ಎಂದು ತಿಳಿಸಿದರು. 150ವರ್ಷಗಳ ಹಿಂದಿನ ಜೀವನಕ್ಕೂ, ಈಗಿನ ಜೀವನಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಕೆಲವರಿಗೆ ಅವಕಾಶಗಳು ತಾನಾಗಿಯೇ ಬರುತ್ತವೆ. ಇನ್ಕೆಲವರು ಅವಕಾಶಗಳನ್ನು ಹುಟ್ಟುಹಾಕಿ ಬೆಳೆಯುತ್ತಾರೆ. ಅಂತಹ ಸಾಲಿಗೆ ಸೇರಿದ ವ್ಯಕ್ತಿ ಡಾ.ಬಾಬುಜಗಜೀವನ್ ರಾಮ್. ಜನಪ್ರತಿನಿಧಿಗಳಿಂದ ಆಯ್ಕೆಯಾದ ವ್ಯಕ್ತಿಯೋರ್ವ ಅತ್ಯಂತ ದೀರ್ಘಕಾಲ ಅಧಿಕಾರ ಹೊಂದಿದ್ದರು ಅಂದರೆ ಅವರು ಡಾ.ಬಾಬುಜಗಜೀವನ್ ರಾಮ್ ಮಾತ್ರ. ಸಾಮರ್ಥ್ಯವಿಲ್ಲದಿದ್ದರೆ ಮುಂದುವರಿಸಿಕೊಂಡು ಬರಲು ಅಸಾಧ್ಯ. ಮಂತ್ರಿಯಾಗಿ, ಸಚಿವನಾಗಿ, ಸಂಸದೀಯಪಟುವಾಗಿ ಗುರುತಿಸಿಕೊಂಡಿದ್ದರು. ಅವರು ನಿರ್ವಹಿಸಿದ ಕೆಲಸ ಅನೇಕರಿಗೆ ಮಾರ್ಗದರ್ಶನ. ನಿರ್ವಹಣೆ ಮಾಡುವ ಸಾಮರ್ಥ್ಯ ಎಲ್ಲರಿಗೂ ಬರಲ್ಲ. ಅವರಲ್ಲಿ ಯಶಸ್ವಿಯಾಗಿ ನಿರ್ವಹಿಸುವ ಸಾಮರ್ಥ್ಯವಿತ್ತು. ನೆಹರು ಸಚಿವ ಸಂಪುಟದಲ್ಲಿ ಕಾರ್ಮಿಕ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಮಾನವನನ್ನೇ ಸಂಪತ್ತಾಗಿ ನೋಡಿದ ಮೊದಲ ವ್ಯಕ್ತಿ ಅವರು. ಕಾರ್ಮಿಕರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ತೆಗೆದುಕೊಂಡ ಕಾರ್ಯ ಅವಿಸ್ಮರಣೀಯ. ಕಾರ್ಮಿಕರ ಸಂಘಟನೆಗಾಗಿ ಒಕ್ಕೂಟ ನಿರ್ಮಾಣ ಮಾಡಿದರು. ವ್ಯಾಜ್ಯಗಳನ್ನು ಪರಿಹರಿಸಲು ವ್ಯಾಜ್ಯ ಕಾಯಿದೆ ತಂದರು. ಮಹಿಳೆಯರಿಗೆ ಪ್ರಸೂತಿಗಾಗಿ ರಜೆ ನೀಡಬೇಕು ಎಂದು ಆಲೋಚಿಸಿ ವೇತನ ಸಹಿತ ರಜೆ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದರು. ಗುತ್ತಿಗೆ ನೌಕರರಿಗೂ ಭದ್ರತೆ ಒದಗಿಸಿದರು ಎಂದರು.

ಕಾರ್ಯಕ್ರಮದಲ್ಲಿ ಕರಾಮುವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ, ಡಾ.ಬಾಬು ಜಗಜ್ಜೀವನರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಗೌರವ ನಿರ್ದೇಶಕ ಡಾ.ಶರಣಮ್ಮ, ಕುಲಸಚಿವ ಪ್ರೊ.ರಮೇಶ್ ಬಿ, ಪರೀಕ್ಷಾಂಗ ಕುಲಸಚಿವ ಡಾ. ರಮಾನಂದ, ಪ್ರೊ.ಜಗದೀಶ್, ಡೀನ್ ಪ್ರೊ.ಬಿ.ಟಿ.ಬಸವರಾಜು, ಹಣಕಾಸಿ ಅಧಿಕಾರಿ ಖಾದರ್ ಪಾಷಾ,  ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: