ಮೈಸೂರು

ಸರಗೂರನ್ನು ತಾಲೂಕು ಕೇಂದ್ರ ಮಾಡುವಂತೆ ಒತ್ತಾಯ

ರಾಜ್ಯ ಸರ್ಕಾರವು  43 ತಾಲೂಕುಗಳನ್ನು ಘೋಷಣೆ ಮಾಡಿ ಆದೇಶ ಹೊರಡಿಸಿದ್ದು, ಸರಗೂರನ್ನು ತಾಲೂಕನ್ನಾಗಿ ಘೋಷಣೆ ಮಾಡಬೇಕು ಎಂದು ಸರಗೂರು ತಾಲೂಕು ಹೋರಾಟ ಸಮಿತಿಯ ಸಂಚಾಲಕ ಸರಗೂರು ಕೃಷ್ಣ ಸರ್ಕಾರಕ್ಕೆ ಮನವಿ ಮಾಡಿದರು.

ಶುಕ್ರವಾರ ನಗರದ ಪತ್ರಕರ್ತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಗೂರು ಸುಮಾರು 80 ಹಳ್ಳಿಗಳಿಂದ ಕೂಡಿದೆ. ಅಪಾರ ಜನಸಂಖ್ಯೆ ಹೊಂದಿದೆ. ಅನೇಕ ಹಳ್ಳಿಗಳಿಂದ ಸಾರ್ವಜನಿಕರು ಯಾವುದೇ ಕೆಲಸ ಕಾರ್ಯಗಳಿಗೆ ಇಲ್ಲಿಗೆ ಬಂದು ಹೋಗುತ್ತಾರೆ.  ಸರ್ಕಾರದ ಕೆಲಸಗಳು ಸಹ ಉತ್ತಮವಾಗಿ ನಡೆಯುತ್ತಿದ್ದು, ಕೃಷಿ ಉತ್ಪನ್ನ ಮಾರಾಟ ಕೇಂದ್ರವು ಸಹ ಇಲ್ಲಿದೆ. ಅಲ್ಲದೇ ಈ ವ್ಯಾಪ್ತಿಗೆ ಒಳಪಟ್ಟ ಗ್ರಾಮಗಳು ಸರ್ಕಾರಿ ಕಾಲೇಜು, ಪ್ರೌಢಶಾಲೆ, ಪೊಲೀಸ್ ಠಾಣೆ, ಬಸ್ ನಿಲ್ದಾಣ, ಗ್ರಂಥಾಲಯ ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡಿದ್ದು, ಸಾರ್ವಜನಿಕರಿಗೆ ಬೇಕಾಗುವ ಸಕಲ ಸವಲತ್ತುಗಳು ಸರಗೂರಿನಲ್ಲಿ ಸಿಗುವುದರಿಂದ ಸರಗೂರನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆಂದು ಅವರು ಒತ್ತಾಯಿಸಿದರು.

ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರೈತರೊಡಗೂಡಿ ಧರಣಿ ಮಾಡುತ್ತೇವೆ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಮಹೇಶ, ಸೋಮಣ್ಣ, ಕಲೀಲ್ ಹಾಜರಿದ್ದರು.

Leave a Reply

comments

Related Articles

error: