ಮೈಸೂರು

ರೈತರದು ಆತ್ಮಹತ್ಯೆಯಲ್ಲ, ಸರ್ಕಾರ ವಾತಾವರಣದಿಂದಾಗುತ್ತಿರುವ ಹತ್ಯೆ : ಪ್ರೊ.ಬಿ.ಎಂ.ಕುಮಾರಸ್ವಾಮಿ

ರೈತರು ಮಾಡಿಕೊಳ್ಳುತ್ತಿರುವುದು ಆತ್ಮಹತ್ಯೆಯಲ್ಲ  ಬದಲಾಗಿ ಸರ್ಕಾರದ ನೀತಿಗಳು ನಿರ್ಮಾಣ ಮಾಡಿರುವ ವಾತಾವರಣದಿಂದ ಆಗುತ್ತಿರುವ ಹತ್ಯೆ ಎಂದು ಸ್ವದೇಶಿ ಜಾಗರಣ ಮಂಚ್‍ನ ರಾಷ್ಟ್ರೀಯ ಸಹ ಸಂಯೋಜಕ ಹಾಗೂ ಅರ್ಥಶಾಸ್ತ್ರಜ್ಞ ಪ್ರೊ.ಬಿ.ಎಂ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಶುಕ್ರವಾರ ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಸ್ವದೇಶಿ ಜಾಗರಣ್ ಮಂಚ್ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಸ್ವದೇಶಿ ಮೇಳ-2017 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಅನೇಕ ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ನೇಕಾರರು ಸೇರಿದಂತೆ ಕೈಗಾರಿಕೆಗಳನ್ನೇ ನಂಬಿ ಜೀವನ ದೂಡುತ್ತಿದ್ದವರು ಆತ್ಮಹತ್ಯೆಗೆ ಕೊರಳೊಡ್ಡುತ್ತಿದ್ದಾರೆ. ಹಿಂದೆ ಸಣ್ಣ ಕೈಗಾರಿಕೆಗಳಿಗೆ ಮೀಸಲಾತಿ ಇತ್ತು. ಪಂಚೆ, ಟವಲ್ ಸೇರಿದಂತೆ ಇನ್ನಿತರ ಕೆಲ ವಸ್ತುಗಳನ್ನು ಬೃಹತ್ ಕೈಗಾರಿಕೆಗಳವರು ತಯಾರಿಸುವಂತಿರಲಿಲ್ಲ. ಆದರೆ, ಜಾಗತೀಕರಣದ ಪ್ರಭಾವದಿಂದಾಗಿ ಸರ್ಕಾರ ಮೀಸಲಾತಿಯನ್ನು ತೆಗೆದು ಹಾಕಿರುವುದರಿಂದ ಸಣ್ಣ ಕೈಗಾರಿಕೆಗಳು ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಅಸಮಾನ ಪೈಪೋಟಿ ನಡೆಸುತ್ತಿವೆ. ಇದರಿಂದ ದೊಡ್ಡ ಕೈಗಾರಿಕೆಗಳಿಗೆ ಸ್ಪರ್ಧೆ ನೀಡಲಾಗದೆ ಮುಚ್ಚುತ್ತಿದ್ದು ಕಾರ್ಮಿಕರು, ಮಾಲೀಕರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತ ವಿಶ್ವದ 9ನೇ ಶ್ರೀಮಂತ ರಾಷ್ಟ್ರ. ದೇಶದ ಜನಸಂಖ್ಯೆಯಲ್ಲಿ ಶೇ.1ರಷ್ಟು ಜನರಲ್ಲಿ ಮಾತ್ರ ದೇಶದ ಶೇ.99ರಷ್ಟು ಸಂಪತ್ತು ಕ್ರೋಢೀಕರಣವಾಗಿದೆ. ಇದರಿಂದ ಶ್ರೀಮಂತ ಮತ್ತು ಬಡವರ ನಡುವಿನ ಅಂತರ ಹೆಚ್ಚಾಗಿದೆ. ದೇಶದಲ್ಲಿ ಆದಾಯ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಆದರೆ, ಉದ್ಯೋಗ ಬೆಳೆಯುತ್ತಿಲ್ಲ. ಇದರಿಂದ ನಿರುದ್ಯೋಗ ಸಮಸ್ಯೆ ತೀವ್ರವಾಗುತ್ತಿದೆ. 1991ರ ಜಾಗತೀಕರಣ ನೀತಿಗೆ ತೀವ್ರ ಪ್ರತಿರೋಧ ತೋರಿಸುವ ನಿಟ್ಟಿನಲ್ಲಿ ಸ್ವದೇಶಿ ಜಾಗರಣ್ ಮಂಚ್ ಉದಯವಾಗಿದ್ದು, ಎಲ್ಲರೂ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸಿ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ಸ್ವದೇಶಿ ವಸ್ತುಗಳನ್ನು ಬಳಸಿ ದೇಶದ ಅಭಿವೃದ್ಧಿಗೆ ಶ್ರಮಿಸಿ ಎಂದು ಹೇಳಿದರು.

ಮೇಳದಲ್ಲಿ ಸುಮಾರು 70-80 ಮಳಿಗೆಗಳಲ್ಲಿ ಸಿರಿಧಾನ್ಯಗಳು, ಜೋನಿಬೆಲ್ಲ, ಹೋಂ ಮೇಡ್ ಚಾಕಲೇಟ್, ಮಲ್ನಾಡ್ ಉತ್ಪನ್ನಗಳು, ವಿವಿಧ ಬಗೆಯ ಉಪ್ಪಿನಕಾಯಿಗಳು, ಖಾದಿ ಬಟ್ಟೆಗಳು, ಸೋಪು, ವಾಷಿಂಗ್ ಪೌಡರ್ ಸೇರಿದಂತೆ ಸ್ವದೇಶಿ ವಸ್ತುಗಳ ಮಾರಾಟ ಮತ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ರಂಗಕರ್ಮಿ, ನಟ ಮಂಡ್ಯ ರಮೇಶ್, ಸ್ವದೇಶಿ ಜಾಗರಣ್ ಮಂಚ್‍ನ ರಾಜ್ಯ ಸಂಘಟಕ ಕೆ.ಜಗದೀಶ್, ಮಹಾರಾಜ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ಮುರಳಿ, ಸ್ವದೇಶಿ ಮೇಳದ ಅಧ್ಯಕ್ಷ ಪ್ರಸನ್ನ ಎನ್.ಗೌಡ, ಸ್ವದೇಶಿ ಜಾಗರಣ್ ಮಂಚ್‍ನ ರಾಜ್ಯ ಸಹ ಸಂಯೋಜಕ ಮಂಜುನಾಥ್.ಎನ್.ಆರ್  ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: