ಕರ್ನಾಟಕ

ಅಂತರ್ಜಲ ಸಂರಕ್ಷಣೆಗೆ ಹೆಚ್ಚಿನ ಗಮನ ಹರಿಸಿ: ಡಿ.ಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್

ಹಾಸನ (ಮೇ 4): ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಅರಸೀಕೆರೆ ತಾಲ್ಲೂಕಿನಲ್ಲಿ ಅಂತರ್ಜಲ ಸಂರಕ್ಷಣೆಗೆ ಪರಿಣಾಮಕಾರಿ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್‍ತಿಳಿಸಿದರು.

ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಶುಕ್ರವಾರ ನಡೆದ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಅರಸೀಕೆರೆ ತಾಲ್ಲೂಕಿನಲ್ಲಿ ಜಲ ಮರುಪೂರ್ಣಗೆ ಹೆಚ್ಚು ಗಮನ ಹರಿಸಿ ಎಂದರು. ಅಂತರ್ಜಲ ಅಭಿವೃದ್ದಿ ಮತ್ತು ನಿರ್ವಹಣೆ ವಿನಿಮಯ ಹಾಗೂ ನಿಯಂತ್ರಣಕ್ಕಾಗಿ 43 ಅಂತರ್ಜಲ ಅತಿ ಬಳಕೆ ತಾಲ್ಲೂಕುಗಳನ್ನು ಅಧಿಸೂಚಿಸಿದ್ದು ಸದರಿ ಅಧಿಸೂಚನೆಯ ದಿನಾಂಕ 01.01.2018 ಕ್ಕೆ ಜಾರಿಗೆ ಬರುವಂತೆ ಅಧಿಸೂಚಿಸಲಾಗಿದೆ.

ಅದರಲ್ಲಿ ಹಾಸನ ಜಿಲ್ಲೆಯಲ್ಲಿ ಅರಸೀಕೆರೆ ತಾಲ್ಲೂಕು ಅತಿ ಬಳಕೆ ಪ್ರದೇಶವಾಗಿದ್ದು ಕರ್ನಾಟಕ ಅಂತರ್ಜಲ ಅಭಿವೃದ್ದಿ ಮತ್ತು ನಿರ್ವಹಣೆಯ ವಿನಿಮಯ ಹಾಗೂ ನಿಯಂತ್ರಣ ಅಧಿನಿಯಮ 2011ರ ಕಲಂ11ರಡಿ ತಿಳಿಸಿರುವಂತೆ ಅಧಿಸೂಚಿತ ಪ್ರದೇಶದಲ್ಲಿ ಯಾವುದೇ ಉದ್ದೇಶಕ್ಕಾಗಿ ಬಾವಿ, ಕೊಳವೆಬಾವಿಯನ್ನು ಕೊರೆದು ಅಂತರ್ಜಲವನ್ನು ತೆಗೆಯಲು ಮತ್ತು ಬಳಸಲು ಅಧಿಸೂಚಿತ ಅತಿ ಬಳಕೆ ಪ್ರದೇಶವಾದ ಅರಸೀಕೆರೆ ತಾಲ್ಲೂಕಿನಲ್ಲಿ ನಿಯೋಜಿತ ಸಮಿತಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇದೇ ಸಂದರ್ಭ ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಅರಸೀಕೆರೆ ತಾಲ್ಲೂಕಿನಲ್ಲಿ ಟಾಸ್ಕ್‍ಪೋರ್ಸ್ 1ಮತ್ತು 2ರಲ್ಲಿ ಅತಿ ತುರ್ತಾಗಿ ಕುಡಿಯುವ ನೀರಿನ ಅಗತ್ಯತೆಗೆ ಕೊರೆಸಲಾದಂತಹ 199 ಕೊಳವೆ ಬಾವಿಗಳಿಗೆ ಘಟಿನೋತ್ತರ ಮಂಜೂರಾತಿಯನ್ನು ನೀಡಲಾಯಿತು.

ಇದೇ ರೀತಿ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೈಸೂರು ಮಿನರಲ್ಸ್ ವತಿಯಿಂದ ಕೋರಿರುವಂತಹ ಕೊಳವೆಬಾವಿಗಳಿಗೆ ಸಂಬಂಧಪಟ್ಟಂತೆ ಷರತ್ತುಬದ್ದ ಅನುಮತಿ ನೀಡಲು ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿಯವರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಸೂಚಿಸಿದರು.

ಅತೀ ಹೆಚ್ಚು ಅಂತರ್ಜಲ ಬಳಸುವ 43 ತಾಲ್ಲೂಕುಗಳಲ್ಲಿ ಅರಸೀಕೆರೆ ತಾಲ್ಲೂಕು ಒಂದಾಗಿದ್ದು, ನವೀಕರಣ ಪಡೆಯದೆ ಇರುವಂತಹ ಕೊಳವೆಬಾವಿಗಳ ಕೊರೆಯುವ ಯಂತ್ರಗಳ ಕಾರ್ಯಾಚರಣೆ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಮತ್ತು ಯಾರಾದರೂ ಖಾಸಗಿ ವತಿಯಿಂದ ಗಮನಕ್ಕೆ ಬಾರದಂತೆ ಕೊಳವೆಬಾವಿ ಕೊರೆಯದ ರೀತಿಯಲ್ಲಿ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿಗಳಾದ ಪರಪ್ಪಸ್ವಾಮಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗದ ಅಭಿಯಂತ ಕಾರ್ಯಪಾಲಕರಾದ ಆನಂದ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಸುಧಾ ಮತ್ತಿತರರು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: