ದೇಶಪ್ರಮುಖ ಸುದ್ದಿ

ನೋಟ್ ಬ್ಯಾನ್ – ಅತಿ ದೊಡ್ಡ ಹಗರಣ: ಮಾಜಿ ಪಿಎಂ ಮನಮೋಹನ್ ಸಿಂಗ್ ವಾಗ್ದಾಳಿ

ನವದೆಹಲಿ (ಮೇ 6): ಪ್ರಧಾನಿ ನರೇಂದ್ರ ಮೋದಿ ಅವರ ಕಳೆದ 5 ವರ್ಷಗಳ ಆಡಳಿತವನ್ನು ಆಘಾತಕಾರಿ ಮತ್ತು ವಿನಾಶಕಾರಿ ಎಂದು ಬಣ್ಣಿಸಿರುವ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌, ಯುವಕರು, ರೈತರು, ಉದ್ದಿಮೆದಾರರು ಹಾಗೂ ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಗಳನ್ನು ಹಾಳು ಮಾಡುವ ಹಾಗೂ ಆಘಾತಕಾರಿ ನೀತಿಗಳನ್ನು ಜಾರಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿಗೆ ಮತದಾರರು ಹೊರಹೋಗುವ ಬಾಗಿಲು ತೋರಿಸಬೇಕು ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ಕರೆಕೊಟ್ಟಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಡಾ. ಸಿಂಗ್‌ ಅವರು, ದೇಶಾದ್ಯಂದ ಮೋದಿ ಅವರ ಪರವಾದ ಅಲೆ ಇದೆ ಎಂಬ ಭಾವನೆಯನ್ನು ತಳ್ಳಿ ಹಾಕಿದರು. ಅಲ್ಲದೆ, ಸಮಗ್ರ ಅಭಿವೃದ್ಧಿಯಲ್ಲಿ ನಂಬಿಕೆ ಇಡದಿರುವ ಹಾಗೂ ಕೇವಲ ರಾಜಕೀಯ ಹಿತಾಸಕ್ತಿ ಸಾಧನೆಗಾಗಿ ಕೆಲಸ ಮಾಡುವ ಸರ್ಕಾರವನ್ನು ಹೊರದಬ್ಬಲು ಜನತೆ ನಿರ್ಧಾರ ಮಾಡಿದ್ದಾರೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯಲ್ಲಿ ಹಲವು ಭ್ರಷ್ಟಾಚಾರಗಳು ನಡೆದಿವೆ ಎಂದು ಟೀಕಿಸಿದ ಡಾ. ಸಿಂಗ್‌, ಅಂಥವುಗಳಲ್ಲಿ ನೋಟು ಅಪನಗದೀಕರಣವೂ ಒಂದಾಗಿದ್ದು, ಸ್ವತಂತ್ರ ಭಾರತದ ಅತಿದೊಡ್ಡ ಭ್ರಷ್ಟಾಚಾರವಿದು. ಪುಲ್ವಾಮಾ ದಾಳಿ, ಪಠಣ್‌ ಕೋಟ್‌ ದಾಳಿ ಹಾಗೂ ಈ ಸಂಬಂಧ ತನಿಖೆಗೆ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಅನ್ನು ಆಹ್ವಾನಿಸಿದ್ದರು. ಇದು ಮೋದಿ ಅವರ ನೀತಿಗಳ ವೈಫಲ್ಯವಲ್ಲವೇ ಎಂದು ಪ್ರಶ್ನಿಸಿದರು.

ಕಳೆದ ಐದು ವರ್ಷಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ 1000 ಬಾರಿ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದೆ. ಅಲ್ಲದೆ, ಈ ಭಾಗದಲ್ಲಿ ಉಗ್ರರ ದಾಳಿಯು ಶೇ.176 ಪ್ರಮಾಣದಷ್ಟು ಏರಿಕೆಯಾಗಿದೆ. ಇದೆಲ್ಲವೂ ಮೋದಿ ಅವರ ವೈಫಲ್ಯತೆಯನ್ನು ತೋರಿಸುವುದಿಲ್ಲವೇ. ಒಂದು ಸುಳ್ಳನ್ನು ನೂರು ಬಾರಿ ಹೇಳಿದರೂ ಸುಳ್ಳು ಸತ್ಯವಾಗುವುದಿಲ್ಲ ಎಂದು ಡಾ. ಸಿಂಗ್‌ ಹೇಳಿದರು. (ಎನ್.ಬಿ)

Leave a Reply

comments

Related Articles

error: