ಕರ್ನಾಟಕಪ್ರಮುಖ ಸುದ್ದಿ

ಅಕ್ರಮ ಮರಳು ಸಾಗಾಣಿ ನಿಯಂತ್ರಣಕ್ಕೆ ಕ್ರಮ: ಹಾಸನ ಜಿಲ್ಲಾಧಿಕಾರಿ ಸೂಚನೆ

ಹಾಸನ (ಮೇ 6): ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿಯಂತ್ರಿಸಲು ಚೆಕ್ ಪೋಸ್ಟ್‍ಗಳನ್ನು ಬಲಗೊಳಿಸುವುದರ ಜೊತೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ವಿಶೇಷ ನಿಗಾವಹಿಸಲು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು (ಸೋಮವಾರ) ನಡೆದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ, ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಹಾಗೂ ಜಿಲ್ಲಾ ಕ್ರಷರ್ ಲೈಸೆನ್ಸಿಂಗ್ ಮತ್ತು ನಿಯಂತ್ರಣಾ ಪ್ರಾಧಿಕಾರ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಖನಿಜ ಸಂಪನ್ಮೂಲಗಳ ಅಕ್ರಮ ಸಾಗಾಟ ಮತ್ತು ಬಳಕೆ ಸಂಪೂರ್ಣ ನಿಯಂತ್ರಣಗೊಳ್ಳಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಗಳು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಈವರೆಗೆ ಪರವಾನಗಿ ಪಡೆದಿರುವ ಮರಳು ನಿಕ್ಷೇಪಗಳಲ್ಲಿ ಆಗಿರುವ ನಿಯಮ ಉಲ್ಲಂಘನೆಗಳ ವಿರುದ್ದ ಕ್ರಮ ಕೈಗೊಳ್ಳಬೇಕು, ಒಂದೇ ಪರವಾನಗಿ ಬಳಸಿ ಹಲವು ಟ್ರಿಪ್‍ಗಳ ಸಾಗಾಟ, ಜಿ.ಪಿ.ಎಸ್. ದುರ್ಬಳಕೆ ಪ್ರಕರಣಗಳನ್ನು ಪಟ್ಟಿ ಮಾಡಿ ಉದ್ದೇಶ ಪೂರ್ವಕ ತಪ್ಪು ಎಸಗಿರುವವರ ವಾಹನಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಸಾರಿಗೆ ಇಲಾಖೆಗೆ ವರದಿ ನೀಡಿ ಅಲ್ಲಿಯೂ ನಿಯಮಾನುಸಾರ ಪ್ರಕರಣ ದಾಖಲಿಸಿ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಎಲ್ಲಾ ಮರಳು ನಿಕ್ಷೇಪ ಮಾಲಿಕರು ನಿಯಮ ಪಾಲನೆ ಮಾಡಬೇಕು. ಅಕ್ರಮಕ್ಕೆ ಪ್ರೋತ್ಸಾಹ ನೀಡಿದರೆ ಅವರ ಪರವಾನಗಿ ರದ್ದು ಪಡಿಸಬೇಕಾಗುತ್ತದೆ. ಅದೇ ರೀತಿ ಮರಳು ಸಾಗಾಟ ಪರ್ಮಿಟ್ ವಿರತಣೆ ವೇಳೆ ತಪ್ಪುಗಳಾಗದಂತೆ ಎಚ್ಚರವಹಿಸಿ ಎಂದು ತಿಳಿಸಿದರು.

ಇದೇ ರೀತಿ ಅಕ್ರಮ ಕಲ್ಲು ಗಣಿಗಾರಿಕೆ ನಿಯಮಬಾಹಿರ ಸಾಗಾಟ ನಡೆಯಬಾರದು ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ರಾಜಧನ ಮತ್ತಿತರ ತೆರಿಗೆ ಹಣ ಸಮರ್ಪಕವಾಗಿ ಪಾವತಿಯಾಗಬೇಕು. ಇದಕ್ಕೆ ಲೋಕೋಪಯೋಗಿ ಇಲಾಖೆ, ಗ್ರಾಮಿಣಾಭಿವೃದ್ಧಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳು ಸಹಕಾರ ನೀಡಬೇಕು. ಬೇರೆ ಜಿಲ್ಲೆಗಳಿಂದ ಸರಬರಾಜಾಗುತ್ತಿರುವ ಜಿಲ್ಲೆ ಸಾಗಾಣಿಕೆ ವೇಳೆ ಹೆಚ್ಚುವರಿ ಬಾರದ ಸಾಮಗ್ರಿ ಸಾಗಾಟವಾಗುತ್ತಿದ್ದು ಅದಕ್ಕೆ ಇಲಾಖೆಗಳು ರಾಜಧನಗಳ 5 ಪಟ್ಟು ಹೆಚ್ಚು ದಂಡವನ್ನು ಕಡಿತಗೊಳಿಸಿ ಸರ್ಕಾರಕ್ಕೆ ಪಾವತಿಯಾಗುವವರೆಗೆ ಸಹಕಾರ ನೀಡಬೇಕು ಎಂದರು.

ಅನಧೀಕೃತ ಮರಳು ಗಣಿಗಾರಿಕೆ, ಸಂಗ್ರಹಣೆ, ಸಾಗಾಣಿಕೆ ತಡೆಗಟ್ಟುವ ನಿಟ್ಟಿನಲ್ಲಿ 17 ಚೆಕ್‍ಪೋಸ್ಟ್‍ಗಳು ಹಾಗೂ ಚಾಲಿತ ದಳದ ಪ್ರತ್ಯೇಕ ತಂಡಗಳನ್ನಾಗಿ ಮಾಡಿಕೊಂಡು ಕ್ರಮ ಕೈಗೊಳ್ಳಲು ಜಿಲ್ಲಾಮಟ್ಟದ ಸ್ಕ್ವಾಡ್‍ಗಳು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಬೇಲೂರು, ಸಕಲೇಶಪುರ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣಿಕೆ ತಡೆಗಟ್ಟಲು ಸಿಬ್ಬಂದಿಗಳಿಗೆ ಓಡಾಡಲು ವಾಹನ, ಚೆಕ್‍ಪೋಸ್ಟ್‍ಗಳಿಗೆ ಸಿಸಿಟಿವಿ, ಟೇಬಲ್, ಕುರ್ಚಿ ಮತ್ತಿತರ ಸಾಮಾಗ್ರಿಗಳನ್ನು ನೀಡಬೇಕು ಎಂದರು.

ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಚೆಕ್‍ಪೋಸ್ಟ್ ಸೇವೆಗೆ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಎಲ್ಲಾ ಸರ್ಕಾರಿ ಕಾಮಗಾರಿಗಳಿಗೆ ಉಪಯೋಗಿಸುತ್ತಿರುವ ಉಪಖನಿಜಗಳಾದ ಕಟ್ಟಡಕಲ್ಲು, ಜಿಲ್ಲಿ, ಎಂ.ಸ್ಯಾಂಡ್, ಮಣ್ಣು, ಮುರ್ರಂ ಇನ್ನಿತ್ಯಾದಿ ಉಪಖನಿಜಗಳನ್ನು ಕಲ್ಲುಗಣಿ ಗುತ್ತಿಗೆ, ಕ್ರಷರ್ ಘಟಕದಾರರಿಂದ ಪರವಾನಗಿ ಪಡೆದು ಸಾಗಾಣಿಕೆ ಮಾಡಿಕೊಳ್ಳಲು ಷರತ್ತು ವಿಧಿಸುವುದು ತಪ್ಪಿದ್ದಲ್ಲಿ ಆರ್ಥಿಕ ನಷ್ಟ ಅಂದರೆ ಡಿ.ಎಂ.ಎಫ್, ಟಿ.ಸಿ.ಎಸ್ ಇತರೆ ಶುಲ್ಕಗಳಿಗೆ ಕಾಮಗಾರಿ ಗುತ್ತಿಗೆ ನೀಡಿರುವ ಇಲಾಖೆ ಮುಖ್ಯಸ್ಥರೇ ಹೊಣೆಗಾರನ್ನಾಗಿ ಮಾಡಲಾಗುವುದು ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಚೇತನ್ ಸಿಂಗ್ ರಾಥೋಡ್ ಮಾತನಾಡಿ ಜಿಲ್ಲೆಯಲ್ಲಿ ಯಾವುದೇ ಅಕ್ರಮಗಳು ಮರಳು ಸಾಗಾಣಿಕೆ ನಡೆಯದಂತೆ ಎಚ್ಚರವಹಿಸಿ ಒಂದು ವೇಳೆ ಮರಳು ಸಾಗಾಣಿಕೆಯಲ್ಲಿ ಅಕ್ರಮಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ವತಿಯಿಂದ ಎಲ್ಲಾ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.

ಜಿ.ಪಿ.ಎಸ್ ಪರವಾನಿಗೆ ನಿಯಮಾನುಸಾರ ಜಿಪಿಎಸ್ ಅಳವಡಿಸದೇ ಇರುವ ವಾಹನಗಳಿಗೆ ಪರವಾನಗಿ ನೀಡಿರುವ ಹಾಗೂ ಜಿಪಿಎಸ್ ಸಾಧನದ ಸಂಪರ್ಕವನ್ನು ಕಡಿತಗೊಳಿಸಿರುವ ಬಗ್ಗೆ ಮತ್ತು ಮರಳು ಪರವಾನಗಿ ಪಡೆಯದೇ ಮರಳು ದಾಸ್ತಾನು ಪ್ರದೇಶದಲ್ಲಿ ಸಂಚರಿಸುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಚೇತನ್ ಸಿಂಗ್ ರಾಥೋಡ್ ಅವರು ತಿಳಿಸಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ಶ್ರೀನಿವಾಸ್ ಅವರು ಮರಳು ನಿಕ್ಷೇಪ ಹಾಗೂ ಕ್ರಷರ್ ಲೈಸನ್ಸಿಂಗ್‍ನ ಬಗ್ಗೆ ವಿವರ ನೀಡಿದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಪ್ರಿಯಾಂಗ, ಉಪವಿಭಾಗಾಧಿಕಾರಿಗಳಾದ ಡಾಹೆಚ್.ಎಲ್.ನಾಗರಾಜು, ಕವಿತಾ ರಾಜರಾಂ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿಗಳಾದ ಪರಪ್ಪಸ್ವಾಮಿ ಇತರರು ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: