ದೇಶಪ್ರಮುಖ ಸುದ್ದಿ

ಟೋಲ್ ನಿರ್ಧಾರದ ಬಗ್ಗೆ ಬಿಎಸ್‍ವೈಗೆ ಕೇಳಿ! ಸಚಿವ ಎಚ್.ಡಿ ರೇವಣ್ಣ

ಬೆಂಗಳೂರು (ಮೇ 7): ರಾಜ್ಯ ಹೆದ್ದಾರಿಗಳಿಗೆ ಟೋಲ್‌ ವಿಧಿಸುವ ನಿರ್ಣಯ ಮಾಡಿ ಅಧಿಕೃತ ರಾಜ್ಯ ಪತ್ರ ಹೊರಡಿಸಿದ್ದು ಹಿಂದಿನ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಸರ್ಕಾರ. ಹೀಗಾಗಿ ಟೋಲ್‌ ಬಗ್ಗೆ ಯಡಿಯೂರಪ್ಪ ಅವರನ್ನೇ ಪ್ರಶ್ನಿಸಬೇಕು ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹೆದ್ದಾರಿಗಳಿಗೆ ಟೋಲ್‌ ವಿಧಿಸುವ ನಿರ್ಧಾರ ಕೈಗೊಂಡಿದ್ದು ಬಿ.ಎಸ್‌. ಯಡಿಯೂರಪ್ಪ ಅವರ ನೇತೃತ್ವದ ಹಿಂದಿನ ಸರ್ಕಾರ. ಈ ಬಗ್ಗೆ 2011ರಲ್ಲಿ ನಿರ್ಣಯ ಮಾಡಿ ಅಧಿಕೃತ ರಾಜ್ಯ ಪತ್ರ ಹೊರಡಿಸಿದ್ದರು. ಇದರಡಿ 2009-13ರ ಅವಧಿಯಲ್ಲಿ ಹುಡ್ಕೊ, ವಿಶ್ವ ಬ್ಯಾಂಕ್‌ ಸೇರಿದಂತೆ ವಿವಿಧೆಡೆ ಮೂರು ಸಾವಿರ ಕೋಟಿ ರು. ಸಾಲ ಪಡೆಯಲಾಗಿದೆ.

ಒಟ್ಟು 17 ರಸ್ತೆ ಅಭಿವೃದ್ಧಿಪಡಿಸುತ್ತಿದ್ದು, ಏಳು ರಸ್ತೆಗಳಿಗೆ ಟೋಲ್‌ ವಿಧಿಸಲು ಟೆಂಡರ್‌ ನೀಡಲಾಗಿದೆ. ರಸ್ತೆ ತೆರಿಗೆ ಕಟ್ಟುತ್ತಿದ್ದರೂ ಪುನಃ ರಾಜ್ಯ ಹೆದ್ದಾರಿಗಳಿಗೂ ತೆರಿಗೆ ವಿಧಿಸುತ್ತಿರುವುದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ರಸ್ತೆಗಳ ನಿರ್ವಹಣೆಗೆ ಹಣ ಬೇಕಾಗುತ್ತದೆ. ಒಂದು ವೇಳೆ ಟೋಲ್‌ ಬಗ್ಗೆ ಯಾವುದಾದರೂ ಪ್ರಶ್ನೆಗಳಿದ್ದರೆ ಬಿ.ಎಸ್‌. ಯಡಿಯೂರಪ್ಪ ಅವರನ್ನು ಪ್ರಶ್ನಿಸಿ ಎಂದರು.

ಮೈಸೂರು ರಸ್ತೆಯಲ್ಲಿ ಸರ್ವೀಸ್ ರಸ್ತೆ :

ಬಹುತೇಕ ರಾಜ್ಯ ಹೆದ್ದಾರಿಗಳಿಗೆ ಸರ್ವೀಸ್ ರಸ್ತೆ ಇಲ್ಲ. ಟೋಲ್‌ ಪಾವತಿಸಲು ಸಾಧ್ಯವಾಗದವರು ಶುಲ್ಕ ಪಾವತಿಸದೆ ಸರ್ವೀಸ್ ರಸ್ತೆಯಲ್ಲಿ ಓಡಾಡಲು ಅವಕಾಶ ನೀಡಬೇಕು. ಹೀಗಾಗಿ ನಾವು ಬೆಂಗಳೂರು-ಮೈಸೂರು ರಸ್ತೆ ಅಭಿವೃದ್ಧಿ ವೇಳೆ 2 ಪಥದ ಸರ್ವೀಸ್ ರಸ್ತೆ ನಿರ್ಮಿಸುತ್ತಿದ್ದೇವೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹೇಳಿದರು.

ಚುನಾವಣೆಗೆ ಹಣ ಸಂಗ್ರಹಿಸಿಲ್ಲ :

ಲೋಕೋಪಯೋಗಿ ಇಲಾಖೆಯಲ್ಲಿ ಚುನಾವಣಾ ಹಣ ಸಂಗ್ರಹಕ್ಕೆ 1400 ಕೋಟಿ ರು. ಮೊತ್ತದ ಹಣವನ್ನು ಕಾಮಗಾರಿ ಮುಗಿಯದೆ ಬಿಡುಗಡೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ನಾನು ಒಂದು ರು. ತುಂಡು ಗುತ್ತಿಗೆಯನ್ನೂ ನೀಡಿಲ್ಲ. ಯಡಿಯೂರಪ್ಪ ಅವರು ತಮ್ಮ ಆರೋಪವನ್ನು ಸಾಬೀತು ಮಾಡಲಿ ಎಂದು ರೇವಣ್ಣ ಸವಾಲು ಎಸೆದರು.

ಬಿಡಿಎ ಮುಖ್ಯ ಇಂಜಿನಿಯರ್‌ ಮೇಲಿನ ಹಗರಣದ ಆರೋಪದ ಬಗ್ಗೆ ಮಾತನಾಡಿದ ಅವರು, ಅವರು ಯಾರು ಎಂಬುದೇ ನನಗೆ ಗೊತ್ತಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗೆ ಮಾತ್ರ ನಾನು ಉತ್ತರಿಸುತ್ತೇನೆ. ಬಿಡಿಎ ಬೆಂಗಳೂರು ನಗರಾಭಿವೃದ್ಧಿ ಇಲಾಖೆಗೆ ಬರುತ್ತದೆ. ಪರಮೇಶ್ವರ್‌ ಅವರನ್ನು ಕೇಳಿ ಎಂದರು. (ಎನ್.ಬಿ)

Leave a Reply

comments

Related Articles

error: