ಮೈಸೂರು

ದಸರಾ ಆಹಾರ ಮೇಳ: ಬಿದಿರು ಬಿರಿಯಾನಿ, ಗೆಣಸು-ಜೇನುತುಪ್ಪ ಜತೆಗೆ ಬಿದಿರಕ್ಕಿ ಪಾಯಸ, 16 ವಿವಿಧ ವಿಶೇಷ ತಿನಿಸುಗಳು

ನವರಾತ್ರಿ ಸಂಭ್ರಮ ಹೆಚ್ಚಿಸಲಿದೆ ಆಹಾರ ಮೇಳ

ಬಿದಿರು ಬಿರಿಯಾನಿ, ಗೆಣಸು-ಜೇನುತುಪ್ಪ ಜತೆಗೆ ಬಿದಿರಕ್ಕಿ ಪಾಯಸದಂತಹ 16 ವೆರೈಟಿ ಸ್ಪೆಷಲ್ ತಿನಿಸುಗಳ ಸ್ವಾದವನ್ನು ಒಳಗೊಂಡ ಆದಿವಾಸಿ ಬುಡಕಟ್ಟು ಜನಾಂಗದ ಖಾದ್ಯ ಈ ಬಾರಿ ನವರಾತ್ರಿ ಸಂಭ್ರಮದೊಂದಿಗೆ ಅತಿ ಕಡಿಮೆ ಬೆಲೆಯಲ್ಲಿ ಸವಿಯಬಹುದಾಗಿದೆ.

ಅ.1 ರಿಂದ ಒಂಬತ್ತು ದಿನಗಳ ಕಾಲ ನವರಾತ್ರಿ ಸಂಭ್ರಮದಲ್ಲಿ ನಡೆಯುವ ಆಹಾರ ಮೇಳದಲ್ಲಿ ಇಂತಹದೊಂದು ವೆರೈಟಿ ಖಾದ್ಯವನ್ನು ಜನರಿಗೆ ಉಣಬಡಿಸಲು ರಾಜ್ಯ ಆದಿವಾಸಿ ಬುಡಕಟ್ಟು ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಆದಿವಾಸಿ ಅಧ್ಯಯನ ಕೇಂದ್ರದ ಮಂದಿ ಇಂದಿನಿಂದ ಸಕಲ ಸಿದ್ಧತೆ ನಡೆಸಿಕೊಂಡಿದೆ. ಸಂಪ್ರದಾಯದಂತೆ ಮಂಗಳವಾರ ಆಹಾರ ಮೇಳ ನಡೆಯುವ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಬಿದಿರಿನ ಬೊಂಬಿಗೆ ಜಿಲ್ಲಾಧಿಕಾರಿ ಡಿ. ರಂದೀಪ್ ಪೂಜೆ ನೇರವೇರಿಸುವ ಮೂಲಕ ಬುಡಕಟ್ಟು ಆಹಾರದ ಸಿದ್ಧತೆಗೆ ಚಾಲನೆ ನೀಡಿದರು.

ಬುಡಕಟ್ಟು ಜನಾಂಗಕ್ಕೆ ಬಿದಿರೇ ದೈವ ಹಾಗಾಗಿ ಈ ನಿಟ್ಟಿನಲ್ಲಿ ಬಿದಿರಿನ ಚಪ್ಪರದೊಳಗೆ ಹೆಚ್ಚಾಗಿ ಬಿದಿರಿನ ಅಡುಗೆಯ ವಿಶೇಷ ಖಾದ್ಯಗಳಿರುತ್ತವೆ. ಅದಕ್ಕಾಗಿಯೇ ಅವರು ಖಾದ್ಯ ಸಿದ್ಧತೆಗೂ ಮುನ್ನ ಬಿದಿರು ಕಂಬಕ್ಕೆ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಆಹಾರ ಇಲಾಖೆ ಉಪನಿರ್ದೇಶಕ ಕಾ. ರಾಮಶ್ವೇರಪ್ಪ, ಕಳೆದ ಬಾರಿ 135 ಮಳಿಗೆಗಳನ್ನು ನೀಡಲಾಗಿತ್ತು. ಆದರೆ, ಈ ಬಾರಿ 95 ಮಳಿಗೆ ನಿರ್ಮಿಸಲು ಉದ್ದೇಶಿಸಲಾಗಿದೆ. ಒಂದು ಮಳಿಗೆಗೆ 1500 ರೂ. ಬಾಡಿಗೆ ಪಡೆಯಲು ನಿರ್ಧರಿಸಿದ್ದು, ಇನ್ನೂ ಅಂತಿಮವಾಗಿಲ್ಲವೆಂದು ನುಡಿದರು.

18 ವಿಭಾಗದ ಮಳಿಗೆಗಳನ್ನು ಒಂಭತ್ತು ದಿನದ ಆಹಾರ ಮೇಳದಲ್ಲಿ ಕಾಣಬಹುದಾಗಿದೆ. ಜಾನಪದದಿಂದ ಜಾಗತೀಕರಣದವರೆಗಿನ ಎಲ್ಲಾ ತಿಂಡಿಗಳನ್ನು ಒಂದೆ ಸೂರಿನಡಿ ಕಲ್ಪಿಸುವ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿದೆ. ಸಿರಿಧಾನ್ಯ ಆಹಾರ, ಸಾವಯವ ರೀತಿಯ ಹಸಿರು ಆಹಾರ, ಬುಡಕಟ್ಟು ಆಹಾರವೆಂಬ ಮೂರು ವಿಭಾಗಗಳನ್ನು ಕಾಣಬಹುದಾಗಿದ್ದು, ಇದಕ್ಕಾಗಿ 26 ಲಕ್ಷವನ್ನು ದಸರಾ ಸಮಿತಿಯಿಂದ ಆಹಾರಮೇಳ ಉಪ ಸಮಿತಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಒಟ್ಟಾರೆ ಈ ಬಾರಿ ಆದಿವಾಸಿ ಬುಡ್ಡ ಖಾದ್ಯ ಉಣಬಡಿಸಲು ಸಕಲ ತಯಾರಿ ಹಮ್ಮಿಕೊಳ್ಳುವ ಸಿದ್ಧತಾ ಮನೆ ಕಾರ್ಯಕ್ಕೆ ಜಿಲ್ಲಾಧಿಕಾರಿ ದಿ. ರಂದೀಪ್ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ರಾಜ್ಯ ಆದಿವಾಸಿ ಬುಡಕಟ್ಟು ಪರಿಷತ್ ಅಧ್ಯಕ್ಷ ಕೃಷ್ಣಯ್ಯ ತಮ್ಮ ಖಾದ್ಯಗಳ ಬಗ್ಗೆ ತಿಳಿಸಿಕೊಟ್ಟರು. ಜಿಲ್ಲಾ ಪಂಚಾಯಿತಿ ಸಿಇಓ ಶಿವಶಂಕರ್, ಮೀನು ಮಾರಾಟಗಾರರ ಸಂಘದ ಅಧ್ಯಕ್ಷ ಮಾದೇಗೌಡ ಮೊದಲಾದವರು ಉಪಸ್ಥಿತರಿದ್ದರು.

ಆದಿವಾಸಿ ಮೆನುವಿನಲ್ಲಿ ಏನಿದೆ?

ಬಿದಿರು ಬಿರಿಯಾನಿ, ಗೆಣಸು-ಜೇನುತುಪ್ಪ, ಬಿದಿರಕ್ಕಿ ಪಾಯಸ, ನಳ್ಳಿ ಸಾರು, ಕಾಡುಸೊಪ್ಪು, ಕರಳೇ ಪಲ್ಯ, ಮುದ್ದೆ ಉಪ್ಸಾರು, ರಾಗಿಮುದ್ದೆ, ಹುರಳಿಕಟ್ಟು ಸೇರಿದಂತೆ ಮೊದಲಾದ 16 ಬಗೆಯ ಆದಿವಾಸಿ ಸಂಪ್ರದಾಯದ ರುಚಿಕರ ಹಾಗೂ ನೈಸರ್ಗಿಕ ತಿನಿಸುಗಳನ್ನು ತಯಾರು ಮಾಡಲು ಇಂದಿನಿಂದ ಎಲ್ಲಾ ರೀತಿಯಲ್ಲೂ ಸಿದ್ಧತೆ ನಡೆಸಲಾಗಿದೆ.
ಇವೆಲ್ಲವನ್ನೂ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಅತಿ ಕಡಿಮೆ ಬೆಲೆಗೆ ನೀಡಲಾಗುವುದು. 2 ಒಲೆಯಲ್ಲಿ ಒಮ್ಮೆಗೆ 10 ಪ್ಲೇಟ್ ಬಿರಿಯಾನಿ ತಯಾರು ಮಾಡಲಾಗುವುದು. ಒಮ್ಮೆಲೆ ಐದು ಅಡಿ ಉದ್ದದ ಬಿದಿರನ್ನು ಬೇಯಿಸಲು ಅರ್ಧತಾಸು ಬೇಕು. ಹಾಗಾಗಿ ಬಿದಿರು ಬಿರಿಯಾನಿ ತಯಾರಿಸಲು ಸಮಯ ಬೇಕಾಗುವ ಹಿನ್ನಲೆಯಲ್ಲಿ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಪೂರೈಸಲು ಆಗುವುದಿಲ್ಲ. ಹಾಗಾಗಿ ಈ ಬಾರಿ ಅದಕ್ಕೆ ಸಕಲ ತಯಾರಿ ಹಮ್ಮಿಕೊಂಡಿರುವುದಾಗಿ ಹೇಳಿದರು.

ಅಡುಗೆ ತಯಾರಿ ಹೇಗೆ?

ಬಿದಿರು ಬಿರಿಯಾನಿ ಇದಕ್ಕೆಲ್ಲಾ ನಾಗರಹೊಳೆ ಹಾಗೂ ಕೇರಳದಿಂದ ಬಿದಿರಿನ ಅಕ್ಕಿಯನ್ನು ತಂದು ಅದನ್ನು ಬಿದಿರಿನಲ್ಲಿ ಹಾಕಲಾಗುವುದು. ಜತೆಗೆ ಬೇಯಿಸಿಕೊಂಡ ಮಾಂಸ ಹಾಗೂ ಮಸಾಲೆಗಳೆಲ್ಲವನ್ನೂ ಕೊರೆದ ಬಿದಿರಿಗೆ ತುಂಬಿ ಅದನ್ನು ಮುಚ್ಚಿ ನಿಲ್ಲಿಸಿ ಅದನ್ನು ಬೆಂಕಿ ಹಾಕಿ ಬೇಯಿಸಲಾಗುವುದು. ಸುಮಾರು ಅರ್ಧ ತಾಸು ಬೆಂದ ಬಿದಿರನ್ನು ಬಳಿಕ ಹೊರಗೆ ತೆಗೆದು ಅದರೊಳಗೆ ಎಲ್ಲವೂ ಬೆಂದಿರುತ್ತದೆ ಆಗ ನಿಮ್ಮ ಕಣ್ಣ ಮುಂದೆ ಸಿಗುವುದೇ ಬಿದಿರಿನ ಬಿರಿಯಾನಿ. ಇದೇ ರೀತಿ ಎಲ್ಲವನ್ನೂ ಬಿದಿರಿನಲ್ಲೇ ಬೇಯಿಸುವುದು ಆದಿವಾಸಿಗಳ ವಿಶೇಷ ಅಭಿರುಚಿ. ಅದಕ್ಕೆಂದೆ ಈ ಬಾರಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿ ಮುಂಚಿತವಾಗಿ ಹೆಚ್ಚಿನ ಬಿದಿರನ್ನು ತರಿಸಿಕೊಳ್ಳಲಾಗಿದೆ.

Leave a Reply

comments

Related Articles

error: