ಮೈಸೂರು

ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‍ನಲ್ಲಿ 2019-20ನೇ ಸಾಲಿನಲ್ಲಿ ಡಿಪ್ಲೊಮಾ ತರಗತಿಗಳಲ್ಲಿ ಅಧ್ಯಯನಕ್ಕೆ ಅರ್ಜಿ ಆಹ್ವಾನ : ಜೂ.15ಕೊನೆಯ ದಿನ

ಮೈಸೂರು,ಮೇ.9:-  ಜೆಎಸ್‍ಎಸ್ ಮಹಾವಿದ್ಯಾಪೀಠದ ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್‍ನಲ್ಲಿ 2019-20ನೇ ಸಾಲಿನಲ್ಲಿ ಡಿಪ್ಲೊಮಾ ತರಗತಿಗಳಲ್ಲಿ ಅಧ್ಯಯನ ಮಾಡಲು ಆಸಕ್ತಿ ಇರುವ ವಿಶೇಷಚೇತನರು ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು   15-06-2019 ಕೊನೆಯ ದಿನ ಎಂದು  ಜೆಎಸ್‍ಎಸ್ ತಾಂತ್ರಿಕ ಶಿಕ್ಷಣ ವಿಭಾಗ ನಿರ್ದೇಶಕರು (ಶೈಕ್ಷಣಿಕ ಮತ್ತು ಆಡಳಿತ)  ಡಾ. ಸಿ ರಂಗನಾಥಯ್ಯ ತಿಳಿಸಿದರು.

ಇಂದು ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್, ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಸಮುಚ್ಚಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿಪ್ಲೊಮಾ ವ್ಯಾಸಂಗದಲ್ಲಿ ಆಸಕ್ತಿ ಇರುವ ವಿಶೇಷಚೇತನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಸಂಸ್ಥೆಯಲ್ಲಿ   ಆರ್ಕಿಟೆಕ್ಚರ್,   ಕಮರ್ಷಿಯಲ್ ಪ್ರಾಕ್ಟಿಸ್,   ಕಂಪ್ಯೂಟರ್ ಸೈನ್ಸ್  ಮತ್ತು  ಎಂಜಿನಿಯರಿಂಗ್,   ಜುವೆಲರಿ ಡಿಸೈನ್ ಮತ್ತು ಟೆಕ್ನಾಲಜಿ,   ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಿಕೇಷನ್ಸ್ ಫಾರ್ ದಿ ವಿಷುವಲಿ ಇಂಪೇರ್ಡ್ ಕೋರ್ಸ್‍ಗಳು ಇವೆ ಎಂದರು.

ದೇಶದ ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. 3 ಬಗೆಯ ಅಂಗವೈಕಲ್ಯದ ಲಕ್ಷಣಗಳಾದ ಮೂಳೆ ಮತ್ತು ಕೀಲು ಅಂಗವಿಕಲತೆ, ಕಿವುಡು ಮತ್ತು ಮೂಗ, ಭಾಗಶಃ ಮತ್ತು ಪೂರ್ಣ ಅಂಧತ್ವ ಇರುವ ವಿದ್ಯಾರ್ಥಿಗಳಿಗೆ ಆರು ವಿಷಯಗಳಲ್ಲಿ ಮೂರು ವರ್ಷ ಅವಧಿಯ ಡಿಪ್ಲೊಮಾ ಕೋರ್ಸ್‍ಗಳನ್ನು ಕಲಿಸಲಾಗುತ್ತಿದೆ.  ಆಂಗ್ಲ ಭಾಷೆ ಬೋಧನಾ ಮಾಧ್ಯಮವಾಗಿದ್ದು, ಪಾಠ, ಪ್ರವಚನಗಳನ್ನು ಸನ್ನೆ ನುಡಿ, ಮೂಕ ಭಾಷೆಗಳಲ್ಲಿ ಬೋಧಿಸಲಾಗುತ್ತಿದೆ. ಪ್ರಸ್ತುತ ಸುಮಾರು 520 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಪ್ರತಿವರ್ಷ 220 ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಇದೆ ಎಂದರು.

ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2012ರಲ್ಲಿ ವಿಶೇಷಚೇತನರ ಸೇವೆಯಲ್ಲಿ “ಅತ್ಯುತ್ತಮ ಸಂಸ್ಥೆ” ಎಂಬ ರಾಷ್ಟ್ರ ಪ್ರಶಸ್ತಿ ನೀಡಿದೆ. ಸಂಸ್ಥೆಯ ವಿಶೇಷ ಹಾಗೂ ಅತ್ಯುತ್ತಮ ಸೇವೆಗಳನ್ನು ಗುರುತಿಸಿ ಕರ್ನಾಟಕ ಸರ್ಕಾರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು 2016ರಲ್ಲಿ “ರಾಜ್ಯಮಟ್ಟದ ಅತ್ಯುತ್ತಮ ಸಂಸ್ಧೆ” ಎಂದು ಗೌರವಿಸಿದೆ. ಸಂಸ್ಥೆಯ ಎಲ್ಲ ಕೋರ್ಸುಗಳಿಗೆ ಕರ್ನಾಟಕ ಸರ್ಕಾರ ಹಾಗೂ ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‍ನಿಂದ ಮಾನ್ಯತೆ ಪಡೆದಿದೆ. ವಿಶಾಲ ಆವರಣ, ಪ್ರಾಕೃತಿಕ ಪರಿಸರ ಹೊಂದಿರುವ ಸಂಸ್ಧೆಯು ವಿಶ್ವ ಆರೋಗ್ಯ ಸಂಸ್ಧೆಯ ನಿಯಮಾನುಸಾರದಲ್ಲೇ ವಿನ್ಯಾಸಗೊಂಡಿದೆ. ಶೈಕ್ಷಣಿಕವಾಗಿ ಮೂಲಭೂತ ಹಾಗೂ ಅವಶ್ಯಕವೆನಿಸುವ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.

ಸುಸಜ್ಜಿತ ಪ್ರಯೋಗಾಲಯ, ಸ್ಮಾರ್ಟ್‍ಕ್ಲಾಸ್ ರೂಮ್, ಗ್ರಂಥಾಲಯ, ವಸತಿನಿಲಯ (ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ) ಬ್ಯಾಂಕ್, ಆರೋಗ್ಯ ಕೇಂದ್ರ, ಉಪಾಹಾರಗೃಹ, ಕ್ರೀಡಾಂಗಣ ಮತ್ತು ಜಿಮ್‍ಖಾನ, ಐಐಪಿ ಸೆಲ್, ಉದ್ಯೋಗ ಮಾಹಿತಿ ಮತ್ತು ತರಬೇತಿ, ವಿಶೇಷ ಸಂಪನ್ಮೂಲ ಕೇಂದ್ರ ಮೊದಲಾದ ವಿದ್ಯಾರ್ಥಿ ಸ್ನೇಹಿ ಸೌಲಭ್ಯಗಳು ಸಂಸ್ಥೆಯಲ್ಲಿ ಇವೆ ಎಂದರು.

ಸಂಸ್ಥೆಯಲ್ಲಿ ಅಧ್ಯಯನ ಮಾಡಿದ ಹಲವಾರು ವಿದ್ಯಾರ್ಥಿ / ವಿದ್ಯಾರ್ಥಿನಿಯರು ಹೆಸರಾಂತ ಖಾಸಗಿ ಕಂಪನಿಗಳಲ್ಲಿ, ಬ್ಯಾಂಕ್, ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು, ಉನ್ನತ ವ್ಯಾಸಂಗ ಮಾಡಲು ಸಂಸ್ಥೆಯು ನೆರವಾಗುತ್ತಿದೆ. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸಿಗುವ ವಿದ್ಯಾರ್ಥಿ ವೇತನ ಪ್ರತಿವರ್ಷ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗುವ ವ್ಯವಸ್ಥೆಯನ್ನು ಸಂಸ್ಥೆ ವತಿಯಿಂದ ಮಾಡಲಾಗುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್‍ಸೈಟ್  www.jsspda.org   ನೋಡಬಹುದು. ಹಾಗೂ ಮೊಬೈಲ್ ನಂ: 9844644937 ದೂರವಾಣಿ: 0821-2548315 ಸಂಪರ್ಕಿಸಬಹುದು ಎಮದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲರಾದ ಬಿ ಇಳಂಗೋವನ್, ಆರ್ಕಿಟೆಕ್ಚರ್ ವಿಭಾಗದ ಹೆಚ್.ಇ.ಚಂದ್ರಶೇಖರ್, ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ನಿರುಪಮಾ, ಶಿವಕುಮಾರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್,.ಎಚ್)

Leave a Reply

comments

Related Articles

error: