ಮೈಸೂರು

ಸಮಾಜದಲ್ಲಿ ತಪ್ಪುಗಳು ಕಂಡರೆ ಅದನ್ನು ಪ್ರಶ್ನಿಸುವ ವ್ಯಕ್ತಿಗಳು ನೀವಾಗಿ : ಕಾನೂನು ವಿದ್ಯಾರ್ಥಿಗಳಿಗೆ ನಟ ಶಿವಾಜಿರಾವ್ ಜಾದವ್ ಸಲಹೆ

ಮೈಸೂರು,ಮೇ.10:- ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಆದರೆ ಇತ್ತೀಚೆಗೆ ರಂಗಾಯಣ ಸಂಸ್ಥೆ ಪಾಲಿಕೆಯಿಂದ 40ಸಾವಿರ ಲೀಟರ್ ಕುಡಿಯುವ ನೀರು ತರಿಸಿಕೊಂಡು ಮಕ್ಕಳಿಂದ ಓಕುಳಿಯಾಟ ಆಡಿಸಿದೆ. ನೀರನ್ನು ರಸ್ತೆಗೆ ಚೆಲ್ಲಿದ್ದಾರೆ. ಕುಡಿಯಲಿಕ್ಕೇ ನೀರಿಲ್ಲದ ಸಮಯದಲ್ಲಿ  ಇದು ಬೇಕಿತ್ತಾ?,  ಮಾಡೋ ಕೆಲಸ ಮಾಡಿ, ಒಳ್ಳೆಯ ಕೆಲಸ ಮಾಡಿ ಎಂದು ತಿಳಿಹೇಳುವ, ಸಮಾಜದಲ್ಲಿ ತಪ್ಪುಗಳು ಕಂಡರೆ ಅದನ್ನು ಪ್ರಶ್ನಿಸುವ ವ್ಯಕ್ತಿಗಳು ನೀವಾಗಿ ಎಂದು ಪ್ರಖ್ಯಾತ ರಂಗಕರ್ಮಿ, ನಟ ಹಾಗೂ ಸಿನಿಮಾ ನಿರ್ದೇಶಕ ಶಿವಾಜಿರಾವ್ ಜಾದವ್ ಕಾನೂನು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಅವರಿಂದು ಮೈಸೂರು ವಿಶ್ವವಿದ್ಯಾನಿಲಯ ಕಾನೂನು ಶಾಲೆಯ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ‘ಹಿರಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಸಾಂಸ್ಕೃತಿಕ ಹಬ್ಬ’ವನ್ನು ಉದ್ಘಾಟಿಸಿ ಮಾತನಾಡಿದರು. ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ.  ಚಾಮುಂಡಿಬೆಟ್ಟದ ಪಾದದ ಬಳಿ ದೇವಿಕೆರೆ, ಉತ್ತನಹಳ್ಳಿ ಬಳಿ ನೀರಿನ ಸಮಸ್ಯೆ ಎದುರಾಗಿದೆ. ದಿನಬೆಳಗಾದರೆ ಪೇಪರ್ ಲ್ಲಿ   ಕೈಲಿ ಬಿಂದಿಗೆ ಹಿಡಿದು ನಲ್ಲಿ ಬಳಿ ಕ್ಯೂ ನಲ್ಲಿ ನಿಂತಿರೋ ಹತ್ತು ಫೋಟೋ ನೋಡ್ತೇವೆ. ನಿಮಗ್ಯಾರು ಈ ಅಧಿಕಾರ ಕೊಟ್ಟವರು? ಸರ್ಕಾರಿ ಸಂಸ್ಥೆ ಅಂದುಕೊಂಡು ಪಾಲಿಕೆಯನ್ನು, ಅಗ್ನಿಶಾಮಕದಳವನ್ನು ಈ ತರ ಬಳಸಿಕೊಳ್ಳಬಹುದಾ? ಎನ್ನುವ ಪ್ರಶ್ನೆಗಳನ್ನು ಮಾಡುವವರು ನೀವಾಗಬೇಕು ಎಂದರು. ದೇಶದಲ್ಲಿ ಅಂಬೇಡ್ಕರ್ ಹುಟ್ಟುತ್ತಿಲ್ಲ, ಮಹಾತ್ಮಾಗಾಂಧಿ ಹುಟ್ಟುತ್ತಿಲ್ಲ, ಅವರೆಲ್ಲರ ಕೊರತೆಯಿದೆ.ಆ ಕೊರತೆಯನ್ನು ನೀವು ತುಂಬಬೇಕು. ಇಡೀ ದೇಶವೇ ಕಾನೂನು ಪಾಲಿಸಲು ಹೇಳತ್ತೆ. ಕಾನೂನು ಪರೀಕ್ಷೆ ಬರೆದಿದ್ದೀರಿ, ಸಾಕಷ್ಟು ಅಧ್ಯಯನ ಮಾಡಿದ್ದೀರಿ, ಬಹಳಷ್ಟು ದೊಡ್ಡ ಜವಾಬ್ದಾರಿಯನ್ನು ಹೊತ್ತು ಸಮಾಜದೆಡೆಗೆ ನಿಮ್ಮ ಪಯಣ ಆರಂಭಿಸಿದ್ದೀರಿ. ನಾವೆಲ್ಲ ಮಕ್ಕಳಾಗಿದ್ದಾಗ ಶಿಸ್ತನ್ನು ಕಲಿಸುತ್ತಿದ್ದರು. ನಾವದನ್ನು ಕಾನೂನು ಎಂದು ಪಾಲಿಸಿದೆವು. ಕಾನೂನನ್ನು ನಾವು ಆಚರಣೆ ಮಾಡಿ ಮತ್ತೊಬ್ಬರಿಗೆ ಹೇಳಿದರೆ ಅದು ಸಮಾಜಕ್ಕೆ ಕೊಡುವ ಚಿಕ್ಕ ಕೊಡುಗೆಯಾಗಲಿದೆ ಎಂದು ತಿಳಿಸಿದರು.

ರಂಗಾಯಣದ ಮಾಜಿ ನಿರ್ದೇಶಕ ಜನಾರ್ದನ್(ಜನ್ನಿ)ಮಾತನಾಡಿ ಮಾಡುವ ಕೆಲಸದಲ್ಲಿ ಬದ್ಧತೆ ಇರಬೇಕು. ಬದ್ಧತೆ ಇಲ್ಲದ ಕೆಲಸ ಯಶಸ್ವಿಯಾಗಲ್ಲ. ಮನುಷ್ಯ ಸಾಮರಸ್ಯ ಬೆಳೆಸಬೇಕು. ಕಲಿಕೆ ಎನ್ನುವುದು ಮೆಕ್ಯಾನಿಕಲ್ ಅಲ್ಲ. ಬದುಕಾಗಬೇಕು. ಹಾಗಿದ್ದಾಗ ಕಲಿಕೆಗೆ ಮತ್ತು ಅಭ್ಯಾಸಕ್ಕೆ ಬೆಲೆ ಬರತ್ತೆ. ಈ ದೇಶದಲ್ಲಿ ಕಾನೂನನ್ನು ಸಂಪೂರ್ಣ ತಿರುಚಿ, ನ್ಯಾಯವನ್ನೇ ಅನ್ಯಾಯದೆಡೆಗೊಯ್ದು, ಆಚಾರವನ್ನು ಭ್ರಷ್ಟಾಚಾರ ಮಾಡಿ, ಮಾನವೀಯತೆಯನ್ನು ಅಮಾನವೀಯತೆ ಮಾಡತಕ್ಕ ವ್ಯವಸ್ಥೆ ವಾಸ್ತವವಾಗಿ ಜೀವಂತವಾಗುತ್ತಿದೆ. ಅದನ್ನು ನಾಶ ಮಾಡಲು ಕಾನೂನು ವಿದ್ಯಾರ್ಥಿಗಳು ಸಮಂಜಸ ನ್ಯಾಯ ಸಲ್ಲಿಸಬೇಕು ಎಂದರು. ಕ್ಲಿಷ್ಟ ಸಮಯವನ್ನು ಕಲಿಕೆಯಿಂದ ಗೆಲ್ಲಲು ಸಾಧ್ಯ. ಕಲಿತದ್ದು ಉಪಯೋಗವಾಗಬೇಕು. ಸಮಾಜದಲ್ಲಿ ನಾನೂ ಓರ್ವ. ನಾನು ಯಾವುದಾದರೊಂದರಲ್ಲಿ ಪರಿಣತಿ ಪಡೆದು, ಸಮಾಜಕ್ಕೆ ಅದನ್ನು ನೀಡದಿದ್ದಲ್ಲಿ ಅನುಪಯುಕ್ತ ಎಂದು ತಿಳಿಸಿದರು. ಕಾನೂನಿಗೆ ಪುನರ್ಜನ್ಮ ನೀಡಿದವರು ಅಂಬೇಡ್ಕರ್. ಅವರು ಉತ್ತರಗಳ ಸರದಾರರು. ಅವರನ್ನು ಪ್ರಶ್ನಿಸಲು ಸಾಧ್ಯವಾಗಲೇ ಇಲ್ಲ. ಅವರಂತೆ ನೀವುಗಳು ಸಮಾಜದ ಸುಧಾರಣೆಗೆ ಕಾರಣಕರ್ತರಾಗಿ. ವ್ಯಕ್ತಿತ್ವದ ಸೃಷ್ಟಿಯಾಗಿ ಒಳ್ಳೆಯ ಮನುಷ್ಯರಾಗಿ ಬಾಳಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಾನೂನು ಅಧ್ಯಯನ ವಿಭಾಗದ ಅಧ್ಯಕ್ಷ ಮತ್ತು ಡೀನ್ ಪ್ರೊ.ಡಾ.ಸಿ.ಬಸವರಾಜು ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: