ಮೈಸೂರು

ಮೇ.11: ಕಲಾಮಂದಿರದ ಕಿರುರಂಗ ಮಂದಿರದಲ್ಲಿ ‘ಪಾರ್ಶ್ವ ಸಂಗೀತ’ ನಾಟಕ ಪ್ರದರ್ಶನ

ಮೈಸೂರು,ಮೇ.10:-  ರಂಗವಲ್ಲಿ ತಂಡವು   11.5.2019 ಶನಿವಾರ ಸಂಜೆ 7 ಗಂಟೆಗೆ ಮತ್ತು   12.5.2019 ಭಾನುವಾರ ಮಧ್ಯಾಹ್ನ 3.30 ಕ್ಕೆ ಮತ್ತು ಸಂಜೆ 7ಕ್ಕೆ ಮೈಸೂರಿನ ಕಲಾಮಂದಿರದ ‘ಕಿರುರಂಗ’ಮಂದಿರದಲ್ಲಿ ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನಾಧರಿಸಿದ “ಪಾರ್ಶ್ವಸಂಗೀತ” ನಾಟಕದ ಪ್ರದರ್ಶನ ಏರ್ಪಡಿಸಿದೆ. ರಂಗಾಯಣದ ಹಿರಿಯ ಕಲಾವಿದರಾದ ಪ್ರಶಾಂತ್ ಹಿರೇಮಠ ಈ ನಾಟಕವನ್ನು ನಿರ್ದೇಶಿಸಿದ್ದಾರೆ.

ಪಾರ್ಶ್ವ ಸಂಗೀತ ನಾಟಕವು 1940ರ ದಶಕದಿಂದ 70ರ ದಶಕಗಳವರೆಗಿನ ಆದರೆ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗಿನ ನಮ್ಮ ಅವಿನಾಭಾವ ಸಂಬಂಧವನ್ನು ತೆರೆದಿಡುತ್ತದೆ. ಸಿನಿಮಾ ಎನ್ನುವುದು ಸಭ್ಯರಿಗಲ್ಲ ಎನ್ನುವ ಕರ್ಮಠ ಕುಟುಂಬದಲ್ಲಿ ಸಿನಿಮಾ ಹಾಡುಗಳ ಗೀಳು ಹಚ್ಚಿಸಿಕೊಂಡು, ಸಿನಿಮಾ ಗೀತೆಗಳಿಗಾಗಿ ಮನೆಯವರೊಡನೆ ಜಗಳ ಕಾಯುವ ತನ್ನ ಚಿಕ್ಕಪ್ಪ, ಶಾಮ ಚಿಕ್ಕಪ್ಪನ ಕತೆ ಹೇಳುವ ಹಿರಿಯ ಜೀವದ ನೆನಪುಗಳ ಸರಮಾಲೆ ಈ ಪಾರ್ಶ್ವ ಸಂಗೀತ ನಾಟಕ. ಶಾಮ ಚಿಕ್ಕಪ್ಪನಿಗೆ ಹಾಡುಗಳೆಂದರೆ ಪಂಚಪ್ರಾಣ. ಓದೆಂದರೆ ಪ್ರಾಣ ಸಂಕಟ. ಬೆಂಕಿ ನವಾಬನಂತಿರುವ ಅಜ್ಜನಿಗೋ ಮಗನನ್ನು ಕಂಡರೆ ಅಸಹನೆ. ಈ ಕೋಪ-ತಾಪಗಳ ನಡುವೆಯೇ ಶಾಮಚಿಕ್ಕಪ್ಪ-ಕಾಕೂವಿನ ಮದುವೆ. ನವದಂಪತಿಗಳ ಸರಸ-ವಿರಸ, ನಾಟಕದುದ್ದಕ್ಕೂ ತಿಳಿಗಾಳಿಯಂತೆ ಆವರಿಸಿಕೊಳ್ಳುವ ಹಾಸ್ಯ, ಅಲ್ಲಲ್ಲಿ ಹಿಂದಿ ಗಾನಲೋಕದ ದಂತಕತೆಗಳೆನಿಸಿದ ಕೆ.ಎಲ್.ಸೈಗಲ್, ತಲತ್ ಮಹಮೂದ್, ಮಹಮದ್ ರಫಿ, ಕಿಶೋರ್‍ಕುಮಾರ್, ಶಂಶಾದ್ ಬೇಗಂ, ಲತಾಮಂಗೇಶ್ಕರ್, ಮನ್ನಾಡೆ ಅವರ ಬಂಗಾರದ ಹಾಡುಗಳು ನಮ್ಮನ್ನು ಬೇರೆಯದೇ ಒಂದು ಲೋಕಕ್ಕೆ ಕೈಹಿಡಿದು ಕರೆದೊಯ್ಯುತ್ತವೆ.

ಯುವಸಾಹಿತಿ ಬಿ.ಪಿ.ಅರುಣ್ ರಂಗರೂಪ ಮಾಡಿರುವ ಈ ನಾಟಕದ ರಂಗವಿನ್ಯಾಸ-ಹೆಚ್.ಕೆ.ದ್ವಾರಕಾನಾಥ್, ಸಂಗೀತ ನಿರ್ವಹಣೆ-ವಿಶ್ವಾಸ್‍ಕೃಷ್ಣ, ಬೆಳಕಿನ ವಿನ್ಯಾಸ-ಕೃಷ್ಣಕುಮಾರ್ ನಾರ್ಣಕಜೆ, ವಸ್ತ್ರವಿನ್ಯಾಸ-ನಂದಿನಿ ಕೆ.ಆರ್., ನೃತ್ಯಸಂಯೋಜನೆ-ಕಾರ್ತಿಕ್ ಉಪಮನ್ಯು, ರಂಗನಿರ್ವಹಣೆ-ಸೀಮಂತಿನಿ ಬಿ., ಸಹನಿರ್ದೇಶನ-ಮಹೇಶ್‍ಕುಮಾರ್ ಅವರದ್ದು.

ಟಿಕೆಟ್ ದರ  100ರೂ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ 9964656482/ 9448871815 ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: