ಮೈಸೂರು

ಸುಂದರ ಸಮಾಜದ ಮಾಲೀಕ ಶಿಕ್ಷಕ : ಕೆ. ಜಯಪ್ರಕಾಶ್‍ ರಾವ್‍ ಅಭಿಮತ

ಮೈಸೂರು,ಮೇ.10:-  ಶಿಕ್ಷಕನಿಲ್ಲದ ಶಿಕ್ಷಣ ಕಲ್ಪಿಸಿಕೊಳ್ಳುವುದು ಅಸಾಧ್ಯ, ಸುಂದರ ಸಮಾಜದ ನಿರ್ಮಾತೃಗಳನ್ನು ಸೃಷ್ಟಿಸುವ ತೋಟದ ಮಾಲೀಕರೇ ಶಿಕ್ಷಕರು ಎಂದು ಮೈಸೂರಿನ ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಹಾಮಂಡಳಿ ದಕ್ಷಿಣ ಭಾರತದ ಪ್ರಾಂತೀಯ ಅಧ್ಯಕ್ಷರಾದ ಕೆ. ಜಯಪ್ರಕಾಶ್‍ ರಾವ್‍  ಅಭಿಪ್ರಾಯಪಟ್ಟರು.

ಸುತ್ತೂರು ಶ್ರೀಕ್ಷೇತ್ರದಲ್ಲಿ ಶಿಕ್ಷಕರಿಗಾಗಿ ಆಯೋಜಿಸಿರುವ ವ್ಯಕ್ತಿತ್ವ ವಿಕಸನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಪ್ರತಿಯೊಬ್ಬ ಸಾಧಕರ ಹಿಂದೆಯೂ ಶಿಕ್ಷಕರ ಶ್ರಮ ಇದ್ದೇ ಇರುತ್ತದೆ. ಮಕ್ಕಳ ಲಾಲನೆ-ಪಾಲನೆಯಲ್ಲಿ ತಾಯಿಯ ಪಾತ್ರ ಎಷ್ಟು ಮುಖ್ಯವೋ, ಅಂತೆಯೇ ಮಕ್ಕಳ ಬೌದ್ಧಿಕ ಜ್ಞಾನವನ್ನು ವೃದ್ಧಿಸುವಲ್ಲಿ ಶಿಕ್ಷಕನ ಪಾತ್ರವೂ ಅಷ್ಟೇ ಮುಖ್ಯ. ಶಿಕ್ಷಕರು ಕಲಿಸುವಿಕೆಗೆ ಮಿತಿ ಹಾಕಿಕೊಂಡರೆ ಯಾವುದೇ ವ್ಯಕ್ತಿಯು ಪರಿಪೂರ್ಣ ಜ್ಞಾನವನ್ನು ಪಡೆಯಲು ಅಸಾಧ್ಯ. ನಮ್ಮ ಎಷ್ಟೋ ರಾಷ್ಟ್ರ ನಾಯಕರು ತಮ್ಮ ಕೆಲಸದಲ್ಲಿ ಬಿಡುವು ಮಾಡಿಕೊಂಡು ಮಕ್ಕಳಿಗೆ ಪಾಠ ಮಾಡುವುದರಲ್ಲಿ ಇರುವ ಸವಿಯನ್ನು ಅನುಭವಿಸಿದ್ದಾರೆ. ಅಂತಹವರಲ್ಲಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಒಬ್ಬರು. ಇಂತಹ ಮಹಾನ್ ನಾಯಕರುಗಳ ಗುಣಗಳನ್ನು ಮಕ್ಕಳಲ್ಲಿ ಬೆಳೆಸಲು ಶಿಕ್ಷಕರು ಕ್ರೀಯಾಶೀಲರಾಗಬೇಕು ಎಂದು ನುಡಿದರು.

ನಿವೃತ್ತ ಪ್ರಾಂಶುಪಾಲರಾದ ಪ್ರೊ. ಹೆಚ್.ಎಸ್. ಉಮೇಶ್‍ ಮಾತನಾಡಿ, ಸೃಜನಶೀಲತೆಯು ಕಲಿತು ಬಳಸುವುದಲ್ಲ. ಪ್ರತಿಯೊಂದು ವಿಷಯದ ಪಠ್ಯಕ್ರಮವೂ ಅಪಾರ ಜ್ಞಾನವನ್ನು  ನೀಡಬಯಸುತ್ತದೆ. ಶಿಕ್ಷಕರಾದವರು ಬೇಕು-ಬೇಡಗಳ ನಡುವೆ ಯಾವ ವಿಷಯಕ್ಕೆ ಎಷ್ಟು ಒತ್ತು ನೀಡಬೇಕು,  ಯಾವುದು ಸೂಕ್ತ ಮತ್ತು ಅವಶ್ಯಕ ಎಂಬುದರ ಅರಿವು ತಿಳಿದರೆ ತರಗತಿಯಲ್ಲಿನ ಸೃಜನಶೀಲ ಚಟುವಟಿಕೆಗಳಿಂದ ಕಾರ್ಯರೂಪಕ್ಕೆ ತರಬಹುದು. ಶಿಕ್ಷಕರಿಂದ ಈ ರೀತಿಯ ಸೃಜನಶೀಲ ಯೋಚನೆ, ಚಟುವಟಿಕೆ ಮತ್ತು ಬೋಧನೆ ವಿದ್ಯಾರ್ಥಿಗಳಿಗೆ ವರವಾಗಿ ತಮ್ಮ ಶಕ್ತಿ ಸಾಮರ್ಥ್ಯಗಳ ಅರಿವು ಮೂಡಿಸುತ್ತದೆ. ಅವರು ಶಾಲಾ ಶಿಕ್ಷಣ ಪೂರೈಸಿ ಉನ್ನತ ವ್ಯಾಸಂಗಕ್ಕೆ ಹೋದಾಗ ಅಥವಾ ಕೆಲಸಕ್ಕೆ ಸೇರಿದಾಗ ಅವರ ದೈನಂದಿನ ಕಾರ್ಯದಲ್ಲಿಯೂ ನೆರವಾಗುತ್ತದೆ. ಈ ನಿಟ್ಟಿನಲ್ಲಿ ವಿಷಯ ಜ್ಞಾನವು ಸೃಜನಾತ್ಮಕವಾಗಿ ಮೂಡಿ ಬಂದಾಗ ಹೊಸ ಮಾರ್ಗಗಳನ್ನು ಕಂಡುಕೊಳ್ಳುವಲ್ಲಿ ನೆರವಾಗುತ್ತದೆ ಎಂದು ತಿಳಿಸಿದರು.

ಸಾಹಿತಿಗಳಾದ ಡಾ. ಜಿ. ಕೃಷ್ಣಪ್ಪನವರು ಮಾತನಾಡಿ ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎಂದು ನಾಡಿಗೆ ತಿಳಿಸಿದ ವರಕವಿ ಬೇಂದ್ರೆಯವರು ಹೇಳಿದಂತೆ ಸಮಾಜದಲ್ಲಿ ಅರಿವು ಎಂಬ ಜ್ಞಾನ ಇದ್ದರೆ ಶಾಂತಿ, ಸಹಬಾಳ್ವೆ ಹಾಗೂ ಆದರ್ಶ ಸಮಾಜ ನಿರ್ಮಿಸಲು ಸಾಧ್ಯ. ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಸಂಸ್ಕಾರವನ್ನು ಮಕ್ಕಳಲ್ಲಿ ಬಿತ್ತಿದಾಗ ಮಾತ್ರ ದೇಶದ ಭವಿಷ್ಯ ಆಶಾದಾಯಕವಾಗಿರುತ್ತದೆ. ಆದ್ದರಿಂದಮಕ್ಕಳನ್ನು ಜ್ಞಾನದ ಕಣಜವಾಗಿ ಬೆಳೆಸಬೇಕು. ಸಾಹಿತ್ಯ ಅಧ್ಯಯನ ಮತ್ತು ಅರಿವಿನಿಂದ ಜೀವನ ಮೌಲ್ಯಗಳು ವೃದ್ಧಿಸುತ್ತವೆ. ಸಾಹಿತ್ಯ ಮನುಷ್ಯನನ್ನು ಸರಿದಾರಿಗೆ ಕೊಂಡೊಯ್ಯಬಲ್ಲುದು. ವಿಜ್ಞಾನದ ಬುದ್ದಿ, ತತ್ವಜ್ಞಾನಿಯ ಮನಸ್ಸು ಮತ್ತು ಕವಿ ಹೃದಯ ಇದ್ದರೆ ಮನುಷ್ಯ ಶ್ರೇಷ್ಠನಾಗುತ್ತಾನೆ. ವಿಜ್ಞಾನ ಬದುಕಿಗೆ ಬೆಳಕು ನೀಡುತ್ತದೆ, ಆದರೆ ಸಾಹಿತ್ಯ ಮೌಲ್ಯಾಧಾರಿತ ಬದುಕು, ಮನಸ್ಸನ್ನು ಅರಳಿಸುತ್ತದೆ ಎಂದು ತಿಳಿಸಿದರು.

ಶಿಕ್ಷಕರಾದ  ವೀರೇಶ್ ಪಾಟೀಲ್‍ ಮಾತನಾಡಿ ಸಾಮಾಜಿಕ ಜವಾಬ್ದಾರಿಯ ಹಿನ್ನೆಲೆಯಲ್ಲಿ ಶಿಕ್ಷಕರು ವರ್ತಿಸಬೇಕು. ಮಕ್ಕಳಲ್ಲಿ ಅಪರಿಮಿತವಾದ ಉತ್ಸಾಹವನ್ನು ಕಂಡಾಗ ಶಿಕ್ಷಕರು ಪ್ರೋತ್ಸಾಹಿಸಿ ಮಗುವಿನ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: