ಪ್ರಮುಖ ಸುದ್ದಿಮೈಸೂರು

 ರಾಜ್ಯದಲ್ಲಿ ಬರ;  ಸಿಎಂ ಹೆಚ್.ಡಿ ಕುಮಾರಸ್ವಾಮಿ ಕುಟುಂಬ ಸಮೇತ ದೇವಾಲಯ, ರೆಸಾರ್ಟ್ ಮೊರೆ : ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಕಿಡಿ

ಮೈಸೂರು,ಮೇ.10:-  ರಾಜ್ಯದಲ್ಲಿ ಬರವಿದ್ದರೂ  ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತ್ರ ಕುಟುಂಬ ಸಮೇತ ದೇವಾಲಯ ಹಾಗೂ ರೆಸಾರ್ಟ್ ಮೊರೆ ಹೋಗಿದ್ದಾರೆಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಕಿಡಿಕಾರಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್, ಜವಾಬ್ದಾರಿಯುತ ಸ್ಥಾನದಲ್ಲಿ ಕುಮಾರಸ್ವಾಮಿ ಇದ್ದಾರೆ. ದೇವಾಲಯದಲ್ಲಿ ಹೋಮ ಹವನ ಎಂಬುದು ಅವರ ವೈಯುಕ್ತಿಕ ವಿಚಾರ.  ಆದರೆ  ಜನರು ಅವರಿಗೆ ಒಳ್ಳೆ ಅವಕಾಶ ನೀಡಿದ್ದಾರೆ.  ಅವರ ತಂದೆ ಪ್ರಧಾನ ಮಂತ್ರಿ ಹುದ್ದೆಯಲ್ಲಿ ಇದ್ದವರು.  ಅವರ ಮಗನಿಗೆ ದೇವೇಗೌಡರು ಬುದ್ದಿ ಹೇಳಬೇಕಿದೆ ಎಂದು ಹರಿಹಾಯ್ದರು.

ಲೋಕಸಭಾ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಶ್ರೀನಿವಾಸ್ ಪ್ರಸಾದ್, ಲೋಕಸಭಾ ಚುನಾವಣೆ ಫಲಿತಾಂಶ ಬರುವ ವರೆಗೂ ಏನು ಹೇಳಲು ಆಗಲ್ಲ. ಫಲಿತಾಂಶದ ನಂತರ ರಾಜ್ಯದಲ್ಲಿ ಏನಾಗುತ್ತದೆಯೋ  ನೋಡಬೇಕು. ಕೇಂದ್ರಲ್ಲಿ ಅತಂತ್ರ ಸರ್ಕಾರ ನಿರ್ಮಾಣವಾಗಬಾರದು. ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಆಗಬೇಕು ಎಂದರು.

ಕೇಂದ್ರದಲ್ಲಿ ಮತ್ತೆ ಎನ್ ಡಿ ಎ ಅಧಿಕಾರಕ್ಕೆ ಬರಬೇಕು. ಪ್ರಧಾನಮಂತ್ರಿ ಮೋದಿಯವರೇ ಆಗಬೇಕು. ರಾಜ್ಯದಲ್ಲೂ ಕೂಡ ಬಿಜೆಪಿ ಬಗ್ಗೆ ವಿಶ್ವಾಸ ಇದೆ.  ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ಬಿಜೆಪಿ 17 ಸ್ಥಾನ ಪಡೆದಿದೆ. 120 ಸ್ಥಾನ ಪಡೆದಿದ್ದ ಕಾಂಗ್ರೆಸ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ  70 ಕುಸಿದಿದೆ.  46 ಸ್ಥಾನದಿಂದ ಬಿಜೆಪಿ 104 ಕ್ಕೆ ಏರಿದೆ. ಇದರ ಅರ್ಥ ಬಿಜೆಪಿಗೆ ಜನ ಬೆಂಬಲ ಇದೆ . ಹೆಚ್ಚು ಸ್ಥಾನಗಳಿಸಬೇಕು ಎಂಬುದಷ್ಟೆ ಸದ್ಯಕ್ಕೆ ಇರುವ ಯೋಜನೆ. ಮುಂದೆ ರಾಜ್ಯದಲ್ಲಿ ಏನು ಆಗುತ್ತದೋ ನೋಡಬೇಕು ಎಂದು ಶ್ರೀನಿವಾಸ್ ಪ್ರಸಾದ್ ನುಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: