ಪ್ರಮುಖ ಸುದ್ದಿ

20ಶಾಸಕರಿಗೆ ರಾಜ್ಯ ಸಮ್ಮಿಶ್ರ ಸರ್ಕಾರದ ಮೇಲೆ ಅಸಮಾಧಾನ : ಬಿಎಸ್ ವೈ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ

ರಾಜ್ಯ(ಕಲಬುರಗಿ)ಮೇ.11:- 20 ಶಾಸಕರಿಗೆ ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನವಿದ್ದು ಏನು ಬೇಕಾದ್ರೂ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮತ್ತು ಮಾಜಿ ಡಿಸಿಎಂ ಆರ್. ಅಶೋಕ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಆರ್. ಅಶೋಕ್ ಅವನಿಗೆ ಸತ್ಯವೂ ಗೊತ್ತಿಲ್ಲ , ಸುಳ್ಳೂ ಗೊತ್ತಿಲ್ಲ. ಅವನು ಏನು ಮಾತನಾಡುತ್ತಾನೆ ಎಂದು ಅವನಿಗೇ ಅರ್ಥವಾಗಲ್ಲ.  ಅವನ ಹೇಳಿಕೆಗಳಲ್ಲಿ ತಳ ಬುಡ ಏನು ಇರಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಕಲ್ಬುರ್ಗಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ,  20 ಶಾಸಕರು ಬಿಜೆಪಿಗೆ ಬರ್ತಾರೆ  ಅಂತಾರಲ್ಲ ಅವರಿಗೆ ನಾಚಿಕೆಯಾಗಬೇಕು. ಬಿಜೆಪಿ ನಾಯಕರು ಹತಾಶರಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ನಮ್ಮ ಶಾಸಕರನ್ನು ಬಲವಂತವಾಗಿ ಸೆಳೆಯಲು ಯತ್ನಿಸುತ್ತಿದ್ದಾರೆ. ಆದರೆ ನಮ್ಮ ಶಾಸಕರು ಅವರ ಮಾತಿಗೆ ಸೊಪ್ಪು ಹಾಕಲ್ಲ. ಶಾಸಕರ ಖರೀದಿಗೆ ಅಷ್ಟೊಂದು ಹಣ ನೀಡಲು ಮುಂದಾಗಿದ್ದಾರಲ್ಲ ಅಷ್ಟೊಂದು ಹಣ ಎಲ್ಲಿಂದ ಬಂತು ಅಂತ ಮೋದಿ, ಅಮಿತ್ ಶಾ, ಬಿಎಸ್ ವೈ ಉತ್ತರಿಸಲಿ ಎಂದು ಆಗ್ರಹಿಸಿದರು.

ನಾನು ಜೆಡಿಎಸ್ ಪಕ್ಷ ಬಿಟ್ಟಿದ್ದಕ್ಕೂ ಉಮೇಶ್ ಜಾಧವ್ ಪಕ್ಷ ಬಿಟ್ಟಿದ್ದಕ್ಕೂ ವ್ಯತ್ಯಾಸವಿದೆ. ಅಹಿಂದಾ ಚಟುವಟಿಕೆಯಲ್ಲಿ ಭಾಗಿಯಾದ  ಹಿನ್ನೆಲೆಯಲ್ಲಿ ದೇವೇಗೌಡರು ನನ್ನನ್ನು ಉಚ್ಛಾಟಿಸಿದ್ದರು ಎಂದು ಆರ್ ಅಶೋಕ್ ಗೆ ಚಾಟಿ ಬೀಸಿದರು.

ಕಾಂಗ್ರೆಸ್ ಜತೆ ಹೊಂದಾಣಿಕೆ ಅಗತ್ಯವಿಲ್ಲ. ನಮಗೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂದಿದ್ದ ಜೆಡಿಎಸ್ ಶಾಸಕ ನಾರಾಯಣಗೌಡ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಅವನ ಹೇಳಿಕೆಗೆ  ಪ್ರತಿಕ್ರಿಯೆ ನೀಡಲ್ಲ.  ನಾವು ಅವನನ್ನು ಕೇಳಿ ಮೈತ್ರಿ ಮಾಡಿಕೊಂಡಿಲ್ಲ.  ಹೆಚ್.ಡಿ ದೇವೇಗೌಡ ಮತ್ತು  ಹೆಚ್ ಡಿ ಕುಮಾರಸ್ವಾಮಿ ಜತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಟಾಂಗ್ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: