ಕರ್ನಾಟಕ

ಮನೆ ಬಾಡಿಗೆ ವಿಚಾರ: ನಟ ಆದಿತ್ಯ ಕುಟುಂಬದ ವಿರುದ್ಧ ಪೊಲೀಸರಿಗೆ ದೂರು

ಬೆಂಗಳೂರು,ಮೇ 11-ಮನೆ ಬಾಡಿಗೆ ವಿಚಾರವಾಗಿ ನಟ ಆದಿತ್ಯ ಕುಟುಂಬದ ವಿರುದ್ಧ ಮನೆ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ.

ಮನೆ ಬಾಡಿಗೆ ಕಟ್ಟಿಲ್ಲ ಮತ್ತು ಮನೆ ಖಾಲಿ ಮಾಡದಿರುವ ವಿಚಾರವಾಗಿ ಮನೆ ಮಾಲೀಕ ಪ್ರಸನ್ನ ಆದಿತ್ಯ ಕುಟುಂಬದ ವಿರುದ್ಧ ಕೋರ್ಟ್ ನಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಕೋರ್ಟ್ ನಲ್ಲಿ ಕೇಸ್ ಇದ್ದರೂ ಮನೆಯ ಬಳಿ ಗಲಾಟೆ ಮಾಡುತ್ತಿದ್ದಾರೆ, ಧಮ್ಕಿ ಹಾಕುತ್ತಿದ್ದಾರೆ, ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ ಎಂದು ಪ್ರಸನ್ನ ಪೊಲೀಸರಿಗೆ ದೂರು ನೀಡಿದ್ದಾರೆ.

ಸದಾಶಿವನಗರದ ಆರ್.ಎಂ.ವಿ ಎಕ್ಷಟೆನ್ಷನ್ ಲ್ಲಿರುವ ಪ್ರಸನ್ನ ಅವರ ಮನೆಯಲ್ಲಿ ಕಳೆದ ನಾಲ್ಕು ವರ್ಷದಿಂದ ಆದಿತ್ಯ ಅವರ ಕುಟುಂಬ ಬಾಡಿಗೆಗೆ ವಾಸವಾಗಿದೆ. ಕಳೆದ ಏಳು ತಿಂಗಳಿನಿಂದ ಮನೆ ಬಾಡಿಗೆ ನೀಡಿರಲಿಲ್ಲ. ಇದನ್ನ ಕೇಳಿದ್ದ ನಮ್ಮ ಮೇಲೆ ದೌರ್ಜನ್ಯ ಮಾಡ್ತಾರೆ ಎಂದು ಆರೋಪಿಸಿದ್ದಾರೆ.

ಆದಿತ್ಯ, ಅವರ ತಂದೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ತಂಗಿ ರಿಷಿಕಾ ಸಿಂಗ್ ಹಾಗೂ ತಾಯಿ ಈ ಮನೆಯಲ್ಲಿ ವಾಸವಾಗಿದ್ದಾರೆ. ಸದ್ಯ ಮನೆ ಮಾಲೀಕ ಪ್ರಸನ್ನ ಅವರ ಹೇಳುವ ಪ್ರಕಾರ 2.88 ಲಕ್ಷ ರೂ. ಬಾಡಿಗೆ ಹಣ ಪಾವತಿಸಬೇಕಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಈ ಬಗ್ಗೆ ಕೋರ್ಟ್ ನಲ್ಲಿ ಪ್ರಕರಣ ಇದೆ. ಸದ್ಯದಲ್ಲೇ ವಿಚಾರಣೆಯೂ ನಡೆಯುತ್ತೆ. ನಾವು ಕೋರ್ಟ್ ಗೆ ಬಾಡಿಗೆ ಕಟ್ಟುತ್ತೇವೆ. ನಮ್ಮ ವಕೀಲರು ಅದೇ ಹೇಳಿದ್ದಾರೆ ಎಂದು ತಿಳಿಸಿದ್ದಾರೆ. ಈ ಕಡೆ ಸದಾಶಿವನಗರದಲ್ಲಿ ರಾಜೇಂದ್ರಸಿಂಗ್ ಬಾಬು ಮತ್ತು ಆದಿತ್ಯ ವಿರುದ್ಧ ಮನೆ ಮಾಲೀಕ ನೀಡಿರುವ ದೂರಿನ ಅನ್ವಯ ವಿಚಾರಣೆ ಕೂಡ ನಡೆಯುವ ಸಾಧ್ಯತೆ ಇದೆ. (ಎಂ.ಎನ್)

Leave a Reply

comments

Related Articles

error: