ಮೈಸೂರು

ಬಹುಮುಖ ವ್ಯಕ್ತಿತ್ವದಿಂದ ಸಮಾಜದ ಎಲ್ಲ ಸ್ತರಗಳಿಂದ ಹೇಗೆ ಬದಲಾವಣೆ ಮಾಡಲು ಸಾಧ್ಯ ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟವರು ಬಸವಣ್ಣ : ಸುತ್ತೂರು ಶ್ರೀ ಬಣ್ಣನೆ

ಮೈಸೂರು ವಿಶ್ವವಿದ್ಯಾನಿಲಯ ಶ್ರೀ ಬಸವೇಶ್ವರ ಸಾಮಾಜಿಕ, ಪರಿಷ್ಕರಣ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರದ ಕಟ್ಟಡದ ಶಂಕುಸ್ಥಾಪನೆ

ಮೈಸೂರು,ಮೇ.11:- ಜಗಜ್ಜೋತಿ ಬಸವಣ್ಣನವರು ಇಡೀ ಬದುಕನ್ನೇ ವೈಯುಕ್ತಿಕವಾಗಿ ಸವಾಲಾಗಿಟ್ಟು ಇಡೀ ಸಮಾಜದಲ್ಲಿ ಬಹುಮುಖ ವ್ಯಕ್ತಿತ್ವದಿಂದ ಸಮಾಜದ ಎಲ್ಲ ಸ್ತರಗಳಿಂದ ಹೇಗೆ ಬದಲಾವಣೆ ಮಾಡಲು ಸಾಧ್ಯ ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಿಕೊಟ್ಟವರು ಎಂದು ಸುತ್ತೂರು ಶ್ರೀ ಶಿವರಾತ್ರೀ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.

ಅವರಿಂದು ಮಾನಸಗಂಗೋತ್ರಿಯ ರೇಷ್ಮೆ ಕೃಷಿ ಅಧ್ಯಯನ ವಿಭಾಗದ ಹತ್ತಿರ ಮೈಸೂರು ವಿಶ್ವವಿದ್ಯಾನಿಲಯ ಶ್ರೀ ಬಸವೇಶ್ವರ ಸಾಮಾಜಿಕ, ಪರಿಷ್ಕರಣ, ಸಂಶೋಧನೆ ಮತ್ತು ವಿಸ್ತರಣ ಕೇಂದ್ರದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ವಿಶ್ವವಿದ್ಯಾನಿಲಯದಲ್ಲಿ ಸ್ಥಾಪನೆಯಾಗಿರುವ ಬಸವೇಶ್ವರ ಕೇಂದ್ರದ ಎಲ್ಲ ಚಟುವಟಿಕೆಗಳು ವಿಸ್ತೃತವಾಗಿ ನಡೆಯಬೇಕೆನ್ನುವ ಸದಾಶಯದಿಂದ ಪ್ರತ್ಯೇಕವಾದ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ಎಲ್ಲರಿಗೂ ಗೊತ್ತು ಬಸವೇಶ್ವರರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. 9  ಶತಮಾನದ ನಂತರ  ಸದಾ ಸ್ಮರಣೆಯಲ್ಲಿರುವ ಅಪರೂಪದ ವ್ಯಕ್ತಿತ್ವ ಬಸವೇಶ್ವರರು. ಅವರ ವಿಚಾರಗಳು, ಕ್ರಿಯಾಚಾರಗಳು ಅಷ್ಟು ತೀವ್ರತರವಾಗಿದ್ದಂತಹ ಕಾರಣದಿಂದಾಗಿ ಆ ಶತಮಾನದಲ್ಲಿ ಅದು ಅವರು ಆಶಿಸಿದ ಹಾಗೆ ಯಶಸ್ವಿಯಾಗಿ ನಡೆಯಲು ಸಾಧ್ಯವಾಗದೇ ಇದ್ದರೂ ಕೂಡ 800-900ವರ್ಷಗಳ ನಂತರ ಮತ್ತೆ ಚಾಲನೆಗೆ ಬಂದು ಪ್ರಚಲಿತವಾಗಿದೆ ಎಂದರು.

ಅವರು ಹೇಳಿತಕ್ಕಂತಹುದೆಲ್ಲ ಸಾರ್ವಕಾಲಿಕ ಸತ್ಯವಾಗಿದೆ. ನೈತಿಕತೆಗೆ ಹೇಗೆ ವಿಶೇಷವಾದ ಮಹತ್ವ ಕೊಟ್ಟರೋ ಅಂತಹ ಧಾರ್ಮಿಕ, ಆಧ್ಯಾತ್ಮಿಕ ನೈತಿಕ ಬದುಕನ್ನು ನಡೆಸಿದಂತವರು ಬಸವಣ್ಣ. ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಆತ್ಮ ಸಾಕ್ಷಾತ್ಕಾರದ, ಭಗವಂತನ ಸಾಕ್ಷಾತ್ಕಾರದ ನೈತಿಕ, ಸಾತ್ವಿಕ ಜೀವನ ಅಳವಡಿಸಿಕೊಳ್ಳುವುದು ಸಾಧ್ಯವಿದೆ. ಮನುಷ್ಯನಾಗಿ ಹುಟ್ಟಿದ ಮೇಲೆ ಸಾಧಿಸಲು ಹಿಂಜರಿಯಬೇಕಾದ ಅಗತ್ಯವಿಲ್ಲ ಎನ್ನುವ ಸೂಕ್ಷ್ಮ ಸಂಗತಿಯನ್ನು ತಿಳಿಸಿದವರು. ಅವರ ಹೆಸರಿನಲ್ಲಿ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಕೇಂದ್ರಗಳಿವೆ. ಯಾರ ಹೆಸರಿನಲ್ಲಿ ಆರಂಭವಾಗಿದೆಯೋ ಅದಕ್ಕೆ ಪೂರಕವಾಗಿ ಅವರ ವ್ಯಕ್ತಿತ್ವ, ಸಂದೇಶವನ್ನು ಯುವಪೀಳಿಗೆಗೆ ಪ್ರಸ್ತುತವಾಗಿ ತಿಳಿಸಲು ಸಾಧ್ಯ. ಅದರ್ಶ ಪುರುಷರಿಂದ ಪ್ರೇರಿತರಾಗಿ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆ ಎನ್ನುವತ್ತ ಹೆಚ್ಚಿನ ಕೆಲಸ ಅಗತ್ಯ ಎಂದರು. ಬಸವಣ್ಣನವರು ಹೇಳಿದಂತೆ’ ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ’ ಎಂಬಂತೆ ಎಲ್ಲ ರೀತಿಯ ಅಜ್ಞಾನಗಳು ನಾಶವಾಗಬೇಕು ಎಂದರು ತಿಳಿಸಿದರು.

ಜ್ಞಾನಯೋಗಾಶ್ರಮದ ಶ್ರೀಸಿದ್ಧೇಶ್ವರ ಮಹಾಸ್ವಾಮೀಜಿ ಮಾತನಾಡಿ ಬಸವಣ್ಣನವರನ್ನು ಶಬ್ದಗಳಲ್ಲಿ ವರ್ಣಿಸುವುದು ಬಹಳ ಕಷ್ಟ. ಅವರ ಜೀವನದ ಮುಖಗಳು ಅನೇಕ. ತತ್ವಜ್ಞಾನ, ಅನುಭವ, ಧರ್ಮ, ಸಮಾಜ, ಮನಶಾಸ್ತ್ರ, ಎಲ್ಲ ಮುಖಗಳಲ್ಲಿ, ಎಲ್ಲ ಕ್ಷೇತ್ರಗಳಲ್ಲಿ ಅವರ ಮಾತು ಹರಡಿವೆ. ಅಂತಹ ಮಹಾನುಭಾವರನ್ನು ಅಧ್ಯಯನ ಮಾಡುವುದು ಅಷ್ಟೇ ಮಹತ್ವದ್ದು. ಬರೀ ಸಮಾಜ ಅಂತ ಅಲ್ಲ.ಅವರ ವಿವಿಧ ಮುಖಗಳ ಅಧ್ಯಯನವೂ ಇಲ್ಲಿ ಸಂಶೋಧನಾತ್ಮಕವಾಗಿ ಆಗಲಿ ಎಂದು ಹಾರೈಸಿದರು.

ನೈತಿಕತೆ ಬಹಳ ಅವಶ್ಯ. ನೈತಿಕತೆಯನ್ನು ಆಗಿನ ಕಾಲದಲ್ಲಿಯೇ ಎತ್ತಿ ಹಿಡಿದು ನೀತಿ ಅಂದರೆ ಒಳಶುಚಿ-ಹೊರಶುಚಿ, ಅದೇ ದೇವನನ್ನು ಒಲಿಸುವ ಪರಿ ಅನ್ನುವ ಮಟ್ಟಿಗೆ ನೀತಿ ಇದೆ. ಮಾತು, ಮನಸು, ನಡತೆ ಎಲ್ಲಿ ಸರಳವಿದೆ ಅಲ್ಲಿ ಕೂಡಲಸಂಗಮನ ಅಭಿವ್ಯಕ್ತಿ ಎಂದು ಹೇಳಿದವರು. ಅಂತಹ ವಿಷಯಗಳು ಇಲ್ಲಿ ಸಂಶೋಧನೆಗೊಳಪಟ್ಟು ಸುಂದರವಾದ, ಪರಿಣಾಮಕಾರಿಯಾದ ರೂಪದಲ್ಲಿ ಜನತೆಯನ್ನು ತಲುಪಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಲಿಂಗರಾಜಗಾಂಧಿ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: