ಪ್ರಮುಖ ಸುದ್ದಿ

ದರ್ಶನ ನೀಡದ ಕುಮಾರಸ್ವಾಮಿ : ರೆಸಾರ್ಟ್ ವಾಸ್ತವ್ಯಕ್ಕೆ ಟೀಕೆ, ಸಮರ್ಥನೆ

ರಾಜ್ಯ(ಮಡಿಕೇರಿ) ಮೇ 12 :- ಕೊಡಗು ಜಿಲ್ಲೆಯ ಮಡಿಕೇರಿ ನಗರದ ಹೊರಭಾಗದಲ್ಲಿರುವ ಇಬ್ಬನಿ ರೆಸಾರ್ಟ್‍ನಲ್ಲಿ ತಂಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕುಟುಂಬ ವರ್ಗ ಯಾರನ್ನು ಭೇಟಿ ಮಾಡಲಿಲ್ಲ.
ಮುಂಜಾನೆ ಎದ್ದು ರೆಸಾರ್ಟ್‍ನ ಪರಿಸರದಲ್ಲಿ ವಾಕಿಂಗ್ ಮಾಡಿದ್ದು ಬಿಟ್ಟರೆ ಇನ್ನುಳಿದಂತೆ ಸಿಎಂ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ರೆಸಾರ್ಟ್‍ನ ಬಳಿ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದ್ದು, ಮಾಧ್ಯಮದವರಿಗೂ ಮುಖ್ಯಮಂತ್ರಿಗಳ ದರ್ಶನವಾಗಿಲ್ಲ.
ಜನತಾದರ್ಶನದ ಮೂಲಕ ಗಮನ ಸೆಳೆದಿದ್ದ ಸಿಎಂ ಕುಮಾರಸ್ವಾಮಿ ಅವರು ಪ್ರತಿಯೊಬ್ಬರ ಕಷ್ಟಕ್ಕೆ ಸ್ಪಂದಿಸುತ್ತಾರೆ ಎನ್ನುವ ಅಭಿಪ್ರಾಯದೊಂದಿಗೆ ರೆಸಾರ್ಟ್ ಬಳಿ ಸಮಸ್ಯೆಗಳನ್ನು ಹೇಳಿಕೊಳ್ಳಲು ಬಂದಿದ್ದ ಕೆಲವು ಮಂದಿ ನಿರಾಶೆಯಿಂದ ತೆರಳುತ್ತಿದ್ದ ದೃಶ್ಯವೂ ಕಂಡು ಬಂತು.
ದುಬಾರಿ ರೆಸಾರ್ಟ್‍ನಲ್ಲಿ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಚುನಾವಣೆಗೂ ಮೊದಲು ಗ್ರಾಮ ವಾಸ್ತವ್ಯ, ಚುನಾವಣೆ ಮುಗಿದ ಮೇಲೆ ರೆಸಾರ್ಟ್ ವಾಸ್ತವ್ಯ ಎಂದು ಕುಟುಕಿದ್ದಾರೆ.
ಮುಖ್ಯಮಂತ್ರಿಗಳು ಇಂದು ರೆಸಾರ್ಟ್‍ನಿಂದ ತೆರಳಲಿದ್ದು, ಸೋಮವಾರದಿಂದ ಆಡಳಿತ ವ್ಯವಸ್ಥೆಯಲ್ಲಿ ಚುರುಕು ಮೂಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಎಂ ಜೊತೆಗೆ ಆಗಮಿಸಿದ್ದ ಸಚಿವ ಸಾ.ರಾ.ಮಹೇಶ್ ಮಾತ್ರ ಸಿಎಂ ಸೂಚನೆಯಂತೆ ಚುನಾವಣಾ ಆಯೋಗದ ಅನುಮತಿ ಪಡೆದು ಜಿಲ್ಲಾಧಿಕಾರಿ ಕಛೇರಿಯಲ್ಲಿ ಕೊಡಗು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದ ಜನರಿಗೆ ಆದಷ್ಟೂ ಬೇಗ ಸೂರು ಕಲ್ಪಿಸುವ ಭರವಸೆಯನ್ನು ನೀಡಿದ್ದಾರೆ.
ಇದಕ್ಕೂ ಮೊದಲು ರೆಸಾರ್ಟ್ ಬಳಿ ಮಾತನಾಡಿದ ಸಾ.ರಾ.ಮಹೇಶ್, ಸಿಎಂ ಖಾಸಗಿ ರೆಸಾರ್ಟ್ ವಾಸ್ತವ್ಯವನ್ನು ಸಮರ್ಥಿಸಿಕೊಂಡಿದ್ದಾರೆ. ಮನುಷ್ಯ ಪ್ರಾಣಿಗಳಂತೆ ಎಲ್ಲರಿಗೂ ಖಾಸಗಿ ಬದುಕು ಹಾಗೂ ರೆಸ್ಟ್ ಆಗತ್ಯವಿರುತ್ತೆ ಅದನ್ನು ಸಿಎಂ ಮಾಡ್ತಿದ್ದಾರೆ ಅಷ್ಟೇ. ಇನ್ನು ಕೊಡಗಿನಲ್ಲಿ ಸಿದ್ದರಾಮಯ್ಯ ಉಳಿದುಕೊಂಡಿದ್ದ ರೆಸಾರ್ಟ್‍ಗೆ ಕುಮಾರಸ್ವಾಮಿ ಬಂದಿದ್ದು ಕೊಡಗು ಸೇಫ್ ಎಲ್ಲರೂ ಇತ್ತ ಬರಬಹುದು ಎಂಬ ಸಂದೇಶ ಸಾರಲು ಅಂತ ಸಮರ್ಥನೆಯ ಮಾತನಾಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: