ಮೈಸೂರು

ಪ್ರಜಾಪ್ರಭುತ್ವಕ್ಕೆ ಬೆಲೆ ಸಿಗಬೇಕಾದರೆ ವಿಕೃತಿಗಳು ಮರೆಯಾಗಿ ನಾವೆಲ್ಲ ಒಂದು ಎಂಬ ಭಾವನೆ ಬೆಳೆಯಬೇಕು : ಮ.ವೆಂಕಟರಾಮ್ ಅಭಿಮತ

ಮೈಸೂರು,ಮೇ.13:-ಪ್ರಜಾಪ್ರಭುತ್ವಕ್ಕೆ ಬೆಲೆ ಸಿಗಬೇಕಾದರೆ ವಿಕೃತಿಗಳು ಮರೆಯಾಗಿ ನಾವೆಲ್ಲ ಒಂದು ಎಂಬ ಭಾವನೆ ಬೆಳೆಯಬೇಕೆಂದು ಕರ್ನಾಟಕ ದಕ್ಷಿಣ ಆರ್ ಎಸ್ ಎಸ್ ಪ್ರಾಂತ ಸಂಘಚಾಲಕ ಮ.ವೆಂಕಟರಾಮ್ ಅಭಿಪ್ರಾಯಪಟ್ಟರು.

ಅವರಿಂದು ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ವತಿಯಿಂದ ಎಂ.ವೆಂಕಟಕೃಷ್ಣಯ್ಯ ಸಭಾಂಗಣದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತ್ಯುತ್ಸವದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಗೌರವ ಅರ್ಪಿಸಿ, ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತದಂತಹ ಪ್ರಜಾಪ್ರಭುತ್ವ ಎಲ್ಲಿಯೂ ಇಲ್ಲ. ಶ್ರೇಷ್ಠವಾಗಿದ್ದು, ವ್ಯವಸ್ಥಿತವಾಗಿ ನಡೆದುಕೊಂಡು ಹೋಗುತ್ತಿದೆ. ಅದಕ್ಕೆ ಕಾರಣ ಭಾರತದ ಶ್ರೇಷ್ಠ ಸಂವಿಧಾನ ಎಂದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಮೀಸಲಾತಿ ಇಲ್ಲದೆಯೇ ಅಧ್ಯಯನ ಮಾಡಿದವರು. ಕಲಿಯಲೇಬೇಕೆಂಬ ಪಟ್ಟು ಹಿಡಿದು ಸಾಧನೆ ಮಾಡಿದರು. ಸಂಸ್ಕೃತ ಕೂಡ ಅಧ್ಯಯನ ಮಾಡಿದರು. ಸಮಾಜ ಚೆನ್ನಾಗಿರಬೇಕು. ಸಾಮರಸ್ಯವಿರಬೇಕು ಎಂದು ಬಯಸಿದ್ದರು. ಆಗ ಮೀಸಲಾತಿ ಮಾಡುವಾಗ 8ಜಾತಿ ಇತ್ತು. ಈಗ ನೂರಾರು ಜಾತಿಗಳು ಹುಟ್ಟಿಕೊಂಡಿವೆ. ಸಾಮಾಜಿಕ ನ್ಯಾಯ ದೊರಕಬೇಕೆಂದು ಶ್ರಮಿಸಿದರು. ಪ್ರಜಾಪ್ರಭುತ್ವಕ್ಕೆ ಬೆಲೆ ಸಿಗಬೇಕಾದರೆ ವಿಕೃತಿಗಳು ಮರೆಯಾಗಿ ನಾವೆಲ್ಲ ಒಂದು ಎಂಬ ಭಾವನೆ ಬೆಳೆಯಬೇಕು. ಮುಂದಿನ ಪೀಳಿಗೆ ಸರಿಯಾದ ಮಾರ್ಗದರ್ಶನದಲ್ಲಿ ಸಾಗಬೇಕು ಎಂದರು.

ಹಿಂದೆ ನಮ್ಮ ದೇಶದವರನ್ನು ಜಗತ್ತಿನ ಬೇರೆ ದೇಶಗಳು ನಿಕೃಷ್ಟವಾಗಿ ಕಾಣುತ್ತಿದ್ದರು. ಆದರೆ ಕಳೆದ 5ವರ್ಷಗಳಿಂದ ದೇಶದ ಪರಿಸ್ಥಿತಿ ಬದಲಾಗಿದೆ. ಜಗತ್ತೇ ನಮ್ಮ ಕಡೆ ತಿರುಗಿ ನೋಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಐಟಿಐ ಕಾಲೇಜು ಪ್ರಾಂಶುಪಾಲ ಮಲ್ಲರಾಜೇ ಅರಸು, ಮೈಸೂರು ನ್ಯಾಯಾಲಯದ ವಕೀಲರಾದ ಉಮೇಶ್ ಎಸ್, ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಅಧ್ಯಕ್ಷ ಬಿ.ಎಸ್.ಪಾರ್ಥಸಾರಥಿ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: