ಪ್ರಮುಖ ಸುದ್ದಿ

ವಿಶ್ವ ತಾಯಂದಿರ ದಿನದಂದೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಐರನ್ ಲೇಡಿ ಆಫ್ ಇಂಡಿಯಾ

ರಾಜ್ಯ(ಬೆಂಗಳೂರು),ಮೇ.13:- ಐರನ್ ಲೇಡಿ ಆಫ್ ಇಂಡಿಯಾ, ಮಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ವಿಶ್ವ ತಾಯಂದಿರ ದಿನದಂದೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನ ಕ್ಲೌಡ್ ನೈನ್ ಆಸ್ಪತ್ರೆಯಲ್ಲಿ 46ವರ್ಷದ ಇರೋಮ್ ಶರ್ಮಿಳಾ ಅವರು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಮಕ್ಕಳಿಗೆ ನಿಕ್ಸ್ ಶಕಿ, ಅಟಮನ್ ತಾರಾ ಎಂದು ಹೆಸರಿಡಲಾಗಿದ್ದು, ಮಕ್ಕಳ ಚಿತ್ರವನ್ನು ಕೆಲ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ.

ಇರೋಮ್ ಶರ್ಮಿಳಾ ಚಾನು ತಮ್ಮ ಬಹುಕಾಲದ ಸಂಗಾತಿ ಡೆಸ್ಮಂಡ್ ಕುಟಿನ್ಹೊ ಅವರನ್ನು 2017ರಲ್ಲಿ ವಿವಾಹವಾಗಿದ್ದರು. ಡೆಸ್ಮಂಡ್ ಕುಟಿನ್ಹೊ ಮೂಲತಃ ಬ್ರಿಟಿಷ್ ನಾಗರೀಕರಾಗಿದ್ದು, ವಿಶೇಷ ವಿವಾಹ ಕಾಯ್ದೆ ಅಡಿ ಇರೋಮ್ ಶರ್ಮಿಳಾ ಅವರನ್ನು ಆಗ ಉಪ ನೋಂದಣಾಧಿಕಾರಿಯಾಗಿದ್ದ ರಾಧಾಕೃಷ್ಣನ್ ಅವರ ಸಮ್ಮುಖದಲ್ಲಿ ವಿವಾಹವಾಗಿದ್ದರು.

ಮಣಿಪುರದ ಉಕ್ಕಿನ ಮಹಿಳೆ, ನಾಗರಿಕ ಹಕ್ಕುಗಳ ಕಾರ್ಯಕರ್ತೆ, ಕವಯಿತ್ರಿಯಾಗಿರುವ ಇರೋಮ್ ಶರ್ಮಿಳಾ, ಸಶಸ್ತ್ರಪಡೆಯ ವಿಶೇಷ ಅಧಿಕಾರ ಕಾಯಿದೆ 1958 ಅನ್ನು ವಾಪಸ್ ಪಡೆಯಲು ಆಗ್ರಹಿಸಿ 2000 ನವೆಂಬರ್ 3ರಿಂದ ನಿರಶನ ಆರಂಭಿಸಿದ್ದರು. ರಾಜ್ಯದಲ್ಲಿ ಸಶಸ್ತ್ರಪಡೆಯು ವಿಶೇಷಾಧಿಕಾರ ಬಳಸಿಕೊಂಡು ಮಹಿಳೆಯರ ಮೇಲೆ ಅತ್ಯಾಚಾರ, ಅಮಾಯಕರ ಹತ್ಯೆಯಲ್ಲಿ ತೊಡಗಿರುವುದರ ವಿರುದ್ಧ ಸಿಡಿದೆದ್ದು ಏಕಾಂಗಿಯಾಗಿ 14 ವರ್ಷಗಳಕಾಲ ಸುದೀರ್ಘ ಪ್ರತಿಭಟನೆ ಕೈಗೊಂಡಿದ್ದರು. ಬಳಿಕ 2014ರಲ್ಲಿ ತಮ್ಮ ಉಪವಾಸ ಪ್ರತಿಭಟನೆ ಅಂತ್ಯಗೊಳಿಸಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು. ಬಳಿಕ 2017ರಲ್ಲಿ ಬ್ರಿಟಿಷ್ ಪ್ರಜೆ ಡೆಸ್ಮಂಡ್ ಕುಟಿನ್ಹೋ ಅವರನ್ನು ವಿವಾಹವಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: