ಪ್ರಮುಖ ಸುದ್ದಿಮೈಸೂರು

ಆಧ್ಯಾತ್ಮಿಕರಾದರೆ ಮಾತ್ರ ಭಾರತದ ಪುನರುತ್ಥಾನ ಸಾಧ್ಯ : ಹೆಚ್.ಕೆ.ಪಾಟೀಲ್ ಅಭಿಮತ

ನಾವು ಆಧ್ಯಾತ್ಮಿಕರಾಗದಿದ್ದರೆ ಭಾರತದ ಪುನರುತ್ಥಾನ ಸಾಧ್ಯವಿಲ್ಲ ಎಂದು ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ.ಪಾಟೀಲ್ ಅಭಿಪ್ರಾಯಪಟ್ಟರು.

ಶನಿವಾರ ಮೈಸೂರಿನ ಮುಕ್ತವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ವೇದಾಂತಭಾರತೀ ದಶಮಃ ಸೌಂದರ್ಯಲಹರೀ ಪಾರಾಯಣೋತ್ಸವಃ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದು ಅತ್ಯಂತ ಸಂತೋಷದ ಹಾಗೂ ಪವಿತ್ರವಾದ ಸಂದರ್ಭ. ಸೌಂದರ್ಯಲಹರೀ ಪಾರಾಯಣದ ಮೂಲಕ ಆಧ್ಯಾತ್ಮದಲ್ಲಿ ಆಸಕ್ತಿ ಹುಟ್ಟಿಸುವ, ಆತ್ಮವಿಶ್ವಾಸ ವೃದ್ಧಿಸುವ, ಮನಸ್ಸುಗಳಿಗೆ ಚೈತನ್ಯ ತುಂಬುವ ಮಹಾಯಜ್ಞವನ್ನು ಶಂಕರಭಾರತೀ ಸ್ವಾಮೀಜಿ ಮಾತೆಯರಿಗೆ, ಮಹನೀಯರಿಗೆ, ವಿದಾರ್ಥಿಗಳಿಗೆ, ನಮ್ಮ ನಿಮ್ಮೆಲ್ಲರಿಗಾಗಿ ಆಯೋಜಿಸಿದ್ದಾರೆ. ಆಧ್ಯಾತ್ಮದಿಂದ ಮಾತ್ರ ದೇಶದ ಪುನರುತ್ಥಾನ ಸಾಧ್ಯವಿದ್ದು ಎಲ್ಲರೂ ಆಧ್ಯಾತ್ಮದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ವಾಮಿ ವಿವೇಕಾನಂದರು ಭೋಗಪ್ರಧಾನ ಜೀವನಕ್ಕೆ ಮಾರುಹೋಗಿ ಪಾಶ್ಚಿಮಾತ್ಯ ಸಂಸ್ಕೃತಿಯ ಬೆನ್ನತ್ತಿ ಹೋದರೆ ಮುಂದಿನ ಮೂರು ತಲೆಮಾರಿನಲ್ಲಿ ಜನಾಂಗವೇ ನಾಶವಾಗುತ್ತದೆ ಎಂಬ ಎಚ್ಚರಿಕೆ ನೀಡಿದ್ದರು. ಅವರಲ್ಲಿನ ಆ ಆತಂಕ ಇಂದು ನಿಜವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಎಲ್ಲರೂ ನಮ್ಮ ತನವನ್ನು ಬಿಟ್ಟು, ನಮ್ಮಲ್ಲಿನ ಸ್ವಂತಿಕೆಯನ್ನು ತೊರೆದು ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗುತ್ತಿದ್ದು, ಭಾರತದ ಭವ್ಯ ಪರಂಪರೆಯನ್ನು ಮರೆಯುತ್ತಿದ್ದೇವೆ. ಇಂತಹ ಸಂದಿಗ್ದ ಸಂದರ್ಭದಲ್ಲಿ ಸೌಂದರ್ಯಲಹರೀ ಪಾರಾಯಣ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಎಂದು ಹೇಳಿದರು.

ಶ್ರದ್ಧೆ, ಸಹನೆ, ಸತ್ಯದ ಪ್ರಯತ್ನಗಳಿಂದ ಮಾತ್ರ ಧ್ಯೇಯ ಸಾಧಿಸಲು ಸಾಧ್ಯ. ಆತ್ಮವಿಶ್ವಾಸವಿದ್ದರೆ ವಿಜಯಲಕ್ಷ್ಮಿ ತಾನಾಗಿಯೇ ಒಲಿಯುತ್ತಾಳೆ. ಅಂತಹ ಆತ್ವವಿಶ್ವಾಸ ವೃದ್ಧಿಸುವ ವಾತಾವರಣ ಹಾಗೂ ಅನುಕೂಲಗಳನ್ನು ಸೌಂದರ್ಯ ಲಹರಿ ಮಾಡುತ್ತದೆ. ಇಷ್ಟು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಆಸಕ್ತಿ ಮೂಡಿಸುವ ಮಹಾನ್ ಕಾರ್ಯವನ್ನು ಶಂಕರ ಭಾರತೀ ಸ್ವಾಮೀಜಿ ಮಾಡುತ್ತಿದ್ದು ವರ್ಗ, ಜಾತಿ, ಧರ್ಮದ ತಾರತಮ್ಯವನ್ನು ಅಳಿಸಿ ಹಾಕಲು ಪ್ರಯತ್ನಪಡುತ್ತಿದ್ದಾರೆ. ಅವರು ಯಾರನ್ನೂ ಜಾತಿ, ಧರ್ಮ, ಪಂಗಡಗಳಿಂದ ಗುರುತಿಸುವುದಿಲ್ಲ. ಎಲ್ಲರೂ ಒಂದೇ ಎಂಬ ಮನೋಭಾವದಲ್ಲಿ ಕಾಣುತ್ತಾರೆ. ಆದರೆ ನಾವು ತೋರಿಕೆಗೆ ಎಲ್ಲರೂ ಒಂದೇ ಎಂದು ಬಿಂಬಿಸಿಕೊಂಡರೂ ಒಳಗೆ ಧರ್ಮಗ್ರಂಥ ಸೇರಿದಂತೆ ಎಲ್ಲವನ್ನೂ ವಿಂಗಡಿಸುತ್ತೇವೆ. ಎಲ್ಲರೂ ಒಂದೇ ಎಂಬ ಭಾವ ಮೂಡುವವರೆಗೂ ಐಕ್ಯತೆ ಮೂಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ವೇಳೆ ಸಹಸ್ರ ಮಾತೆಯರು, ಮಹನೀಯರು, ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಾವಿರಾರು ವಿದ್ಯಾರ್ಥಿಗಳು ಏಕಕಂಠದಲ್ಲಿ ಸೌಂದರ್ಯಲಹರೀ ಹಾಗೂ ದಕ್ಷಿಣಾಮೂರ್ತಿ ಅಷ್ಟಕಗಳ ಸಮರ್ಪಣೆ ಮಾಡಿದರು. ಶಂಕರಭಾರತೀ ಸ್ವಾಮೀಜಿ ಎಲ್ಲರಿಗೂ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ವಾಸು, ಜಿ.ಟಿ.ದೇವೇಗೌಡ, ಮಾಜಿ ಸಚಿವರಾದ ಹೆಚ್.ವಿಶ್ವನಾಥ್, ಎಸ್.ಎ.ರಾಮದಾಸ್, ಮಾಜಿ ಮುಡಾ ಅಧ್ಯಕ್ಷ ಮೋಹನ್‍ಕುಮಾರ್, ಕೌಟಿಲ್ಯ ರಘು, ಮುಕ್ತವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: