ಕರ್ನಾಟಕಪ್ರಮುಖ ಸುದ್ದಿ

ಮೋದಿ ನೇಣು ಹಾಕಿಕೊಳ್ಳುತ್ತಾನೆಯೇ?: ವಿವಾದವಾದ ಖರ್ಗೆ ಆಕ್ರೋಶ

ಬೆಂಗಳೂರು (ಮೇ 13): ವಿರೋಧ ಪಕ್ಷಗಳು ಈ ಬಾರಿಯ ಚುನಾವಣೆಯಲ್ಲಿ 40ಕ್ಕಿಂತಲೂ ಕಡಿಮೆ ಸ್ಥಾನ ಪಡೆಯಲಿವೆ ಎಂಬ ಮೋದಿ ಭವಿಷ್ಯ ಸುಳ್ಳಾದಲ್ಲಿ ಅವರು ದಿಲ್ಲಿಯ ವಿಜಯ್ ಚೌಕದಲ್ಲಿ ನೇಣು ಹಾಕಿಕೊಳ್ಳುತ್ತಾರೆಯೇ ಎಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಶ್ನಿಸಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸುಭಾಶ್ ರಾಥೋಡ್ ಅವರ ಪರ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಈ ದೇಶದ ಭವಿಷ್ಯವನ್ನು ಬರೆಯುವವರು ಇಲ್ಲಿ ಕುಳಿತ ನೀವು, ಸುಭಾಷ್ ಅಥವಾ ನಮ್ಮ ಭವಿಷ್ಯವನ್ನು ಬರೆಯುವವರು ನೀವು; ಅದು ಬಿಜೆಪಿ ಅಥವಾ ಮೋದಿ ಕೈಯಲ್ಲಿಲ್ಲ. ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ಗೆ ಲೋಕಸಭೆಯಲ್ಲಿ 40 ಸ್ಥಾನಗಳೂ ಸಿಗುವುದಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಇದನ್ನು ನೀವು ಯಾರಾದರೂ ಒಪ್ಪುತ್ತೀರಾ? ನಾವು 40 ಸ್ಥಾನಗಳನ್ನು ಗೆದ್ದರೆ, ಮೋದಿ ದಿಲ್ಲಿಯ ವಿಜಯಚೌಕದಲ್ಲಿ ನೇಣು ಹಾಕಿಕೊಳ್ಳುತ್ತಾನೆಯೇ ಎಂದು ಪ್ರಶ್ನಿಸಿದರು.

2014ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 44 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಈ ಹೇಳಿಕೆ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಂಸದೆ ಶೋಭಾ ಕರಂದ್ಲಾಜೆ, ಇಂಥ ಹಿರಿಯ ಮುಖಂಡರಿಂದ ಯಾರೂ ಇಂಥ ಮಾತು ನಿರೀಕ್ಷಿಸಿರಲಿಲ್ಲ. ಖರ್ಗೆ ತಕ್ಷಣ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುಳ್ಳು ಆರೋಪಗಳು, ಮಾನಹಾನಿಕರ ಹೇಳಿಕೆಗಳು ಕಾಂಗ್ರೆಸ್‌ನಿಂದ ಸಾಮಾನ್ಯವಾಗಿವೆ. ಪ್ರಗತಿಪರ ಏನೂ ಇಲ್ಲ. ಅವರು ಕ್ಷಮೆ ಯಾಚಿಸಲೇಬೇಕು ಎಂದು ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ. ಭಾರತ ಸ್ವಾತಂತ್ರ್ಯ ಗಳಿಸಿದಾಗ ಮೋದಿ ಇನ್ನು ಹುಟ್ಟಿರಲೇ ಇಲ್ಲ. ಅವರು ಕಾಂಗ್ರೆಸ್ ವಿರುದ್ಧ ಮಾತನಾಡುತ್ತಲೇ ಇರುತ್ತರೆ ಹಾಗೂ ಪಕ್ಷ ಏನೂ ಮಾಡಿಲ್ಲ ಎಂದು ಹೇಳುತ್ತಲೇ ಇರುತ್ತಾರೆ ಎಂದು ಖರ್ಗೆ ಆಕ್ಷೇಪಿಸಿದರು. ಹಿಂದುಳಿದ ವರ್ಗದ ಮುಖಂಡ ಎಂದು ಹೇಳಿಕೊಳ್ಳುವ ಮೋದಿ ಸೂಪರ್ ಶ್ರೀಮಂತರಿಗಷ್ಟೇ ನೆರವಾಗುತ್ತಿದ್ದಾರೆ ಎಂದು ಟೀಕಿಸಿದರು. (ಎನ್.ಬಿ)

Leave a Reply

comments

Related Articles

error: