ಪ್ರಮುಖ ಸುದ್ದಿ

ಮುಳವಾಡ ಏತನೀರಾವರಿ ಯೋಜನೆ ವಿಜಯಪುರ ಮುಖ್ಯ ಕಾಲುವೆಯಿಂದ ಬುಧವಾರದಿಂದ ನೀರು ಹರಿಸಲು ಸಿದ್ಧತೆ ಪೂರ್ಣ : ಸಚಿವ ಎಂ.ಬಿ.ಪಾಟೀಲ್

ರಾಜ್ಯ(ವಿಜಯಪುರ)ಮೇ. 13:-  ಮುಳವಾಡ ಏತನೀರಾವರಿ ಯೋಜನೆ ವಿಜಯಪುರ ಮುಖ್ಯ ಕಾಲುವೆಯಿಂದ ಬುಧವಾರದಿಂದ ನೀರು ಹರಿಸಲು ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಚಿಂಚೋಳಿ ಉಪಚುನಾವಣೆಯಲ್ಲಿ ಪ್ರಚಾರಕಾರ್ಯದಲ್ಲಿ ತೊಡಗಿರುವ ಅವರು, ವಿಜಯಪುರ ಮುಖ್ಯ ಕಾಲುವೆಗೆ ನೀರು ಹರಿಸಲು ವಿನಂತಿಸಿ, ವಿವಿಧ ಗ್ರಾಮಗಳ ರೈತರ ಮನವಿ ಕುರಿತು   ಪ್ರತಿಕ್ರಿಯಿಸಿದ ಅವರು, “ವಿಜಯಪುರ ಮುಖ್ಯ ಕಾಲುವೆಯ ಕೂಡಗಿ ಹತ್ತಿರದ ರೈಲ್ವೆಲೈನ್ ಪಾಸಿಂಗ್ ಕಾಮಗಾರಿ ತಾಂತ್ರಿಕ ತೊಂದರೆಯಿಂದ ವಿಳಂಬದಿಂದ ಸಾಗಿದ್ದು, ಈಗಾಗಲೇ ಗುತ್ತಿಗೆ ಅವಧಿ 18ತಿಂಗಳು ಪೂರ್ಣಗೊಂಡು, ಅವಧಿ ವಿಸ್ತರಣೆಯ 6ತಿಂಗಳು ಸಹ ಮುಗಿದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಚಲಿಸುವ ರೈಲ್ವೆಲೈನ್‍ಗಳ ಕೆಳಭಾಗದಲ್ಲಿಯೇ ಬೃಹತ್ ಕಾಮಗಾರಿ ನಡೆಯುತ್ತಿರುವುದು ವಿಳಂಬಕ್ಕೆ ಕಾರಣವಾಗಿದೆ. ರೈಲುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಇಲಾಖೆಯವರು ಒಪ್ಪುತ್ತಿಲ್ಲ. ಕಳೆದ ವರ್ಷದಂತೆ ಈ ಬಾರಿಯೂ ತಾತ್ಕಾಲಿಕ ಪುಷಿಂಗ್ ಕಾಮಗಾರಿ ಮೂಲಕ ನೀರು ಹರಿಸಲು ಸೂಚಿಸಲಾಗಿದ್ದು, ಇದಕ್ಕಾಗಿ 60ಲಕ್ಷ ರೂ. ಹೆಚ್ಚುವರಿ ಅನುದಾನ ಒದಗಿಸಲಾಗಿದೆ” ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

“93ಕ್ಯೂಸೆಕ್ಸ್ ನೀರು ಹರಿಸುವ ಸಾಮರ್ಥ್ಯ ಹೊಂದಿರುವ ವಿಜಯಪುರ ಮುಖ್ಯ ಕಾಲುವೆಯಲ್ಲಿ ತಾತ್ಕಾಲಿಕ ಪೈಪ್‍ ಪು ಷಿಂಗ್‍ನಿಂದ 22ಕ್ಯೂಸೆಕ್ಸ್ ನೀರು ಮಾತ್ರ ಹರಿಯಲಿದ್ದು, ವಿಜಯಪುರ ಮುಖ್ಯ ಕಾಲುವೆಯಲ್ಲಿ 136ಕಿ.ಮೀ ಜಾಲವಾದವರೆಗೆ ನೀರು ಹರಿಸಿ, ಕಗ್ಗೋಡ, ಕುಮಟಗಿ, ಪಡಗಾನೂರ, ದೇವರಹಿಪ್ಪರಗಿ, ಮಣೂರ, ಮಾರ್ಕಬ್ಬಿನಹಳ್ಳಿ, ಬೊಮ್ಮನಜೋಗಿ ಕೆರೆಗಳನ್ನು ಹೂವಿನ ಹಿಪ್ಪರಗಿ ಶಾಖಾ ಕಾಲುವೆಯಿಂದ 40ಕಿ.ಮೀ ವರೆಗೆ ನೀರು ಹರಿಸಿ, ನಾಗವಾಡ, ಮಣೂರ, ಮುಖರ್ತಿಹಾಳ, ಅಲಕೊಪ್ಪರ, ರೂಡಗಿ ಹಾಗೂ ಬಸವನ ಬಾಗೇವಾಡಿ ಶಾಖಾ ಕಾಲುವೆಯಿಂದ 40ಕಿ.ಮೀ ನೀರು ಹರಿಸಿ, ಡೋಣುರ, ಬಿಸನಾಳ, ರೆಬಿನಾಳ, ಸಾತಿಹಾಳ ಕೆರೆಗಳನ್ನು ಮತ್ತು ತಿಡಗುಂದಿ ಶಾಖಾ ಕಾಲುವೆಗೆ 2.7ಕಿ.ಮೀ ವರೆಗೆ ನೀರು ಹರಿಸಿ, ಮದಭಾವಿ, ನಾಗಠಾಣ ಕೆರೆಗಳನ್ನು ಕುಡಿಯುವ ನೀರಿನ ಅಗತ್ಯಕ್ಕೆ ಮಾತ್ರ ತುಂಬಿಸಲು ಉದ್ದೇಶಿಸಲಾಗಿದೆ. ಅಲ್ಲದೇ ಕೆಲವು ಕೆರೆಗಳ ಮೇಲೆ ಬಹುಹಳ್ಳಿಗಳ ಕುಡಿಯುವ ನೀರಿನ ಯೋಜನೆಗಳು ಅವಲಂಬಿತವಾಗಿದ್ದು, ಆ ಎಲ್ಲ ಯೋಜನೆಗಳಿಗೆ ವಿಜಯಪುರ ಮುಖ್ಯ ಕಾಲುವೆಗಳಿಂದ ನೀರು ಹರಿಸುವದರಿಂದ ಅನುಕೂಲವಾಗಲಿದೆ” ಎಂದು  ಗೃಹ ಸಚಿವ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನೀರಿನ ತೀವ್ರ ಅಭಾವ ಇರುದರಿಂದಾಗಿ ವಾರಾಬಂಧಿ ಪದ್ಧತಿಯನ್ನು ಕಟ್ಟು ನಿಟ್ಟಾಗಿ ಅನುಸರಿಸಿ ನೀರು ಹರಿಸಲಾಗುತ್ತಿದ್ದು, ರೈತರು ಸಹಕರಿಸಬೇಕು ಎಂದು ಸಚಿವ ಪಾಟೀಲ್ ರೈತರಲ್ಲಿ ಮನವಿ ಮಾಡಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: