ಪ್ರಮುಖ ಸುದ್ದಿಮೈಸೂರು

ಇತ್ತೀಚಿನ ದಿನಗಳಲ್ಲಿ ರಾಜಕಾರಣಿ ಅಂದರೇನೆ ತಿರಸ್ಕಾರದ ಭಾವನೆ ಬೆಳೆಯುತ್ತಿದ್ದು ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯಗಳು ಬಹಳ ಅಪರೂಪ : ಡಿ.ಹೆಚ್.ಶಂಕರಮೂರ್ತಿ ವಿಷಾದ

'ತೋಂಟದಾರ್ಯ ಅಭಿನಂದನೆ ಮತ್ತು ಕೃತಿಗಳ ಲೋಕಾರ್ಪಣೆ'

ಮೈಸೂರು,ಮೇ.14:- ಇತ್ತೀಚಿನ ದಿನಗಳಲ್ಲಿ ರಾಜಕಾರಣಿ ಅಂದರೇನೆ ತಿರಸ್ಕಾರದ ಭಾವನೆ ಬೆಳೆಯುತ್ತಿದ್ದು ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯಗಳು ಬಹಳ ಅಪರೂಪ ಎಂದು ಕರ್ನಾಟಕ ವಿಧಾನ ಪರಿಷತ್ ಮಾಜಿ ಸಭಾಧ್ಯಕ್ಷ ಡಿ.ಹೆಚ್.ಶಂಕರಮೂರ್ತಿ ವಿಷಾದ ವ್ಯಕ್ತಪಡಿಸಿದರು.

ಅವರಿಂದು ವಿಜಯನಗರದ ಮೊದಲನೇ ಹಂತದಲ್ಲಿರುವ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ವಿಧಾನ ಪರಿಷತ್ ಮಾಜಿ ಸದಸ್ಯ ‘ತೋಂಟದಾರ್ಯ ಅಭಿನಂದನೆ ಮತ್ತು ಕೃತಿಗಳ ಲೋಕಾರ್ಪಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇನ್ನಷ್ಟು ಕೆಲಸ ಮಾಡಲು ಪ್ರೋತ್ಸಾಹ ಸಿಗುವಂತೆ ಮಾಡುವ ಕಾರ್ಯ ಅಭಿನಂದನೆ.  ರಾಜಕೀಯ ತೋಂಟದಾರ್ಯ ಅವರು ಆರಿಸಿಕೊಂಡ ರಂಗ . ಈ ದಿನಗಳಲ್ಲಿ ರಾಜಕೀಯದಲ್ಲಿ ಕೆಲಸಮಾಡತಕ್ಕ ರಾಜಕಾರಣಿಗಳು ಅಂದರೆ ಎದುರಿಗೆ ಸಿಕ್ಕಾಗ ಅವರಿಗೆ ಸೌಜನ್ಯತೆಯಿಂದ ಒಂದೆರಡು ಒಳ್ಳೆಯ ಮಾತನ್ನಾಡಿ ಆ ಕಡೆ ಹೋದಾಗ ತಿರಸ್ಕಾರದ ಭಾವನೆ ವ್ಯಕ್ತಮಾಡಲಾಗುತ್ತಿದೆ. ರಾಜಕಾರಣಿ ಅಂದರೇನೆ ಅವರ ಬಗ್ಗೆ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯ ಬಹಳ ಅಪರೂಪ. ಎಲ್ಲರ ಬಗ್ಗೆಯೂ ಅದು ಯಾರು? ಏನು ಎನ್ನುವುದನ್ನು ಯೋಚಿಸದೇ ತಿರಸ್ಕಾರದಿಂದ ನೋಡತಕ್ಕ ದಿನ. ಅಂತಹ ದಿನಗಳಲ್ಲಿಯೂ ಈ ರೀತಿ ಅಭಿನಂಧನಾ ಕಾರ್ಯ ನಡೆಯುತ್ತಿದೆ ಅಂದರೆ ರಾಜಕಾರಣಿಗಳಲ್ಲಿಯೂ ಕೆಲವರು ಒಳ್ಳೆಯವರಿದ್ದಾರೆ ಎಂಬುದನ್ನು ತಿಳಿಸಲಿದೆ ಎಂದರು.

ತೋಂಟದಾರ್ಯ ಅವರು ರಾಜಕೀಯ ಪ್ರವೇಶಿಸಿದ ದಿನಗಳಲ್ಲಿ ಈ ಸ್ಥಾನ ಸಿಗಲಿದೆ ಎಂಬ ನಂಬಿಕೆ ಯಾರಿಗೂ ಇರಲಿಲ್ಲ. ತುರ್ತುಪರಿಸ್ಥಿತಿಯಲ್ಲಿ ಜೈಲಿಗೆ ಹೋಗಿ ಹೊರಗೆ ಬರುತ್ತೇವೆಂಬ ನಂಬಿಕೆ ಕೂಡ ಇರಲಿಲ್ಲ. ಸಾಮಾಜಿಕವಾಗಿ ಕೆಲಸ ಮಾಡಿ ಜನಮನ್ನಣೆ ಗಳಿಸಿದರು. ಎಲ್ಲರೂ ಹೋಗಿಲ್ಲ. ಒಳ್ಳೆಯವರೂ ಇದ್ದಾರೆ. ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಕಾರ್ಯ ಸಮಾಜಕ್ಕೆ ಪ್ರೇರಣೆಯಾಗಲಿ. ಇನ್ನಷ್ಟು ಹೆಚ್ಚು ಕೆಲಸ ಮಾಡುವ ಉತ್ಸಾಹ ನೀಡಲಿ ಎಂದು ಶುಭ ಹಾರೈಸಿದರು.

ಅಭಿನಂದನಾ ನುಡಿಯನ್ನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ  ಸನ್ಮಾನ ಅಂದರೆ ವ್ಯಕ್ತಿಗೆ ಸಮ್ಮಾನವಲ್ಲ. ಸಮ್ಮಾನವನ್ನು ನಿರೀಕ್ಷಿಸುವವರು ತೋಂಟದಾರ್ಯರೂ ಅಲ್ಲ. ಸಂಸ್ಕೃತಿಯನ್ನು ಸಾರ್ವಜನಿಕ ಜೀವನದಲ್ಲಿ ಬಿಂಬಿಸುತ್ತಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಸಂಸ್ಕೃತಿಗೆ ಸಲ್ಲಿಸಿದ ಗೌರವ ಎಂದರು. ಒಡನಾಡಿಗಳು ಒಡಹುಟ್ಟಿದವರಿಗಿಂತ ಶ್ರೇಷ್ಠರಾಗಿರುತ್ತಾರೆ. ಪರಸ್ಪರ ಬಾಂಧವ್ಯದ ಬೆಸುಗೆ ಬಿಡಿಸಲಾಗದ್ದು. ಅಂತಃಕರಣಪೂರ್ವಕವಾಗಿ ಕಷ್ಟಸುಖಗಳಲ್ಲಿ ಭಾಗವಹಿಸುವವರು ಎಂದು ತಿಳಿಸಿದರು. ನಾವಿಬ್ಬರು 1971ರಿಂದ ಒಡನಾಡಿಗಳು. 50ವರ್ಷಗಳು ಕಳೆಯುತ್ತ ಬಂದರೂ ನಮ್ಮ ಒಡನಾಟಕ್ಕೆ ಅಡ್ಡಿ ಅತಂಕ ಬಂದಿಲ್ಲ. ಅವರು ಜೆ.ಎಸ್.ಎಸ್ ಪರಿವಾರದಲ್ಲಿದ್ದರು. ನಮ್ಮಲ್ಲಿ ರಕ್ಷತ ಸಂಬಂಧವಿಲ್ಲದಿದ್ದರೂ ರಾಷ್ಟ್ರೀಯತೆಯ ಸಂಸ್ಕಾರದ ಸಂಬಂಧವಿದೆ. ಅದು ಎಲ್ಲರನ್ನೂ ಒಂದುಗೂಡಿಸತ್ತೆ ಎಂದರು. ಅವರು ಸಾಮಸ್ಕೃತಿಕ ರಾಯಭಾರಿಯಾಗಿ ಸಮರ್ಥವಾಗಿ ಪರಿಚಯಿಸುವ ಕಾರ್ಯವನ್ನು ಅರ್ಥಪೂರ್ಣವಾಗಿ ನಡೆಸುತ್ತ ಬಂದಿದ್ದಾರೆ. ಸಂಸ್ಕೃತಿಯ ಪ್ರಚಾರ ಕಾರ್ಯ ನಿರ್ವಿಘ್ನವಾಗಿ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.

ವ್ಯಕ್ತಿಗೆ ಜೀವನದಲ್ಲಿ ಪ್ರಚಾರ, ಸಂಪತ್ತು, ಮಾನ್ಯತೆ ಸಿಗಬಹುದು. ಅನೇಕ ವ್ಯಕ್ತಿಗಳು ಪ್ರಚಾರಪ್ರಿಯರಾಗಿರುತ್ತಾರೆ. ಮಾನ್ಯತೆಗಾಗಿ ಹಪಹಪಿಸುತ್ತಾರೆ. ಸಂಪತ್ತನ್ನು ಗಳಿಸುವ ಸಲುವಾಗಿ ಹಲವು ಮಾರ್ಗ ಹಿಡಿಯುತ್ತಾರೆ. ಆದರೆ ಜೀವನದ ಅಂತ್ಯದವರೆಗಿದ್ದು, ಆ ವ್ಯಕ್ತಿಗೆ ಎಲ್ಲರೂ ಇಷ್ಟಪಡಬಹುದಾದ ವ್ಯಕ್ತಿತ್ವ ಕೊಡಲಾರವು. ವ್ಯಕ್ತಿತ್ವ ಯಾವುದು? ನಾನು ಯಾವ ಸಂಸ್ಥೆಯ ಘಟಕವಾಗಿದ್ದೇನೋ, ಯಾವ ಸಮಾಜದ, ರಾಷ್ಟ್ರದ ಅಂಗವಾಗಿದ್ದೇನೋ ಯಾವ ವಿಚಾರವನ್ನು ಸಹಜದಿಂದ ಸ್ವೀಕರಿಸಿದ್ದೇನೋ ಜೀವನ ಪರ್ಯಂತ ಅವುಗಳಿಗಾಗಿಯೇ ಬದುಕುವುದು.  ಬದ್ಧತೆಯಿಂದ ವ್ಯಕ್ತಿಗೆ ವ್ಯಕ್ತಿತ್ವ ಸಿಗಲಿದೆ ಎಂದರು.

ಕಾರ್ಯಕ್ರಮದಲ್ಲಿ ತೋಂಟದಾರ್ಯ ಮತ್ತು ಅವರ ಪತ್ನಿ ಡಾ.ಕಮಲಕುಮಾರಿ ಅವರನ್ನು ಅಭಿನಂದಿಸಲಾಯಿತು. ಗುರು ಎಸ್ ಬಳೆ ರಚಿಸಿದ ಶಕ್ತಿ ‘ವಿಶಿಷ್ಟಾದ್ವೈತ’ ‘ಪಂಚಪೀಠಗಳ ಪರಂಪರೆ’ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.

ಈ ಸಂದರ್ಭ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು, ಕುಂದೂರುಮಠದ ಡಾ.ಶೆರ್ ಚಂದ್ರ ಸ್ವಾಮಿಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಡಾ.ಗೊ.ರು.ಚನ್ನಬಸಪ್ಪ, ಶಾಸಕ ಎಸ್.ಎ.ರಾಮದಾಸ್, ವಿಧಾನಪರಿಷತ್ ಮಾಜಿ ಸದಸ್ಯ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: