ಮೈಸೂರು

ಮೈಸೂರಿನಲ್ಲಿ ಮೆಗಾ ಕ್ಲಿಸ್ಟರ್ ಯೋಜನೆ ಅನುಷ್ಠಾನಕ್ಕೆ ಕೇಂದ್ರದಿಂದ ಅನುಮತಿ

ಕೇಂದ್ರ ಸರ್ಕಾರದ ಪರಿಷ್ಕೃತ ಸಮಗ್ರ ವಿದ್ಯುತ್ ಮಗ್ಗ ಅಭಿವೃದ್ಧಿ ಯೋಜನೆಯಡಿ ದೇಶದಲ್ಲಿ ಒಟ್ಟು 6 ಕ್ಲಸ್ಟರ್ ಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೀಡಿರುವ ತಾತ್ವಿಕ ಅನುಮೋದನೆಯಲ್ಲಿ ಮೈಸೂರು ಮೆಗಾ ಸಿಲ್ಕ್ ಕ್ಲಸ್ಟರ್ ಕೂಡ ಒಂದಾಗಿದೆ ಎಂದು  ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ‍್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ‍್ಯಕ್ಷ ಗೋ.ತಿಪ್ಪೇಶ್ ಹೇಳಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕವು ರೇಷ್ಮೆ ಉತ್ಪಾದನೆಯಲ್ಲಿ ದೇಶದಲ್ಲೇ ಪ್ರಥಮ ಸ‍್ಥಾನದಲ್ಲಿರುವುದನ್ನು ಪರಿಗಣಿಸಿ, ಮೈಸೂರು ಜಿಲ್ಲೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಹಿನ್ನೆಲೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಮೈಸೂರಿನಲ್ಲಿ ಮೆಗಾ ಸಿಲ್ಕ್ ಕ್ಲಸ್ಟರ್ ಯೋಜನೆಯನ್ನು ಅನುಷ್ಠಾನಗೊಳಿಸಲು ಮಂಜೂರಾತಿ ನೀಡಿದೆ ಎಂದರು.

ಈ ಯೋಜನೆಯನ್ನು ಸಾರ್ವಜನಿಕ ಸಹಭಾಗಿತ್ವದ ಮಾದರಿಯಲ್ಲಿ ಪ್ರತ್ಯೇಕ ಎಸ್ ಪಿ ವಿ ರಚಿಸಿ ಅದರ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಈ ಯೋಜನೆಗೆ ಸುಮಾರು 50 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸಾಮರ್ಥ್ಯವಿರುವ ಉದ್ದೇಶಿತ ಎಸ್ ಪಿ ವಿ ರಚಿಸಲು 25 ಆಸಕ್ತ ಉದ್ದಿಮೆದಾರರನ್ನು ಗುರುತಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.

ನಿಗಮದ ಪದಾಧಿಕಾರಿಗಳಾದ ಜಯಪ್ರಕಾ‍‍ಶ್, ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಮೂರ್ತಿ, ಕೋದಂಡರಾಮ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

comments

Related Articles

error: