ಪ್ರಮುಖ ಸುದ್ದಿ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ : ಅರ್ಹರಿಗೆ ಉದ್ಯೋಗ ಕಲ್ಪಿಸಲು ಜಿ.ಪಂ ಸಿಇಒ ಕೆ.ಲಕ್ಷ್ಮೀಪ್ರಿಯ ಸೂಚನೆ

ರಾಜ್ಯ(ಮಡಿಕೇರಿ) ಮೇ 15 :- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಪಾತ್ರ ಪ್ರಮುಖವಾಗಿದ್ದು, ಆ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಮೂಲಕ ಅರ್ಹರಿಗೆ ಉದ್ಯೋಗವನ್ನು ಕಲ್ಪಿಸಿ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯ ಸೂಚನೆ ನೀಡಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಗರದ ಕೋಟೆ ಹಳೇ ವಿಧಾನಸಭಾಂಗಣದಲ್ಲಿ ನಡೆಯಿತು.
ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಿಇಒ ಕೆ.ಲಕ್ಷ್ಮಿಪ್ರಿಯಾ ಅವರು ಗ್ರಾಮೀಣ ಪ್ರದೇಶದ ಬಡವರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಮುಖವಾಗಿದ್ದು, ವೈಯಕ್ತಿಕ ಹಾಗೂ ಸಮುದಾಯ ಕೆಲಸಗಳನ್ನು ನೀಡಿ ಉದ್ಯೋಗ ಕಲ್ಪಿಸುವಂತಾಗಬೇಕು ಎಂದರು.
ಸರ್ಕಾರದ ಹೆಚ್ಚಿನ ಮೊತ್ತದ ಅನುದಾನದಿಂದ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಈ ಯೋಜನೆಯು ಸಹಕಾರಿಯಾಗುತ್ತದೆ. ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಳ್ಳುವ ಮೂಲಕ ಕಾರ್ಯಾಗಾರದ ಸದ್ಬಳಕೆ ಪಡೆದುಕೊಳ್ಳವ ಮೂಲ ಉದ್ದೇಶವನ್ನು ಸಾಧಿಸಲು ಪ್ರಯತ್ನ ಪಡಬೇಕಾಗಿದೆ ಎಂದು ಅವರು ಕರೆ ನೀಡಿದರು.
ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ ಅವರು ಮಾತನಾಡಿ ಕೇಂದ್ರ ಪುರಸ್ಕೃತ ಯೋಜನೆಗಳು ಹಾಗೂ ವಿವಿಧ ಇಲಾಖೆಗಳ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧಿಸಿದಂತೆ ಹಣಕಾಸು ಹಾಗೂ ತಾಂತ್ರಿಕ ಒಗ್ಗೂಡುವಿಕೆ ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಕ್ರಮವಹಿಸಬೇಕಿದೆ ಎಂದರು.
ವಿವಿಧ ಇಲಾಖೆಗಳ ಹಣಕಾಸಿನ ಮತ್ತು ತಾಂತ್ರಿಕ ನಿರ್ವಹಣೆ ಪಡೆದು, ಉದ್ಯೋಗ ಕಲ್ಪಿಸುವುದರ ಜೊತೆಗೆ ವೈಯಕ್ತಿಕ ಸವಲತ್ತು ಒದಗಿಸುವಂತಾಗಬೇಕು ಎಂದರು.
ರೈತರ ಜಮೀನು ಸಮತಟ್ಟು ಮಾಡುವುದು, ಕಾಂಪೋಸ್ಟ್ ಗೊಬ್ಬರ ವಿತರಣೆ, ಕಣ ನಿರ್ಮಾಣ, ಕೆರೆಗಳ ಹೂಳು ತೆಗೆಯುವುದು, ರಸ್ತೆ ಬದಿ ಗಿಡ ನೆಡುವುದು, ಅರಣ್ಯೀಕರಣ, ಕೈತೋಟ, ಗೋದಾಮುಗಳ ನಿರ್ಮಾಣ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉದ್ಯೋಗ ಸೃಜನ ಮಾಡುವಂತಾಗಬೇಕು ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿನ ಬಡವರ ಜೀವನೋಪಾಯ ಬಲಪಡಿಸುವುದು, ಪಂಚಾಯತ್ ರಾಜ್ ಸಂಸ್ಥೆಗಳನ್ನು ಉತ್ತಮ ಪಡಿಸುವುದು, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಆಯೋಜಿಸಿ ಸೂಚನಾ ಫಲಕ ಅಳವಡಿಸುವುದು, ಮತ್ತಿತರ ಕಾಮಗಾರಿಗಳಿಗೆ ಯೋಜನೆಗಳನ್ನು ರೂಪಿಸುವುದರ ಮೂಲಕ ಹಲವಾರು ಉದ್ದೇಶಗಳನ್ನು ಹೊಂದಿದೆ ಎಂದು ತಿಳಿಸಿದರು.
ರಾಷ್ಟ್ರದಲ್ಲಿ ಶೇ.65 ರಷ್ಟು ಜನರು ಕೂಡ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ದಿನಕೂಲಿಯವರನ್ನು ಬಲತ್ಕಾರದಿಂದ ಕೆಲಸ ಮಾಡಿಸುವಂತಿಲ್ಲ, ಹಾಗೂ ಕೆಲಸಕ್ಕೆ ಅರ್ಜಿ ಹಾಕಿದವರಿಗೆ ಉದ್ಯೋಗ ಕಲ್ಪಿಸಬೇಕಿದೆ. ಗ್ರಾಮೀಣ ಪ್ರದೇಶದ ಬಡಜನರಿಗೆ ಒಂದು ವರ್ಷದಲ್ಲಿ ಕನಿಷ್ಠ ನೂರು ದಿನ ಕೂಲಿ ನೀಡುವುದು ಮುಖ್ಯವಾಗಿದೆ ಎಂದು ತಿಳಿಸಿದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯು ಕಾನೂನಾತ್ಮಕ ರಚನೆಯಾಗಿದೆ. ಕೇಂದ್ರ, ರಾಜ್ಯ, ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್‍ನ ಕಾರ್ಯ ವೈಖರಿಯೊಂದಿಗೆ ಯೋಜನೆಗಳು ಪ್ರಾರಂಭವಾಗುತ್ತದೆ. ಆದ್ದರಿಂದ ಇಂದಿನ ಕಾರ್ಯಾಗಾರದ ಉಪಯೋಗವನ್ನು ಪಡೆದುಕೊಂಡು ಉತ್ತಮ ಯೋಜನೆಯ ಅನುಷ್ಠಾನಕ್ಕೆ ಅಧಿಕಾರಿಗಳು ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಯೋಜನೆಗೆ ಅಧಿಕಾರಿಗಳು ಪ್ರಮುಖ ಪಾತ್ರರಾಗಿರುತ್ತಾರೆ. ಗ್ರಾ.ಪಂ. ಪಿ.ಡಿ.ಒ ಗಳು ಇದರ ಪ್ರಮುಖ ರುವಾರಿಯಾಗಿದ್ದು, ಹೆಚ್ಚಿನ ಜವಾಬ್ದಾರಿ ಹೊಂದಿದ್ದಾರೆ. ಹಾಗೆಯೇ ಸರ್ಕಾರೇತರ ಸಂಘ-ಸಂಸ್ಥೆಗಳ ಸಹಯೋಗವು ಕೂಡ ಅತೀ ಅಗತ್ಯವಾಗಿದ್ದು, ಸಹಭಾಗಿತ್ವದಿಂದ ಕಾರ್ಯ ಯೋಜನೆಯನ್ನು ರೂಪಿಸುವ ಮೂಲಕ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ತಿಳಿಸಿದರು. ಕಾರ್ಯಾಗಾರದಲ್ಲಿ ಜಿ.ಪಂ.ಸಹಾಯಕ ಕಾರ್ಯದರ್ಶಿ ಬಾಬು, ಶ್ರೀಕಂಠಮೂರ್ತಿ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: