
ಕರ್ನಾಟಕಪ್ರಮುಖ ಸುದ್ದಿ
ಟೈಂಬಾಂಬ್ ಎಂದ ಜಗದೀಶ್ ಶೆಟ್ಟರ್ಗೆ ಸಿದ್ದರಾಮಯ್ಯ ತಿರುಗೇಟು
ಬೆಂಗಳೂರು (ಮೇ 15): ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೈಂ ಬಾಂಬ್ ಎಕ್ಸ್;ಪರ್ಟ್ ಆಗಿದ್ದು, ತಮ್ಮ ಅಸ್ತಿತ್ವ ತೋರಿಸಿಕೊಳ್ಳಲು ಆಗಾಗ್ಗೆ ಜೋಕುಗಳನ್ನು ಮಾಡುತ್ತಿರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ನಿನ್ನೆ ಟ್ವೀಟ್ ಮಾಡಿದ ಜಗದೀಶ್ ಶೆಟ್ಟರ್ ಅವರು, “ನಿನ್ನೆಯವರೆಗೂ ಜೆಡಿಎಸ್ ನಾಯಕರ ವಿರುದ್ಧ ಟ್ವಿಟರ್ನಲ್ಲಿ ಫೈರಿಂಗ್ ಮಾಡುತ್ತಿದ್ದ ಸಿದ್ದರಾಮಯ್ಯ ಇಂದು ತಮ್ಮ ರಾಜಕೀಯ ವಾಗ್ದಾಳಿಯ ಗುರಿಯನ್ನು ಬಿಜೆಪಿ ನಾಯಕರತ್ತ ತಿರುಗಿಸಿದ್ದಾರೆ. ದೋಸ್ತಿ ಸರ್ಕಾರಕ್ಕೆ ಸಿದ್ದರಾಮಯ್ಯನವರೇ ಕಂಟಕವಾಗಿದ್ದಾರೆ. ಈಗಾಗಲೇ ಮೈತ್ರಿ ಸರ್ಕಾರದ ಪತನಕ್ಕೆ ಸಮಯ ಫಿಕ್ಸ್ ಆಗಿದೆ. ನೇರವಾಗಿ ಹೇಳದೆ ತಮ್ಮ ಶಾಸಕರ ಬಾಯಿಂದ ಮುನ್ಸೂಚನೆ ನೀಡುತ್ತಿದ್ದಾರೆ. ಮೇ 23ರ ನಂತರ ಮೈತ್ರಿ ಸರ್ಕಾರದಲ್ಲಾಗುವ ಬದಲಾವಣೆಗಳಿಂದ ಯಾರೂ ಆಶ್ಚರ್ಯಪಡಬೇಕಿಲ್ಲ” ಎಂದಿದ್ದರು.
ಅದಕ್ಕೆ ಇಂದು ತಿರುಗೇಟು ನೀಡಿರುವ ಸಿದ್ದರಾಮಯ್ಯ ಅವರು, “ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದಾಗಿ ಪಕ್ಷದಲ್ಲಿ ಮೂಲೆಗುಂಪಾಗಿರುವ ಟೈಂ ಬಾಂಬ್ ಎಕ್ಸ್’ಪರ್ಟ್ ಜಗದೀಶ್ ಶೆಟ್ಟರ್ ಅವರು ತಮ್ಮ ರಾಜಕೀಯ ಅಸ್ತಿತ್ವ ತೋರಿಸಿಕೊಳ್ಳಲು ಆಗಾಗ್ಗೆ ಇಂತಹ ಜೋಕ್ಗಳನ್ನು ಮಾಡುತ್ತಿರುತ್ತಾರೆ. ಅವರನ್ನು ಪಕ್ಷದ ಹೊರಗೆ ಹಾಗೂ ಒಳಗೆ ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬುದೇ ಅವರ ಕೊರಗು” ಎಂದಿದ್ದಾರೆ.
ಮಾತ್ರವಲ್ಲ, “ಪಕ್ಷದೊಳಗಿನ ರಾಜಕೀಯ ವಿರೋಧಿ ಯಡಿಯೂರಪ್ಪ ಅವರಿಗೆ ಇಡ್ತಾ ಇರುವ ಟೈಂ ಬಾಂಬ್ಗಳೆಲ್ಲ ಠುಸ್ ಆಗುತ್ತಿರುವುದಕ್ಕೆ ಅವರು ಹತಾಶರಾಗಿದ್ದಾರೆ. ಅವರಿಗೆ ಸರಿಯಾಗಿ ಒಂದು ವರ್ಷ ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಬಿಟ್ಟಿಲ್ಲ. ಪಾಪ.. ಜಗದೀಶ್ಶೆಟ್ಟರ್ ಬಗ್ಗೆ ನನಗೆ ಅನುಕಂಪ ಇದೆ” ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ. (ಎನ್.ಬಿ)