ಮೈಸೂರು

ಭಾರತ ಭಾಗ್ಯ ವಿಧಾತ ಇಂದು

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್  ಅವರ 125 ನೇ ಜನ್ಮ ದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾಡಳಿತ ಸಹಯೋಗದಲ್ಲಿ ಫೆ.5 ರಂದು ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳನ್ನು ಬಿಂಬಿಸುವ ‘ಭಾರತ ಭಾಗ್ಯವಿಧಾತ ಧ್ವನಿ-ಬೆಳಕು’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಶೋಕಪುರಂನಲ್ಲಿರುವ ಸಿದ್ದಾರ್ಥ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಇಂದು ಸಂಜೆ 6.30 ಕ್ಕೆ ಕಾರ್ಯಕ್ರಮ ನಡೆಯಲಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೆಶಕರಾದ ಎನ್.ಆರ್.ವಿಶುಕುಮಾರ್ ಕಾರ್ಯಕ್ರಮದ ಪರಿಕಲ್ಪನೆ ರೂಪಿಸಿದ್ದಾರೆ. ಬಿ.ಎಂ.ಗಿರಿರಾಜ್ ನಿರ್ದೇಶನ ಮತ್ತು ಸಾಹಿತ್ಯ ನೀಡಿದ್ದಾರೆ. ಡಾ.ಕೆ.ವೈ.ನಾರಾಯಣಸ್ವಾಮಿ ಹಾಗೂ ಬಿ.ಎಂ.ಗಿರಿರಾಜ್ ಗೀತ ರಚನೆ ಮಾಡಿದ್ದಾರೆ. ಶಶಿಧರ ಅಡಪ ರಂಗವಿನ್ಯಾಸ ಮಾಡಿದ್ದು, ಪದ್ಮಿನಿ ಅಚ್ಚಿ ನೃತ್ಯ ಸಂಯೋಜಿಸಿದ್ದಾರೆ. ನಂದಕಿಶೋರ್ ಬೆಳಕು, ಪ್ರಮೋದ್ ಶಿಗ್ಗಾವ್ ವಸ್ತ್ರಾಲಂಕಾರ, ರಾಮಕೃಷ್ಣ ಬೆಳ್ತೂರು ಪ್ರಸಾಧನ ಹಾಗೂ ಎಂ.ಪಿ.ಎಂ.ವೀರೇಶ್ ಸಹ ನಿರ್ದೇಶನ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ” ಎಂದು ತಿಳಿಸಿದರು.

“ಭಾರತ ಭಾಗ್ಯವಿಧಾತ ಭಾರತದ ತಳ ಸಮುದಾಯಗಳ ಆತ್ಮಸ್ಥೈರ್ಯವನ್ನು ನೂರ್ಮಡಿಗೊಳಿಸಿದ ಮಹಾಚೇತನದ ಜೀವನ ಚರಿತೆಯಾಗಿದೆ. ನೊಂದವರ ನೋವಿಗೆ ದನಿಯಾಗಿ ನಿಂತ ಧೀಮಂತ ನಾಯಕನ ಆತ್ಮಕಥೆ ಇದಾಗಿದೆ. ತನ್ನ ಪ್ರತಿಭೆ, ಪರಿಶ್ರಮಗಳಿಂದ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ-ಪುರಸ್ಕಾರ ಗಳಿಸಿದ ಆರ್ಥಿಕ ತಜ್ಞನ ಯಶೋಗಾಥೆ. ಭಾರತ ಸಂವಿಧಾನದ ಶಿಲ್ಪಿಯೆಂದೇ ಖ್ಯಾತರಾದ ಮಹಾ ಮಾನವತಾವಾದಿಯಾದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವಗಾಥೆಯಾಗಿದೆ” ಎಂದು ಹೇಳಿದರು.

ನಂತರ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಮಾತನಾಡಿ, “ಏಪ್ರಿಲ್ 14,1891 ಭಾರತೀಯ ತಳ ಸಮುದಾಯಗಳ ಚರಿತ್ರೆಯಲ್ಲಿ ಐತಿಹಾಸಿಕ ದಿನ. ಸಮಾನತೆಯ ಸಮಾಜಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜನಿಸಿದ ಸ್ಮರಣೀಯ ದಿನ. ಪ್ರತಿ ವರ್ಷ ಈ ದಿನವನ್ನು ಅಂಬೇಡ್ಕರ್ ಜಯಂತಿ ಹೆಸರಿನಲ್ಲಿ ರಾಷ್ಟ್ರಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಜೀವನ ಸಾಧನೆಗಳನ್ನು ಬಿಂಬಿಸುವ ವಿನೂತನ ಧ್ವನಿ-ಬೆಳಕು ಕಾರ್ಯಕ್ರಮವನ್ನು ಭಾರತ ಭಾಗ್ಯವಿಧಾತ ಎನ್ನುವ ಹೆಸರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ” ಎಂದರು.

Leave a Reply

comments

Related Articles

error: