ಮೈಸೂರು

ಸ್ವಯಂ ಕಡಿವಾಣ ಹಾಕಿಕೊಳ್ಳುವ ಶಕ್ತಿ ಕವಿತೆ ಕಲ್ಪಿಸಲಿದೆ : ಡಾ.ಸಿ.ಪಿ.ಕೆ

ಮೈಸೂರಿನ  ಜೆ ಎಲ್ ಬಿ ರಸ್ತೆಯ ಐಡಿಯಲ್ ಜಾವಾ ರೋಟರಿ ಶಾಲೆ ಸಭಾಂಗಣದಲ್ಲಿ ಶನಿವಾರ ವೆಂಕಟಗಿರಿ ಪ್ರಕಾಶನದ ವತಿಯಿಂದ ಆಯೋಜಿಸಲಾಗಿದ್ದ ಸಮಾರಂಭದಲ್ಲಿ  ಕವಯಿತ್ರಿ ಎಂ.ಎಸ್.ಲಾವಣ್ಯಲಕ್ಷ್ಮಿ ರಚಿತ ‘ಭಾವಯಾನ’ ಕವನ ಸಂಕಲನವನ್ನು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, “ಕವಿಗೆ ಯಾರು ಹಿತವಚನ ಹೇಳುವುದು ಬೇಡ. ಅವರಿಗೆ ಸ್ವಯಂ ಕಡಿವಾಣ ಹಾಕಿಕೊಳ್ಳುವ ಬೌದ್ಧಿಕ ಶಕ್ತಿಯನ್ನು ಕವಿತೆ ಕಲ್ಪಿಸುತ್ತದೆ. ಕವಿತೆಯಲ್ಲಿ ಭಾವೈಕ್ಯತೆ, ಅಭಿವ್ಯಕ್ತಿ ಎಂಬ ಎರಡು ರೂಪಗಳನ್ನು ಕಾಣಬಹುದಾಗಿದೆ. ಕಾವ್ಯಗಳಲ್ಲಿ ಪ್ರತಿಭೆ, ಅಧ‍್ಯಯನ, ಸಂಯಮಗಳನ್ನು ಓದುಗರಿಗೆ ಕಲಿಸುವ ಶಕ್ತಿಯಿದೆ. ಇದನ್ನು ಬಳಸಿಕೊಂಡು ಉತ್ತಮ ಕಾವ್ಯ ರಚನೆ ಮಾಡುವುದು ಬರಹಗಾರರಿಗೆ ಬಿಟ್ಟ ವಿಚಾರ” ಎಂದರು.

ನಂತರ ಕೃತಿಯ ಬಗ್ಗೆ ಮಾತನಾಡುತ್ತಾ, “ಕವಯಿತ್ರಿ ಲಾವಣ್ಯಲಕ್ಷ್ಮಿ ಅವರು ಭಾವಯಾನ ಕವನ ಸಂಕಲನದಲ್ಲಿ 28 ಕವಿತೆಗಳನ್ನು ರಚನೆ ಮಾಡಿದ್ದಾರೆ. ಅವರು ರಚಿಸಿರುವ ಕವನಗಳಲ್ಲಿ ಹೆಣ‍್ಣು ಭ್ರೂಣ ಹತ್ಯೆ ವಿರೋಧಿಸಿ ಕವನ ಬರೆದಿರುವುದು ಹೃದಯ ಕಲಕುವ ವಿಷಮ ಸ್ಥಿತಿ. ಇದು ಇನ್ನೂ ನಮ್ಮ ಸಮಾಜದಲ್ಲಿದೆ ಎಂಬ ಅಂಶದ ಬಗ್ಗೆ ಬೆಳಕು ಚೆಲ್ಲುತ್ತದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶ್ರಾಂತ ಪ್ರಾಂಶುಪಾಲ ಪ್ರೊ.ನೀ.ಗಿರಿಗೌಡ, ಪ್ರಮತಿ ಹಿಲ್ ವ್ಯೂ ಅಕಾಡೆಮಿ ಕಾರ್ಯದರ್ಶಿ ಹಾಗೂ ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್, ಪ್ರಾಂಶುಪಾಲ ಸಿ.ಎಸ್.ಸುದರ್ಶನ , ಎಸ್ ಫಣಿರಾಜ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: