
Uncategorized
ಹಿಂದು-ಬ್ರಾಹ್ಮಣ ವಿರೋಧಿ ಪೋಸ್ಟ್: ವೈದ್ಯನ ಬಂಧನ
ಮುಂಬೈ,ಮೇ 16-ಫೇಸ್ ಬುಕ್ ನಲ್ಲಿ ಹಿಂದು-ಬ್ರಾಹ್ಮಣ ವಿರೋಧಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದ ವೈದ್ಯರೊಬ್ಬರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಡಾ.ಸುನಿಲ್ ಕುಮಾರ್ ನಿಶಾದ್ ಬಂಧಿತರಾಗಿರುವ ವೈದ್ಯ. ರವೀಂದ್ರ ತಿವಾರಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಮುಂಬೈ ಪೊಲೀಸರು ಸುನಿಲ್ ಕುಮಾರ್ ನಿಶಾದ್ ರನ್ನು ಬಂಧಿಸಿದ್ದಾರೆ.
ಕಳೆದ ಹಲವು ದಿನಗಳಿಂದ ನಿರಂತರವಾಗಿ ಫೇಸ್ ಬುಕ್ ನಲ್ಲಿ ನಿಶಾದ್ ಅವರು ಹಿಂದು ವಿರೋಧಿ ಮತ್ತು ಬ್ರಾಹ್ಮಣ ವಿರೋಧಿ ಪೋಸ್ಟ್ ಗಳನ್ನು ಹಾಕುತ್ತಿದ್ದರು. ಹೋಮಿಯೋಪಥಿ ವೈದ್ಯರಾಗಿದ್ದ ಅವರು ಫೇಸ್ ಬುಕ್ ನಲ್ಲಿ 4996 ಸ್ನೇಹಿತರನ್ನು ಹೊಂದಿದ್ದು, ಇತ್ತೀಚೆಗೆ ಇವಿಎಂ ಬಗ್ಗೆ, ಭೋಪಾಲ್ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದರು.
ಬಿಎಸ್ಪಿಯ ಕಾಂಶಿರಾಮ್ ಅವರ ಬಿಎಎಂಸಿಇಎಫ್(ಅಲ್ಪಸಂಖ್ಯಾತ ಸಮುದಾಯದ ಉದ್ಯೋಗಿಗಳ ಸಂಘಟನೆ) ಯ ಸದಸ್ಯನೆಂದು ನಿಶಾದ್ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ಗುರುವಾರ ಅವರನ್ನು ಕೋರ್ಟಿಗೆ ಹಾಜರುಪಡಿಸಲಾಗುತ್ತಿದ್ದು, ಈಗಾಗಲೇ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. (ಎಂ.ಎನ್)