ದೇಶಪ್ರಮುಖ ಸುದ್ದಿ

ಕಾಂಗ್ರೆಸ್‍ಗೆ ಪ್ರಧಾನಿ ಹುದ್ದೆ ಬೇಕಿಲ್ಲವೆಂದ ಗುಲಾಂ ನಬಿ!

ಪಾಟ್ನಾ (ಮೇ 16): ಕಾಂಗ್ರೆಸ್ಸಿಗೆ ಪ್ರಧಾನಿ ಪಟ್ಟ ಬೇಕಿಲ್ಲ, ನಮಗೆ ಎನ್‍ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದೇ ಮುಖ್ಯ ಗುರಿ ಎಂದು ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಹೇಳಿದ್ದಾರೆ. ಈ ಹೇಳಿಕೆಯಿಂದ ರಾಷ್ಟ್ರರಾಜಕಾರಣದಲ್ಲಿ ಹೊಸ ಕುತೂಹಲ ಮೂಡಿದ್ದು, ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್ ಪಕ್ಷವು ಪ್ರಧಾನಿ ಹುದ್ದೆ ತ್ಯಾಗ ಮಾಡಿದ್ದೇನೆ ಎಂಬ ಪ್ರಶ್ನೆ ಹುಟ್ಟುಹಾಕಿದೆ?

ಕಾಂಗ್ರೆಸ್ ಹಲವು 2014 ರ ಲೋಕಸಭೆ ಚುನಾವಣೆಯಿಂದಲೂ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುತ್ತ ಬಂದಿದೆ. ಆದರೆ ಫಲಿತಾಂಶ ಹತ್ತಿರವಾಗುತ್ತಿರುವಾಗ ಕಾಂಗ್ರೆಸ್ ನ ನಿಷ್ಠಾವಂತ ನಾಯಕರ ಬಾಯಲ್ಲಿ ಇಂಥ ಹೇಳಿಕೆ ಹೊರಬಂದಿದ್ದು, ಅಚ್ಚರಿ ಸೃಷ್ಟಿಸಿದೆ.

ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಪ್ರತಿನಿಧಿಯಾಗಿ ಈ ಹೇಳಿಕೆ ನೀಡಿದ್ದಾರಾ ಅಥವಾ ಅದು ಅವರ ವೈಯಕ್ತಿಕ ಅಭಿಪ್ರಾಯವಾ ಎಂಬ ಪ್ರಶ್ನೆ ಎದ್ದಿದೆ. ಗುಲಾಂ ಅವರ ಹೇಳಿಕೆಗೆ ಕಾಂಗ್ರೆಸ್ ಕಡೆಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದರೆ ಮೈತ್ರಿ ಪಕ್ಷಗಳು ಪ್ರಧಾನಿ ಪಟ್ಟಕ್ಕಾಗಿ ಹೋರಾಡುವಷ್ಟರಲ್ಲಿ ಮೋದಿ ನೇತೃತ್ವದಲ್ಲಿ ಎನ್‍ಡಿಎ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಬಹುದೆಂಬ ಪ್ರತಿಪಕ್ಷಗಳ ಭೀತಿ ಕಾರಣವಿರಬಹುದು ಎನ್ನಲಾಗಿದೆ.

ನಾವು ಈಗಾಗಲೇ ನಮ್ಮ ನಿರ್ಧಾರವನ್ನು ಹೇಳಿದ್ದೇವೆ. ಪ್ರಧಾನಿ ನರೇಂದ್ರ ಮೊದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದು ನಮ್ಮ ಆದ್ಯ ಉದ್ದೇಶ. ಅದಕ್ಕೆ ನಾವು ಬದ್ಧರಾಗಿದ್ದೇವೆ. ಪ್ರಧಾನಿ ಹುದ್ದೆಯೂ ನಮಗೆ ಬೇಕೆಂದಿಲ್ಲ. ಈ ಬಗ್ಗೆ ನಾವು ನಂತರ ನಿರ್ಧರಿಸುತ್ತೇವೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಗಲಾಂ ನಬಿ ಆಜಾದ್ ಅವರು ಈ ಹೇಳಿಕೆಯನ್ನು ನೀಡಿದ್ದು, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ. ವಿಪಕ್ಷಗಳಿಗೆ ಧೈರ್ಯವಿದ್ದರೆ ತಮ್ಮ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಘೋಷಿಸಲಿ ಎಂದು ರಾಜನಾಥ್ ಸಿಂಗ್ ಸವಾಲೆಸೆದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಆಜಾದ್ ಈ ಹೇಳಿಕೆ ನೀಡಿದ್ದಾರೆ.

ಇಂಥ ಹೇಳಿಕೆಯನ್ನು ನೀಡುವ ಮೂಲಕ ಕಾಮಗ್ರೆಸ್ ಮಮತಾ ಬ್ಯಾನರ್ಜಿ ಅವರನ್ನು ಓಲೈಸುವ ಪ್ರಯತ್ನ ಮಾಡಿದೆಯೆ? ಈಗಾಗಲೇ ಟಿಎಂಸಿಯ ಮಮತಾ ಬ್ಯಾನರ್ಜಿ ಮತ್ತು ಬಿಎಸ್ಪಿಯ ಮಾಯಾವತಿ ಇಬ್ಬರು ಪ್ರಧಾನಿ ಹುದ್ದೆಯ ರೇಸ್ ನಲ್ಲಿದ್ದಾರೆ. ಅವರನ್ನು ಮಹಾಘಟಬಂಧನಕ್ಕೆ ಸೆಳೆಯುವ ಸಲುವಾಗಿ ಕಾಂಗ್ರೆಸ್ ಇಂಥ ಹೇಳಿಕೆ ನೀಡಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಲೋಕಸಭೆ ಚುನಾವಣೆಯ ಎಲ್ಲ ಹಂತಗಳೂ ಮೇ 19 ರಂದು ಮುಕ್ತಾಯವಾಗಲಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ. ಫಲಿತಾಂಶಕ್ಕೂ ಮುನ್ನ ಅಂದರೆ ಮೇ 21 ರಂದು ಎನ್‍ಡಿಎಯೇತರ ವಿಪಕ್ಷಗಳೆಲ್ಲವೂ ಸೇರಿ ನವದೆಹಲಿಯಲ್ಲಿ ಸಭೆ ಸೇರಲಿವೆ. ಈ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿಯ ಹೆಸರು ಅಂತಿಮಗೊಳ್ಳುವ ಸಾಧ್ಯತೆ ಇದೆ. ಆದರೆ ಈ ಸಭೆಗೆ ಹಾಜರಾಗುವುದಿಲ್ಲ ಎಂದು ಈಗಾಗಲೇ ಮಾಯಾವತಿ ಮತ್ತು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಫಲಿತಾಂಶದ ನಂತರ ಸಭೆ ಕರೆಯುವಂತೆ ಮಮತಾ ಹೇಳಿದ್ದಾರೆನ್ನಲಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಜಾದ್ ಅವರ ಹೇಳಿಕೆ ಭಾರೀ ಕುತೂಹಲ ಸೃಷ್ಟಿಸಿದೆ. (ಎನ್.ಬಿ)

Leave a Reply

comments

Related Articles

error: