ಮೈಸೂರು

ಸ್ವದೇಶಿ ಮೇಳದಲ್ಲಿ ಸಾವಯವ ಕೃಷಿ ಬೆಳೆಗಳಿಗೆ ಹೆಚ್ಚಿದ ಬೇಡಿಕೆ

ರೈತ ಹಾಗೂ ಸಣ್ಣ ಉದ್ಯಮದಾರರಿಗೆ ನೇರ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸ್ವದೇಶಿ ಜಾಗರಣ ಮಂಚ್‍ನಿಂದ ದೇಶದಾದ್ಯಂತ ರೈತ ಜಾಗೃತಿ ಸಂತೆ ಹಾಗೂ ಮೇಳವನ್ನು ಆಯೋಜಿಸಲಾಗುತ್ತಿದ್ದು ರೈತರಿಗೆ ಹಾಗೂ ಗ್ರಾಹಕರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಲಾಗುತ್ತಿದೆ. ಎರಡು ಕಡೆಯಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಹರ್ಷ ತಂದಿದೆ. ಅದರಲ್ಲೂ ಮೈಸೂರಿಗರು ಮೇಳದಲ್ಲಿ ಅತಿ ಉತ್ಸುಕರಾಗಿ ಪಾಲ್ಗೊಳ್ಳುತ್ತಿರುವುದು ಸ್ವದೇಶಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಲಭಿಸಿದೆ ಎಂದು ಮಾತಿಗಿಳಿದವರು ಸ್ವದೇಶಿ ಜಾಗರಣ ಮಂಚ್‍ ರಾಜ್ಯ ಸಹ ಸಂಯೋಜಕ ಮಂಜುನಾಥ್ ಎನ್.ಆರ್.

ಮೈಸೂರಿನ ನಂಜರಾಜ ಬಹದ್ದೂರು ಛತ್ರದಲ್ಲಿ ಆಯೋಜಿಸಿರುವ ಸ್ವದೇಶಿಮೇಳದ ಬಗ್ಗೆ ‘ಸಿಟಿಟುಡೆ’ಯೊಂದಿಗೆ ಅನಿಸಿಕೆ ಹಂಚಿಕೊಳ್ಳುತ್ತಾ ವಿದೇಶಿ ಕಂಪನಿಗಳ ಕಬಂಧ ಬಾಹುಗಳಿಂದ ದೇಶಿ ಉತ್ಪನ್ನಗಳು ಮೂಲೆಗುಂಪಾಗಿ ಸಣ್ಣ ಹಾಗೂ ಗುಡಿ ಕೈಗಾರಿಕೆಗಳು ಮತ್ತು ರೈತರಿಗೆ ಸೂಕ್ತ ಮಾರುಕಟ್ಟೆಯಿಲ್ಲದೇ ಸಾಕಷ್ಟು ನಷ್ಟು ಅನುಭವಿಸುವಂತಾಗಿದ್ದು, ದೇಶದ ಆರ್ಥಿಕ ಸ್ಥಿರತೆಗೂ ಬಹುದೊಡ್ಡ ಹೊಡೆತ ಬೀಳುತ್ತಿತ್ತು. ಇದನ್ನೆಲ್ಲ ಮನಗಂಡ ವಿವಿಧ ಯೋಜನೆಗಳ ಬಗ್ಗೆ ಸ್ವದೇಶಿ ಜಾಗರಣ ಮಂಚ್ ಕಳೆದ ಹತ್ತು ವರ್ಷಗಳ ಹಿಂದೆ ವಿಚಾರ ಸಂಕಿರಣಗಳ ಮೂಲಕ ಜಾಗೃತಿ ಅಭಿಯಾನವನ್ನು ಮೂಡಿಸುತ್ತಿದೆ ಎಂದ ಅವರು ಸಾವಯುವ ಕೃಷಿಗೆ ಉತ್ತೇಜನ ನೀಡದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ, ರಾಸಾಯನಿಕ ಗೊಬ್ಬರದಿಂದ ಭೂಮಿ ಬಂಜರಾಗಿ ನಿರೀಕ್ಷಿತ ಫಸಲು ಲಭ್ಯವಿಲ್ಲ, ಬೆಳ ಬಂದರೆ ಬೆಲೆಯಿಲ್ಲದಂತಾಗಿ ರೈತನು ಉಭಯ ಸಂಕಷ್ಟಗಳನ್ನು ಅನುಭವಿಸುವಂತಾಗಿದ್ದು ಈ ರೀತಿಯ ಸ್ವದೇಶಿ ಮೇಳಗಳು ರೈತ ಹಾಗೂ ಸಣ್ಣ ಉದ್ಯಮದಾರರಿಗೆ ಸಾಂತ್ವನ ಹಾಗೂ ಸ್ವಾವಲಂಬನೆಯ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತಿದೆ. ಅವರಲ್ಲಿ ಪ್ರೋತ್ಸಾಹ ಹಾಗೂ ದೃಢತೆಯನ್ನು ತುಂಬಿ ಸಾವಯುವ ಬೆಳೆ ಬೆಳೆಯಲು ಬೆಂಬಲಿಸಿ ಪ್ರೋತ್ಸಾಹಿಸಲಾಗುವುದು ಎಂದರು.

ಮಂಚ್‍ನಿಂದ ಉತ್ತಮ ಮಾರುಕಟ್ಟೆಯನ್ನು ಒದಗಿಸಲಾಗಿದ್ದು ಗುಣಮಟ್ಟದ ವಸ್ತುಗಳನ್ನು ನಿಗದಿತ ಬೆಲೆಗೆ ಮಾರಾಟ ಮಾಡಿದರೆ ಉತ್ತಮ ವ್ಯಾಪಾರವಾಗುವುದು, ವ್ಯಾಪಾರಕ್ಕೆ ಬೆಲೆಯೂ ಬಹುಮುಖ್ಯಪಾತ್ರ ವಹಿಸಲಿದೆ ಎಂದ ಅವರು ಕಳೆದ ಹಲವಾರು ವರ್ಷದಿಂದ ಮಹಾರಾಜ ಮೈದಾನದಲ್ಲಿ ಬೃಹತ್ ಮಟ್ಟದಲ್ಲಿ ಮೇಳವನ್ನು ಆಯೋಜಿಸಲಾಗುತ್ತಿತ್ತು, ಕಾರಣಾಂತರಗಳಿಂದ ಮೇಳವನ್ನು ಕಳೆದೈದು ವರ್ಷಗಳಿಂದ ಕೈಬಿಡಲಾಗಿತ್ತು, ಆದರೆ ಮೈಸೂರಿಗರ ಒತ್ತಾಯಕ್ಕೆ ಪ್ರಸ್ತಕ ಸಾಲಿನಲ್ಲಿ ಇಲ್ಲಿ ಆರಂಭಿಸಲಾಗಿದ್ದು ಮುಂದಿನ ವರ್ಷಗಳಲ್ಲಿ ಮೇಳವೂ ತನ್ನ ಐತಿಹಾಸಿಕ ಮೆರುಗನ್ನು ಪಡೆಯುವುದು ಎನ್ನುವ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

ಹೆಚ್ಚಿದ ಸಾವಯವ ಉತ್ಪನ್ನಗಳ ಬೇಡಿಕೆ : ಸ್ವದೇಶಿ ಮೇಳದಲ್ಲಿ ರಾಜ್ಯದ ಇಳಕಲ್, ಬಿಜಾಪುರ, ಹಾಸನ, ಮಂಡ್ಯ, ಚಿಕ್ಕಮಗಳೂರು ಸೇರಿದಂತೆ ನೂರಕ್ಕೂ ಅಧಿಕ ಮಳಿಗೆಗಳು ಪಾಲ್ಗೊಂಡಿವೆ.  ಸಾವಯವ ಉತ್ಪನ್ನಗಳಿಗೆ ಹಾಗೂ ಸಿರಿಧಾನ್ಯಗಳಿಗೆ ಹೆಚ್ಚಿನ ಬೇಡಿಕೆಯಿದೆ ಕೆಲವೊಬ್ಬರಿಗೆ ಸಿಹಿಯಾದರೆ ಮತ್ತೆ ಕೆಲವರಿಗೆ ಕಹಿ ಫಲವನ್ನು ಮೇಳವೂ ನೀಡಿದೆ ಎನ್ನುವುದು ವ್ಯಾಪಾರಿಗಳು ಹಂಚಿಕೊಂಡ ಅಭಿಪ್ರಾಯದಿಂದ ಮನವರಿಕೆಯಾಯಿತು.

ಮೈಸೂರಿಗೆ ಬರುವುದಕ್ಕೆ ಗಾಡಿ ಹಾಗೂ ಮಳಿಗೆ ಬಾಡಿಗೆ ಸೇರಿ 15 ಸಾವಿರಕ್ಕೂ ಹೆಚ್ಚು ಖರ್ಚಾಗಿದ್ದು ನಿರೀಕ್ಷೆಯಂತೆ ವ್ಯಾಪಾರವಾಗಿಲ್ಲ, ಈಗಾಗಿರುವ ನಷ್ಟವನ್ನು ಕೈಯಿಂದಲೇ ಭರಿಸಬೇಕಾಗಿದೆ ಎಂದು ಇಳಕಲ್ ನ ಶ್ರೀಮಾರ್ಕಂಡೇಶ್ವರ ನೇಕಾರ ಸಹಕಾರಿ ಉತ್ಪಾದಕ ಸಂಘದವರು ಅರುಹಿದರೆ, ಮಂಡ್ಯದ ಸಾವಯವ ಕೃಷಿಕ ಕೃಷ್ಣ ಶೆಟ್ಟಿ ತಮ್ಮ ವ್ಯಾಪಾರದ ಬಗ್ಗೆ ಹೆಮ್ಮೆಯಿಂದ ಬೀಗಿದರು. ಬಿಜಾಪುರದ ಇಂಡಿ ತಾಲ್ಲೂಕಿನ ರೈತ ಮಹಿಳೆ ಸುಜಾತ ಮಾತನಾಡಿ ಕಳೆದೆರಡು ದಿನದ ವ್ಯಾಪಾರದ ನಷ್ಟವನ್ನು ಇಂದು ಸರಿದೂಗಿಸುವ ಆಶಾವಾದವನ್ನು ವ್ಯಕ್ತಪಡಿಸಿ ವಿದೇಶಿ ಕಂಪನಿಗಳಿಗೆ ಮಾರು ಹೋಗಿರುವ ಪಟ್ಟಣದವರು ಸಾಮಾನ್ಯ ಬಡ ರೈತನಿಗೆ 10-20 ರೂಪಾಯಿ ವ್ಯಾಪಾರ ಮಾಡಲು ಹಿಂದೇಟು ಹಾಕುವುದು ಖೇದಕರ, ನಮ್ಮ ಜಮೀನುಗಳಿಗೆ ಬಂದು ನೋಡಿ ರೈತ ಹೇಗೆ ತುಳಿತಕ್ಕೊಳಗಾಗಿದ್ದಾನೆ ಆದರೂ ನಾವು ಆಶಾವಾದಿಗಳು ಎಂದಿಗೂ ನಿರಾಶೆಗೊಳ್ಳುವುದಿಲ್ಲವೆಂದು ಎಂದು ಸ್ವಯಂ ಸಾಂತ್ವನ ಹೇಳಿಕೊಂಡರು.  ಹೀಗೆ ಒಬ್ಬರದು ಒಂದೊಂದು ರೀತಿ ಒಬ್ಬರಿಗೆ ಉತ್ತಮ ವ್ಯಾಪಾರವಾಗಿದ್ದರೆ ಬಂಡವಾಳವೇ ಗಿಟ್ಟದೇ ಪೇಚು ಮುಖಮಾಡಿದವರೆಷ್ಟೊ ಇದೆಲ್ಲ ಕಂಡು ಬಂದಿದ್ದು ಸ್ವದೇಶಿ ಮೇಳದಲ್ಲಿ.

ವಿಶೇಷ : ಸಿರಿಧಾನ್ಯಗಳು, ಮಸಾಲೆ ಪದಾರ್ಥಗಳು, ರಾಗಿ ಹುರಿಹಿಟ್ಟು, ಹೋಂ ಮೇಡ್ ಸೋಪು, ಶಾಂಪು, ವಾಷಿಂಗ್ ಪೌಡರ್, ಬಿದಿರು ಅಕ್ಕಿ, ಚಿಕ್ಕಮಗಳೂರಿನ ಕಾಫಿ-ಟೀಪುಡಿ, ತರೇವಾರಿ ಉಪ್ಪಿನಕಾಯಿ, ಚಟ್ನಿಪುಡಿಗಳು, ಖಾದಿ ವಸ್ತ್ರಗಳು, ಕಾಟನ್ ಡ್ರೆಸ್ ಹಾಗೂ ಸೀರೆಗಳು, ಆಯುರ್ವೇದ ಔಷಧಿಗಳು, ಸ್ವದೇಶಿ ಪಾನೀಯಗಳು ಸೇರಿದಂತೆ ಆವರಣದಲ್ಲಿ ಬಾಯಲ್ಲಿ ನೀರೂರಿಸುವ ವಿವಿಧ ಬಗೆಯ ಸಾವಯವ ಆರೋಗ್ಯ ವರ್ಧಕ ಆಹಾರ ತಿನಿಸುಗಳು ಲಭ್ಯವಿದೆ. ಇನ್ನೇನು ಸಂಜೆ ಮೇಳಕ್ಕೆ ತೆರೆ ಬೀಳಲಿದ್ದು ಬಿಡುವಿನ ಸಮಯದಲ್ಲಿ ಕುಟುಂಬ ಸಮೇತರಾಗಿ ಭೇಟಿ ನೀಡಬಹುದು. ಒಟ್ಟಿನಲ್ಲಿ ಮೂರು ದಿನಗಳ ಕಾಲ ನಡೆದ ಸ್ವದೇಶಿ ಮೇಳ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರ ಗಮನ ಸೆಳೆದಿದೆ. ಕೊನೆಯ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು  ತಮಗಿಷ್ಟವಾದ ವಸ್ತುಗಳ ಖರೀದಿಗೆ ಮುಗಿಬಿದ್ದಿರುವುದು ಕಂಡುಬಂತು.

ಕೆ.ಎಂ.ರೇಖಾ ಪ್ರಕಾಶ್

Leave a Reply

comments

Related Articles

error: