ಪ್ರಮುಖ ಸುದ್ದಿ

ಕೂಡಿಗೆ ಸೈನಿಕ ಶಾಲೆಯಲ್ಲಿ ಎನ್‍ಸಿಸಿ ಶಿಬಿರಕ್ಕೆ ಚಾಲನೆ : ದೇಶದ ಪ್ರಗತಿಯಲ್ಲಿ ಯುವಶಕ್ತಿಯ ಪಾತ್ರ ಪ್ರಮುಖ : ಲೆ.ಜ.ರಾಜೀವ್ ಛೋಪ್ರ ಅಭಿಪ್ರಾಯ

ರಾಜ್ಯ(ಮಡಿಕೇರಿ) ಮೇ 18 :-ದೇಶದ ಪ್ರಗತಿಯಲ್ಲಿ ಯುವಶಕ್ತಿಯ ಪಾತ್ರ ಪ್ರಮುಖವಾಗಿದ್ದು, ಪ್ರತಿಯೊಬ್ಬರು ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕೆಂದು ಎನ್‍ಸಿಸಿ ಡೈರೆಕ್ಟರ್ ಜನರಲ್, ಲೆಫ್ಟಿನೆಂಟ್ ಜನರಲ್ ರಾಜೀವ್ ಛೋಪ್ರ ಎವಿಎಸ್‍ಎಂ ಕಿವಿಮಾತು ಹೇಳಿದ್ದಾರೆ.
ಕೂಡಿಗೆ ಸೈನಿಕ ಶಾಲೆಯಲ್ಲಿ ಆರಂಭಗೊಂಡಿರುವ ಮಡಿಕೇರಿಯ 19 ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಶಿಬಿರದಲ್ಲಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಕೊಡಗಿನ ವೀರಸೇನಾನಿಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ಭಾರತೀಯ ಸೇನೆಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಸೇವೆ ಅಮೋಘ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಧೈರ್ಯ ಮತ್ತು ಶಿಸ್ತು ನಡೆಯ ಮೂಲಕ ದೇಶಭಕ್ತಿಯನ್ನು ಪ್ರದರ್ಶಿಸುವಂತೆ ಕರೆ ನೀಡಿದರು. ಶಿಬಿರಾರ್ಥಿಗಳೊಂದಿಗೆ ನೇರ ಸಮಾಲೋಚನೆ ನಡೆಸಿದ ಲೆ.ಜ.ರಾಜೀವ್ ಛೋಪ್ರ ಅವರು ಸಾಧಕ, ಬಾಧಕಗಳ ಬಗ್ಗೆ ಚರ್ಚಿಸಿ ಪ್ರೋತ್ಸಾಹ ತುಂಬಿದರು.
ಎನ್‍ಸಿಸಿ ಡಿಜಿ ಲೆಫ್ಟಿನೆಂಟ್ ಜನರಲ್ ಸತೀಶ್ ಛೋಪ್ರ ಎವಿಎಸ್‍ಎಂ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಸೈನಿಕ ಶಾಲೆಯ ಆವರಣದಲ್ಲಿರುವ ಯುದ್ಧ ಸ್ಮಾರಕಕ್ಕೆ ತೆರಳಿದ ಲೆ.ಜ.ರಾಜೀವ್ ಛೋಪ್ರ ಅವರು ಹುತಾತ್ಮರಿಗೆ ಗೌರವ ಸಲ್ಲಿಸಿದರು. ದೇಶ ರಕ್ಷಣೆಯಲ್ಲಿ ಯೋಧರ ಬಲಿದಾನ ಅವಿಸ್ಮರಣೀಯವೆಂದರು.
19 ನೇ ಕರ್ನಾಟಕ ಬೆಟಾಲಿಯನ್‍ನ ಕಮಾಂಡಿಂಗ್ ಆಫೀಸರ್ ಕರ್ನಲ್ ವಿ.ಎಂ.ನಾಯಕ್, ಗ್ರೂಪ್ ಕಮಾಂಡರ್ ಕರ್ನಲ್ ಅನಿಲ್ ನಾಟಿಯಾಲ್, ಸೈನಿಕ ಶಾಲೆ ಪ್ರಾಂಶುಪಾಲ ಕ್ಯಾಪ್ಟನ್ ಆರ್.ಆರ್.ಲಾಲ್ ಮತ್ತಿತರ ಅಧಿಕಾರಿಗಳು ಈ ಸಂದರ್ಭ ಹಾಜರಿದ್ದರು.
ಎನ್‍ಸಿಸಿ ಗೀತೆ ಮತ್ತು ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: