ಮೈಸೂರು

ತಾತ್ವಿಕ ಸಂಗತಿಗಳನ್ನು ಮನನ ಮಾಡಿಕೊಂಡು ಬದುಕಿದರೆ ಲೌಖಿಕದಿಂದ ಆಧ್ಯಾತ್ಮದೆಡೆಗೆ ಬರಲು ಸಾಧ್ಯ : ಸುತ್ತೂರು ಶ್ರೀ

ಮೈಸೂರು,ಮೇ. 18:-  ತಾತ್ವಿಕ ಸಂಗತಿಗಳನ್ನು ಮನನ ಮಾಡಿಕೊಂಡು ಬದುಕಿದರೆ ಲೌಖಿಕದಿಂದ ಆಧ್ಯಾತ್ಮದೆಡೆಗೆ ಬರಲು ಸಾಧ್ಯ ಎಂದು ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ, ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ವತಿಯಿಂದ ಆಧ್ಯಾತ್ಮಿಕ ಜಿಜ್ಞಾಸುಗಳಿಗೆ ಆಯೋಜಿಸಿದ್ದ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ದಿವ್ಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುತ್ತ ತಿಳಿಸಿದರು.
ವಿಜಯಪುರ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರು ಶಿಬಿರಗಳಿಂದ ಜ್ಞಾನಿಗಳ ಮಾತುಗಳನ್ನು ಕೇಳುತ್ತ ಅದರಲ್ಲಿರುವ ಅರ್ಥರಸವನ್ನು ಆಸ್ವಾದಿಸಬೇಕು. ಜ್ಞಾನದ ಊಟವನ್ನು ಮಾಡಿ, ಅದೇ ಭಾವದಲ್ಲಿ ನಾಡಿನ ತುಂಬೆಲ್ಲ ಪಡೆದ ಜ್ಞಾನದ ಸೌರಭವನ್ನು ಪಸರಿಸಬೇಕೆಂದು ನುಡಿದರು.
ಮಹಾಲಿಂಗಪುರದ ಶ್ರೀ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದ ಶ್ರೋ. ಬ್ರ. ಶ್ರೀ ಸಹಜಾನಂದ ಸ್ವಾಮಿಗಳು ನಾನತ್ವದ ಕಲ್ಪನೆಯೋಳು ತಾನಿರದೆ ಆಚೆಯೊಳು ಏನೋಂದುಳಿಯುವದೋ ಅದನ್ನೆ ನೀನೆಂದು ತಿಳಿ. ಅನಾತ್ಮವಾದ ಅಹಂಕಾರದಲ್ಲಿ ಆತ್ಮನೆಂಬ ಭಾವನೆ, ಅಹಂಕಾರವಲ್ಲದ ಆತ್ಮನಲ್ಲಿ ಅಹಂಕಾರವೆಂಬ ಭಾವನೆ ಇದುವೇ ಅನ್ಯೋನ್ಯಧ್ಯಾಸವಾಗಿರುತ್ತದೆ ಎಂದು ತಿಳಿಸಿದರು.
ಪ್ರೊ. ಕೆ. ಅನಂತರಾಮು ಅವರು ಭೂಮಂಡಲವೇ ಲಿಂಗಪೀಠ, ಭೂಮಿಯಿಂದ ಮೇಲಿರುವುದೆಲ್ಲ ಲಿಂಗಗೋಳಕ, ಅಷ್ಟ ದಿಕ್ಕುಗಳೆ ಜಲಹರಿ ಎಂದು ಭಾವಿಸಿ, ಹೃದಯ ಕಮಲದಲ್ಲಿ ಶಿವನನ್ನು ಸ್ಥಾಪಿಸಿ, ಏಳು ಸಮುದ್ರದ ನೀರನ್ನು ಅಭಿಷೇಕ ಮಾಡಿ, ಸೂರ್ಯ, ಚಂದ್ರ, ನಕ್ಷತ್ರಗಳೆ ಪುಷ್ಪಕಮಲಗಳು, ಭೂಮಿಯ ಮೇಲಿರುವ ಎಲ್ಲಾ ದವಸ ಧಾನ್ಯಗಳು, ಹಣ್ಣು ಹಂಪಲುಗಳನ್ನು ಪ್ರಸಾದವನ್ನಾಗಿ ಅರ್ಪಿಸಿ, ಭಗವಂತನೆ ನನ್ನ ಹೃದಯದಲ್ಲಿ ಇರುವನೆಂದು ತಿಳಿದು ಶಿವ ಸುಖದಲ್ಲಿ ಮುಳಿಗಿದರೆ ಅದುವೇ ಶಿವಯೋಗ ಎಂದು ತಿಳಿಸಿದರು.
ಹುಬ್ಬಳ್ಳಿ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಬುದ್ದಿಯೋಗಾನಂದರು, ಶರಣೆ ಜಯದೇವಿ ತಾಯಿ,   ಮಂಜುಳ ಕುಮಾರ್ ಹಾಗೂ   ಚಂದ್ರು ಜಂಗಣ್ಣನವರ ಶಿಬಿರದ ಬಗೆಗಿನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಿಬಿರದ ವರದಿಯನ್ನು ಚುಂಚನಹಳ್ಳಿ ಹಾಗೂ ನವಿಲೂರು ಮಠದ   ಚನ್ನಬಸವಸ್ವಾಮಿಗಳವರು ಮಂಡಿಸಿದರು.  ಅಂದಯ್ಯ ಶಿರೂರಮಠ ಸ್ವಾಗತಿಸಿದರು.   ಜಿ.ಎಲ್. ತ್ರಿಪುರಾಂತಕ ವಂದಿಸಿದರು.   ನಂದೀಶ್ ನಿರೂಪಿಸಿದರು. ಬೆಳಗ್ಗೆ ಪ್ರಾರ್ಥನೆಯ ನಂತರ ಶಿಬಿರಾರ್ಥಿಗಳು ಚಿಂತನ-ಮಂಥನದಲ್ಲಿ ಪಾಲ್ಗೊಂಡಿದ್ದರು. (ಎಸ್.ಎಚ್)

 

Leave a Reply

comments

Related Articles

error: