ಮೈಸೂರು

ಸಬ್ ಇನ್ಸಪೆಕ್ಟರ್ ವರ್ಗಾವಣೆಗೆ ವಿರೋಧ : ಪ್ರತಿಭಟನೆ; ಮಂಗಳವಾರ ಬಂದ್ ನಡೆಸುವ ಎಚ್ಚರಿಕೆ

ಬೈಲಕುಪ್ಪೆ : ಅವಧಿಗೆ  ಮುನ್ನವೇ ಪೋಲಿಸ್ ಸಬ್‍ಇನ್ಸ್ ಪೆಕ್ಟರ್  ಓರ್ವರ ವರ್ಗಾವಣೆ ನಡೆಸಿರುವುದನ್ನು ಖಂಡಿಸಿ ರಸ್ತೆಯಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಭಾನುವಾರ ಬೈಲಕುಪ್ಪೆ ಹಾಗೂ ಕೊಪ್ಪದಲ್ಲಿ ನಡೆಯಿತು.

ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಮತ್ತು ಕೊಪ್ಪ ಎರಡೂ ಗ್ರಾಮದಲ್ಲು  ಏಕಕಾಲದಲ್ಲಿ  ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಪೋಲಿಸ್ ಸಬ್‍ಇನ್ಸ್ಪೆಕ್ಟರ್ ಪಿ.ಲೊಕೇಶ್ ವರ್ಗಾವಣೆಯನ್ನು ವಿರೋಧಿಸಿ ಆಕ್ರೋಶ ವ್ಯಕ್ತ ಪಡಿಸಿವೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡ ಗಜಾನನ ಸೇವಾ ಸಮಿತಿಯ ಅಧ್ಯಕ್ಷ ಎಸಿ ರಾಮಕೃಷ್ಣ ಮಾತನಾಡಿ ಬೈಲಕುಪ್ಪೆ ಪೋಲಿಸ್ ಠಾಣೆಯಲ್ಲಿ ಸಬ್‍ಇನ್ಸ್ಪೆಕ್ಟರ್ ಪಿ. ಲೊಕೇಶ್ ಅಧಿಕಾರ ಸ್ವೀಕಾರ ಮಾಡಿ ಕೇವಲ 7 ತಿಂಗಳುಗಳ ಮಾತ್ರ ಕಳೆದಿದ್ದು ಅವಧಿಯ ಮುನ್ನವೇ ಬೇರೆಡೆಗೆ ವರ್ಗಾವಣೆ ಮಾಡುತ್ತಿರುವುದು ರಾಜಕೀಯ ಪಿತೂರಿಯಾಗಿದೆ  ಎಂದು ದೂರಿದರು.

ಅವರು ಅಧಿಕಾರ ಸ್ವೀಕರಿಸಿದ ನಂತರ ಠಾಣೆಯಲ್ಲಿ ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಠಾಣೆಗೆ ಬರುವ ಜನ ಸಾಮಾನ್ಯರಿಗೆ ಸೂಕ್ತ ನ್ಯಾಯ ದೊರಕಿಸಿಕೊಟ್ಟು ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಬೈಲಕುಪ್ಪೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಜೂಜಾಟ, ಗಾಂಜಾ, ಸೇರಿದಂತೆ ಸಮಾಜ ವಿರೋಧಿ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಠಾಣಾ ವ್ಯಾಪ್ತಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರ ಜೊತೆ ಸಿಬ್ಬಂದಿಗಳೊಂದಿಗೆ ಕರ್ತವ್ಯ ನಿಷ್ಠೆಯನ್ನೊಳಗೊಂಡಂತೆ ಹೊಂದಾಣಿಕೆಯಿಂದ  ಪರಿಸರವನ್ನು ಹಸರೀಕರಣ ಮಾಡಿ ಹೋಗಿ ಬರುವವರ ಗಮನ ಸೆಳೆಯುವಂತೆ ಮಾಡಿದ್ದಾರೆ. ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಾಮರ್ಥ್ಯ ಹೊಂದಿರುವ ಸಬ್‍ಇನ್ಸ್ಪೆಕ್ಟರ್ ಪಿ. ಲೊಕೇಶರನ್ನು ಯಾವುದೇ ಕಾರಣಕ್ಕೂ ಬೇರೆಡೆಗೆ ವರ್ಗಾಹಿಸಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕರವೇ ಹಾರನಹಳ್ಳಿ ಹೋಬಳಿಯ ಅಧ್ಯಕ್ಷ ನಟರಾಜ್ ಮಾತನಾಡಿ ಬೈಲಕುಪ್ಪೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ಅಧಿಕಾರಿಯನ್ನು ವರ್ಗಾವಣೆ ಮಾಡಿದ  ಸಂದರ್ಭದಲ್ಲಿ ಉಳಿಸಿಕೊಡಿ ಎಂದು ಕೇಳಿಕೊಂಡ ಇತಿಹಾಸವೆ ಇಲ್ಲವಾಗಿದೆ. ಆದರೆ ಸಬ್‍ಇನ್ಸ್ಪೆಕ್ಟರ್ ಪಿ. ಲೋಕೇಶ್  ಈ ವ್ಯಾಪ್ತಿಯ ಜನರ ಜನರಿಗೆ ಯಾವುದೇ ಸಮಸ್ಯೆ ಬಾರದಂತೆ ಶಾಂತಿ ಮತ್ತು ಸುವ್ಯವಸ್ಥೆಯಲ್ಲಿ ನಿಗವಹಿಸಿರುವುದರಿಂದ ಅವರನ್ನು  ಉಳಿಸಿಕೊಡಿ ಎಂದು ಕೇಳಿಕೊಳ್ಳುತ್ತಿದ್ದೇವೆ. ಇವರನ್ನು ಬೇರೆಡೆಗೆ  ಮಾಡಿರುವ ವರ್ಗಾವಣೆಯನ್ನು ಹಿಂಪಡೆಯದಿದ್ದರೆ ಮಂಗಳವಾರ ಸಂಪೂರ್ಣ ಬಂದ್ ನಡೆಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರಲ್ಲದೇ, ಮೈಸೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಬಂದು ವರ್ಗಾವಣೆ ಸಮಸ್ಯೆಯನ್ನು ಬಗೆಹರಿಸುವವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ಕೊಪ್ಪ ಹಾಗೂ ಬೈಲಕುಪ್ಪೆಯ ಆಟೋ ಚಾಲಕರು ಮತ್ತು ಮಾಲಿಕರ ಸಂಘ, ಬೈಲಕುಪ್ಪೆ ಪೋಲಿಸ್ ಠಾಣಾ ವ್ಯಾಪ್ತಿಗೆ ಸೇರಿದ ವಿವಿಧ ಗ್ರಾಮಗಳ ಮುಖಂಡರುಗಳು ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

Leave a Reply

comments

Related Articles

error: