ಪ್ರಮುಖ ಸುದ್ದಿ

ರಕ್ಷಣಾ ಸಚಿವರಿಗೆ ಮಳೆ ದುರಂತ ವಿವರಿಸಿದ್ದ ಬಾಲಕ ದಾರುಣ ಸಾವು : ಮಡಿಕೇರಿ ಹೊರವಲಯದಲ್ಲಿ ಘಟನೆ

ರಾಜ್ಯ(ಮಡಿಕೇರಿ) ಮೇ 19 : – ಮನೆಯಲ್ಲಿ ಆಟವಾಡುತ್ತಿದ್ದ ಸಂದರ್ಭ ಕುತ್ತಿಗೆಗೆ ವೇಲ್ ಸುತ್ತಿಕೊಂಡ ಪರಿಣಾಮ 8 ವರ್ಷದ ಬಾಲಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಮಡಿಕೇರಿ ಹೊರವಲಯದ ಗ್ರಾಮದಲ್ಲಿ ನಡೆದಿದೆ. ಪ್ರಕೃತಿ ವಿಕೋಪ ಸಂದರ್ಭ ಮನೆಯನ್ನು ಕಳೆದುಕೊಂಡಿದ್ದ ಬಾಲಕ ಸಂತ್ರಸ್ಥರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಂದರ್ಭ ಕೇಂದ್ರ ರಕ್ಷಣಾ ಸಚಿವೆಯ ಗಮನವನ್ನೂ ಚಿತ್ರಕಲೆಯ ಮೂಲಕ ಬಾಲಕ ಸೆಳೆದಿದ್ದ.
ಮಡಿಕೇರಿ ಹೊರವಲಯದ ಗ್ರಾಮದಲ್ಲಿದ್ದ 8 ವರ್ಷದ ಬಾಲಕ ಮನೆಯಲ್ಲಿ ಒಬ್ಬೊಂಟಿಯಾಗಿ ಮನೆಯ ಮೇಲ್ಚಾವಣಿಗೆ ವೇಲ್ ಕಟ್ಟಿಕೊಂಡು ಆಟವಾಡುತ್ತಿದ್ದ. ಈ ಸಂದರ್ಭ ವೇಲ್ ಬಾಲಕನ ಕುತ್ತಿಗೆಗೆ ಬಿಗಿದುಕೊಂಡಿದ್ದು, ಅದನ್ನು ಬಿಡಿಸಿಕೊಳ್ಳಲಾಗದೇ ಬಾಲಕ ಸ್ಥಳದಲ್ಲೇ ಒದ್ದಾಡಿದ್ದಾನೆ. ಮಧ್ಯಾಹ್ನ ವೇಳೆಗೆ ಬಾಲಕನ ತಂದೆ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದ್ದು ತಕ್ಷಣವೇ ಮಗನನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆ ಹೊತ್ತಿಗಾಗಲೇ ಬಾಲಕನ ಪ್ರಾಣಪಕ್ಷಿ ಹಾರಿಹೋಗಿತ್ತು.
ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ವಿಷಯ ತಿಳಿದು ಸಾರ್ವಜನಿಕರು ಆಸ್ಪತ್ರೆಯ ಶವಾಗಾರದ ಮುಂದೆ ಜಮಾಯಿಸಿದ್ದರು.
ಬಹಳಷ್ಟು ಪ್ರತಿಬಾವಂತನಾಗಿದ್ದ ಈ ಬಾಲಕ ಕಳೆದ ವರ್ಷ ಸಂಭವಿಸಿದ್ದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತನಾಗಿ ಕುಟುಂಬದೊಂದಿಗೆ ಮಡಿಕೇರಿಯ ಪೊಲೀಸ್ ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದ.
ಈ ಸಂದರ್ಭ ಮೈತ್ರಿ ಸಮುದಾಯ ಭವನಕ್ಕೆ ಆಗಮಿಸಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ತನ್ನ ಗ್ರಾಮದಲ್ಲಿ ಸಂಭವಿಸಿದ್ದ ಪ್ರಕೃತಿ ವಿಕೋಪದ ನೈಜ್ಯ ಘಟನೆಗಳನ್ನು ಚಿತ್ರ ರೂಪದಲ್ಲಿ ಬಿಡಿಸಿ ಅದನ್ನು ಸಚಿವರಿಗೆ ವಿವರಿಸುವ ಮೂಲಕ ಪ್ರಕೃತಿ ವಿಕೋಪದ ಕರಾಳತೆಯನ್ನು ಮನವರಿಕೆ ಮಾಡುವಲ್ಲಿಯೂ ಈ ಬಾಲಕ ಸಫಲನಾಗಿದ್ದ. ನಿರಾಶ್ರಿತರ ಕೇಂದ್ರದ ಕಣ್ಮಣಿಯಾಗಿ ಪಾದರಸದಂತೆ ಎಲ್ಲರೊಂದಿಗೂ ಬೆರೆಯುತ್ತಿದ್ದ ಪ್ರತಿಭಾವಂತ ಬಾಲಕನ ಸಾವು ಮನೆ ಮಂದಿಯನ್ನಷ್ಟೇ ಅಲ್ಲ. ಗ್ರಾಮಸ್ಥರನ್ನೇ ಶೋಕದ ಮಡುವಿಗೆ ತಳ್ಳಿದೆ.(ಕೆಸಿಐ,ಎಸ್.ಎಚ್)

Leave a Reply

comments

Related Articles

error: