ಮೈಸೂರು

ವಿವಿ ಹಾಸ್ಟೇಲ್ ನಲ್ಲಿ ಭೋಜನ ಶುಲ್ಕ ಹೆಚ್ಚಳಕ್ಕೆ ವಿರೋಧ : ಪ್ರತಿಭಟನೆ

ಮೈಸೂರು ವಿಶ್ವವಿದ್ಯಾಲಯದ ಹಾಸ್ಟೇಲ್ ಗಳಲ್ಲಿ ಹೆಚ್ಚಿಸಿರುವ ಭೋಜನ ಶುಲ್ಕವನ್ನು ಹಿಂಪಡೆಯುವಂತೆ ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ ವತಿಯಿಂದ ಪ್ರತಿಭಟನೆ ನಡೆಯಿತು.

ಸೋಮವಾರ ವಿಶ್ವವಿದ್ಯಾನಿಲಯದ ಕಾರ್ಯಸೌಧದ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಹಾಸ್ಟೇಲ್ ನಲ್ಲಿ ವಾಸವಿರುವ ವಿದ್ಯಾರ್ಥಿಗಳು ಹಿಂದುಳಿದವರು ಮತ್ತು ಮಧ್ಯಮವರ್ಗಗಳಿಗೆ ಸೇರಿದವರಾಗಿದ್ದು, ಶುಲ್ಕ 400ರೂ.ಗಳನ್ನು ಭರಿಸಲು ಅಸಮರ್ಥರಾಗಿರುತ್ತಾರೆ. ಆಹಾರದ ಗುಣಮಟ್ಟ ಹೆಚ್ಚಿಸುವ ಭರವಸೆ ನೀಡಿ ಶುಲ್ಕ ಹೆಚ್ಚಿಸಲಾಗಿದೆ. ಆದರೆ ಈ ಹಿಂದೆ ನೀಡಲಾಗುತ್ತಿದ್ದ ಶುಲ್ಕಕ್ಕೆ ನೀಡಬೇಕಾಗಿದ್ದ ಗುಣಮಟ್ಟದ ಆಹಾರ ನೀಡದೇ ವಿದ್ಯಾರ್ಥಿಗಳನ್ನು ವಂಚಿಸಿದ್ದಾರೆ. ಹೆಚ್ಚಿಸಿದ ಶುಲ್ಕಕ್ಕೆ ಗುಣಮಟ್ಟದ ಆಹಾರ ನೀಡುತ್ತಾರೆ ಎನ್ನುವುದರಲ್ಲಿ ನಂಬಿಕೆ ಇಲ್ಲ. ತಿಂಗಳಲ್ಲಿ ಒಂದು ದಿನ ಊಟ ತೆಗೆದುಕೊಂಡರೂ ಪೂರ್ತಿ ಹಣ ನೀಡಬೇಕು ಎಂದು ಆರೋಪಿಸಿದರು.

ನಮ್ಮನ್ನು ನಮ್ಮ ತಂದೆ ತಾಯಿಗಳು ಕಷ್ಟಪಟ್ಟು ಓದೋದಿಕ್ಕೆ ಕಳುಹಿಸುತ್ತಾರೆ. ಈ ರೀತಿ ಮೆಸ್ ಬಿಲ್ ಜಾಸ್ತಿ ಮಾಡುತ್ತಿದ್ದರೆ ಅವರು ಎಲ್ಲಿಂದ ಹಣ ಭರಿಸಬೇಕು ಎಂದು ಪ್ರಶ್ನಿಸಿದರು. ಭೋಜನ ಶುಲ್ಕ ಹೆಚ್ಚಳವನ್ನು ಹಿಂಪಡೆಯಬೇಕು. ಹಾಸ್ಟೇಲ್ ಪ್ರವೇಶಾತಿ ಶುಲ್ಕ ತೆಗೆದು ಹಾಕಬೇಕು. ಡಿವೈಡಿಂಗ್ ಸಿಸ್ಟಮ್ ಅನುಷ್ಠಾನಕ್ಕೆ ತರಬೇಕು ಮತ್ತು ಹಾಸ್ಟೇಲ್ ನಿರ್ವಹಣೆಯನ್ನು ಪೂರ್ತಿಯಾಗಿ ವಿಶ್ವವಿದ್ಯಾನಿಲಯವೇ ವಹಿಸಿಕೊಳ್ಳಬೇಕು. ಕಾಲೇಜು ಆರಂಭದ ಜೊತೆಯೇ ಹಾಸ್ಟೇಲ್ ಮತ್ತು ಮೆಸ್ ಆರಂಭಿಸಬೇಕು. ಹಾಸ್ಟೇಲ್ ಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಖಾತ್ರಿ ಪಡಿಸಬೇಕು. ಗುಣಮಟ್ಟದ ಮತ್ತು ಪೌಷ್ಠಿಕಾಂಶವುಳ್ಳ ಆಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಯುವರಾಜ, ಮಹಾರಾಜ ಹಾಗೂ ಗಂಗೋತ್ರಿ ಹಾಸ್ಟೆಲ್ ವಿದ್ಯಾರ್ಥಿಗಳು ಪಾಲ್ಗೊಂಡು ಹಾಸ್ಟೆಲ್ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ದಿಕ್ಕಾರ ಹಾಕಿದರು.

Leave a Reply

comments

Related Articles

error: