ಪ್ರಮುಖ ಸುದ್ದಿ

ಕೃಷ್ಣರಾಜಪೇಟೆ ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಯುವನಾಯಕ ಹೊಸಹೊಳಲು ಅಶೋಕ್ ಜೆಡಿಎಸ್ ಸೇರ್ಪಡೆ

ರಾಜ್ಯ (ಮಂಡ್ಯ)ಮೇ.20:- ಕೃಷ್ಣರಾಜಪೇಟೆ ಪುರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಯುವನಾಯಕ ಹೊಸಹೊಳಲು ಅಶೋಕ್ ಜೆಡಿಎಸ್ ಸೇರ್ಪಡೆಗೊಂಡರು.

ಪುರಸಭೆ ಅಧಿಕಾರವನ್ನು ಜೆಡಿಎಸ್ ಹಿಡಿತಕ್ಕೆ ತರಲು, ಕಾಂಗ್ರೆಸ್ ದುರಾಡಳಿತವನ್ನು ಕೊನೆಗಾಣಿಸಲು ಹೋರಾಟ ನಡೆಸುವುದಾಗಿ ಘೋಷಿಸಿದ ಅಶೋಕ್  ಅವರಿಗೆ ಪಕ್ಷದ ಶಾಲುಹೊದಿಸಿ ಅಧಿಕೃತವಾಗಿ ಜೆಡಿಎಸ್ ಪಕ್ಷಕ್ಕೆ   ಶಾಸಕ ಡಾ.ನಾರಾಯಣಗೌಡ  ಸ್ವಾಗತಿಸಿದರು. ಅಶೋಕ್ ಅವರೊಂದಿಗೆ ಹೊಸಹೊಳಲು ಗ್ರಾಮದ ಹಾಲಿನ ಡೈರಿ ಅಧ್ಯಕ್ಷ ನಾಗೇಗೌಡ, ಮಾಜಿ ಅಧ್ಯಕ್ಷ ಚಂದ್ರೇಗೌಡ ಸೇರಿದಂತೆ ಗ್ರಾಮದ ನೂರಾರು ಮುಖಂಡರು ಸಾಮೂಹಿಕವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆ.ಆರ್.ಪೇಟೆಯಿಂದ ವಲಸೆ ಬಂದಿರುವ ಪುರಸಭೆ ಮಾಜಿ ಅಧ್ಯಕ್ಷ, ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರ ಕೆ.ಬಿ.ಮಹೇಶ್ ದಲಿತರೇ   ಸಂಪೂರ್ಣವಾಗಿ ವಾಸವಾಗಿರುವ ಹೊಸಹೊಳಲು ಗ್ರಾಮದ 19ನೇ ವಾರ್ಡಿನಿಂದ ಸ್ಪರ್ಧೆ ಮಾಡಿದ್ದಾರೆ. ದಲಿತರಿಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಹಕ್ಕನ್ನು ಹಣದಹೊಳೆ ಹರಿಸಿ ಮುಗ್ಧ ಜನರನ್ನು ಹಣದಿಂದ ಕೊಂಡು ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಸಂಚು ನಡೆಸಿದ್ದಾರೆ. ದುಷ್ಟಶಕ್ತಿಯನ್ನು ಮಟ್ಟಹಾಕಿ ವಲಸೆ ಬಂದಿರುವ ನಾಯಕನನ್ನು ಮನೆಗೆ ಕಳಿಸಲು ಹೊಸಹೊಳಲು ಜನರು ಸಂಘಟಿತ ಹೋರಾಟ ನಡೆಸಬೇಕು.  ಈ ಚುನಾವಣೆಯಲ್ಲಿ ಹಣಬಲದ ಎದುರು ಜನಬಲಕ್ಕೆ ಗೆಲುವು ದೊರೆಯಲೇಬೇಕು ಎಂದು ಕೈಮುಗಿದು ಮನವಿ ಮಾಡಿದರು.  ಈ ಬಾರಿ ಪುರಸಭೆಯ ಅಧಿಕಾರವನ್ನು ಜೆಡಿಎಸ್ ಹಿಡಿಯುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಕೆ.ಆರ್.ಪೇಟೆ ಹೊಸಹೊಳಲು ಅವಳಿ ಪಟ್ಟಣಗಳ ಸಮಗ್ರವಾದ ಅಭಿವೃದ್ಧಿಗೆ ಜೆಡಿಎಸ್ ಬೆಂಬಲಿಸಬೇಕು. ಪುರಸಭೆಯಲ್ಲಿ ಕಳೆದ 20ವರ್ಷಗಳಿಂದ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಗಂಟುಮೂಟೆ ಕಟ್ಟಿ ಮನೆಗೆ ಕಳಿಸಬೇಕು ಎಂದು ನಾರಾಯಣಗೌಡ ಮನವಿ ಮಾಡಿದರು. ಜೆಡಿಎಸ್ ಪಕ್ಷಕ್ಕೆ ತಮ್ಮ ನೂರಾರು ಬೆಂಬಲಿಗರೊಂದಿಗೆ ಸೇರ್ಪಡೆಗೊಂಡ ಅಶೋಕ್ ಪುರಸಭೆಯಲ್ಲಿ ಮಾಜಿ ಶಾಸಕ ಹಾಗೂ ಅವರ ಸಹೋದರರು ನಡೆಸುತ್ತಿರುವ ದುರಾಡಳಿತದಿಂದ ಬೇಸತ್ತು ಯಾವುದೇ ಷರತ್ತುಗಳಿಲ್ಲದೇ ಶಾಸಕ ನಾರಾಯಣಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದರು.

ಈ ಸಂದರ್ಭ ಜಿ.ಪಂ ಸದಸ್ಯ ಹೆಚ್.ಟಿ.ಮಂಜು, ಮುಖಂಡ ಕೆ.ಶ್ರೀನಿವಾಸ್, ಗ್ರಾಮದ ಯಜಮಾನರಾದ ಚಿಕ್ಕೇಗೌಡ, ರಾಮೇಗೌಡ, ನಾಗರಾಜೇಗೌಡ, ಗೋಪಾಲ್, ಲೋಕೇಶ್ ಸೇರಿದಂತೆ ನೂರಾರು ಜನರು ಸಭೆಯಲ್ಲಿ ಭಾಗವಹಿಸಿದ್ದರು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: