ಮೈಸೂರು

ಕೆ.ಆರ್.ಎಸ್ ಪಕ್ಕದಲ್ಲೇ ಪವರ್ ಪ್ಲಾಂಟ್ : ಸ್ಥಳೀಯರಲ್ಲಿ ಆತಂಕ

ವಿಶ್ವ ಪ್ರಸಿದ್ದ ಕೆ.ಆರ್. ಎಸ್ ಜಲಾಶಯಕ್ಕೆ ಕಂಟಕವೊಂದು ಎದುರಾಗಿದೆ. ಅಲ್ಲೇನೂ ಭಯೋತ್ಪಾದಕರು ಅಡಗಿ ಕುಳಿತಿಲ್ಲ. ಕಂಟಕ ಎದುರಾಗಿರುವುದು  ರಾಜ್ಯ ಸರ್ಕಾರದ ನಡೆಯಿಂದ. ಜಲಾಶಯದ ಸಮೀಪದಲ್ಲೇ ಪ್ರಾಜೆಕ್ಟ್ ಒಂದನ್ನು ಆರಂಭಿಸಿದೆ. ಅದರಿಂದಲೇ ಆತಂಕ ಶುರುವಾಗಿದೆ.

ಮಂಡ್ಯ ಜಿಲ್ಲೆಯ ಕೆ.ಆರ್.ಎಸ್ ಜಲಾಶಯಕ್ಕೆ 500 ಮೀಟರ್ ಸಮೀಪದ ಎಡಮುರಿಯಲ್ಲಿ ರಾಜ್ಯ ಸರ್ಕಾರ .05 ಮೆಗಾ ವ್ಯಾಟ್ ಕಿರು ಜಲವಿದ್ಯುತ್ ಯೋಜನೆಗೆ ಅನುಮತಿ ನೀಡಿದೆ. ಇದಕ್ಕಾಗಿ ಬೆಂಗಳೂರಿನ ಎಂ. ಪ್ಲೋರ್ ಪವರ್ ಪ್ಲಾಂಟ್ ಕಂಪನಿ ಕಾಮಗಾರಿ ಕೂಡ ಶುರು ಮಾಡಿದೆ. ಹೀಗಾಗಿ ಕಾವೇರಿ ನದಿ ಮಧ್ಯಕ್ಕೆ ಮಣ್ಣು ಸುರಿದು ನದಿ ಹರಿಯುವ ದಿಕ್ಕನ್ನೇ ಬದಲಿಸಲಾಗಿದೆ. ಅಲ್ಲದೇ, ಬಂಡೆ ಸಿಡಿಸಲು ಸ್ಫೋಟಕ ಬಳಕೆಯಾಗುತ್ತಿದೆ. ಇದರಿಂದಾಗಿ ಪಕ್ಕದಲ್ಲಿರುವ ಎಡಮುರಿ ಚೆಕ್ ಡ್ಯಾಂ ಸೇರಿ ಕೂಗಳತೆ ದೂರದಲ್ಲಿರುವ ಕೆ.ಆರ್.ಎಸ್ ಜಲಾಶಯಕ್ಕೆ ಹಾನಿಯಾಗಲಿದೆ. ಅಲ್ಲದೆ ರೈತರ ಜಮೀನಿಗೆ ನೀರು ಪೂರೈಸುವ ಸಿಡಿಎಸ್, ವಿರಿಜಾ ಮತ್ತು ದೇವರಾಯ ನಾಲೆಗಳಿಗೆ ನೀರು ಹರಿಸಲು ತೊಂದರೆ ಉಂಟಾಗಿದೆ ಎಂದು ಸ್ಥಳೀಯ ರೈತರು ಆರೋಪಿಸಿದ್ದಾರೆ.
ಪರಿಸರ ಸಂಪತ್ತುಜೀವರಾಶಿಗೆ ಮಾರಕ
ಪವರ್ ಪ್ರಾಜೆಕ್ಟ್ ಕಾಮಗಾರಿಯಿಂದಾಗಿ ಸುತ್ತಲಿನ ಪರಿಸರ ಸಂಪತ್ತು ಮತ್ತು ಜೈವಿಕ ಜೀವರಾಶಿಗಳು ನಾಶವಾಗುತ್ತಿದ್ದು,  ಪ್ರವಾಸೋದ್ಯಮಕ್ಕೂ ಪೆಟ್ಟು ಬೀಳಲಿದೆ ಅಂತ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸರ್ಕಾರದ ವಿರುದ್ಧ ಬೃಹತ್ ಹೋರಾಟದ ಎಚ್ಚರಿಕೆಯನ್ನೂ ಪರಿಸರವಾದಿಗಳು ನೀಡಿದ್ದಾರೆ.
ಒಟ್ಟಿನಲ್ಲಿ ಕರುನಾಡಿನ ಹಿರಿಮೆ ಕೃಷ್ಣರಾಜ ಜಲಾಶಯದ ಭದ್ರತೆಗಾಗಿ ರಾಜ್ಯ ಸರ್ಕಾರ  ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಅದೇ ಸರ್ಕಾರ ಡೇಂಜರ್ ಪವರ್ ಪ್ಲಾಂಟ್ ನಿರ್ಮಾಣಕ್ಕೆ ಹಸಿರು ನಿಶಾನೆಯನ್ನೂ ನೀಡಿದೆ. ರಾಜ್ಯ ಸರ್ಕಾರದ ಈ ದ್ವಂದ್ವ ನೀತಿಗೆ ಸ್ಥಳೀಯರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

Leave a Reply

comments

Related Articles

error: