ಮೈಸೂರು

ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕಗಳಲ್ಲಿ ಸಂಗೀತ ಅಳವಡಿಕೆಗೆ ಸರ್ಕಾರದ ಚಿಂತನೆ : ಹೆಚ್.ಎ.ವೆಂಕಟೇಶ್

ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕಗಳಲ್ಲಿ ಸಂಗೀತ ವಿಷಯವನ್ನು ಅನುಷ್ಠಾನಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಮೈಲಾಕ್ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ತಿಳಿಸಿದರು.
ಮೈಸೂರಿನ ರಾಜೇಂದ್ರ ನಗರದಲ್ಲಿರುವ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ  ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಶಾಲೆಗಳಲ್ಲಿ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶಾಲೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಂಗೀತದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಇಂದು ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮವು ಒಂದು ಉತ್ತಮ ಮಜಲಾಗಿದ್ದು, ಈ ದಿಸೆಯಲ್ಲಿ ಸರ್ಕಾರವು ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯ ಪುಸ್ತಕಗಳಲ್ಲಿ ಸಂಗೀತ ವಿಷಯವನ್ನು ಕುರಿತು ಒಂದು ಅಧ್ಯಾಯವನ್ನು ಆರಂಭಿಸಲು ಚಿಂತನೆ ನಡೆಸಿದೆ ಎಂದರು.
ಫೆಬ್ರವರಿ 6ರಿಂದ ಆರಂಭಗೊಳ್ಳುವ ಈ ಕಾರ್ಯಕ್ರಮವು ಈ ತಿಂಗಳ 14ರ ವರೆಗೆ ಮುಂದುವರೆಯಲಿದ್ದು ಜಿಲ್ಲೆಯಾದ್ಯಂತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರಲ್ಲದೇ, ಈ ಕಾರ್ಯಕ್ರಮಕ್ಕಾಗಿ ನಿಯೋಜಿಸಲಾಗಿರುವ ಕಪಿಲಯಾನ ಹಾಗೂ ಕಾವೇರಿಯಾನ ವಾಹನಗಳಿಗೆ ಹಸಿರು ನಿಶಾನೆ ತೋರಿದರು. ಈ ಎರಡೂ ವಾಹನಗಳು ಮೈಸೂರು ಗ್ರಾಮಾಂತರದಲ್ಲಿನ ಶಾಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಟಿ.ನರಸೀಪುರ ತಾಲೂಕಿನಲ್ಲಿ ಫೆ.8 ಮತ್ತು 9ರಂದು ನಂಜನಗೂಡು ತಾಲೂಕಿನಲ್ಲಿ ಫೆ.10 ಮತ್ತು 11ರಂದು, ಫೆ.12 ಹಾಗೂ 13ರಂದು ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಸಂಚರಿಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಿದೆ ಎಂದರು.
ಫೆ.14 ರಂದು ಬೆಳಗ್ಗೆ ಚಾಮುಂಡಿಪುರಂನಲ್ಲಿರುವ ಸೈಂಟ್ ಮೇರಿಸ್ ಶಾಲೆ, ಕುವೆಂಪು ನಗರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ಮುಗಿದ ನಂತರ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ್,  ಉಪಮಹಾಪೌರ ರತ್ನಲಕ್ಷ್ಮಣ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಆರ್.ಬಸಪ್ಪ, ತಾಯೂರು ವಿಠಲಮೂರ್ತಿ, ಪ.ಮಲ್ಲೇಶ್, ವೇಣುಗೋಪಾಲ್  ಮತ್ತಿತರರು ಉಪಸ್ಥಿತರಿದ್ದರು. ಮಕ್ಕಳಿಗೆ ಪಠ್ಯ ಕೃತಿಗಳನ್ನು ಗಾಯನದ ಮೂಲಕ ಹಾಡಿ ತೋರಿಸಲಾಯಿತು.

Leave a Reply

comments

Related Articles

error: