ಕರ್ನಾಟಕಪ್ರಮುಖ ಸುದ್ದಿ

ರಾಜ್ಯ ಸರ್ಕಾರದಿಂದ ಸಾವಿರ ಆಂಗ್ಲ ಮಾಧ್ಯಮ ಶಾಲೆಗಳು ಈ ವರ್ಷದಿಂದಲೇ ಪ್ರಾರಂಭ

ಬೆಂಗಳೂರು (ಮೇ 21): ಖಾಸಗಿ ಶಾಲೆ ಮಕ್ಕಳಿಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಒಂದು ಸಾವಿರ ಆಂಗ್ಲ ಮಾಧ್ಯಮ, 100 ಪಬ್ಲಿಕ್ ಶಾಲೆ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಲಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದಲ್ಲೇ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಇವು ಪ್ರಾರಂಭವಾಗಲಿದ್ದು, ಶಿಕ್ಷಣ ಇಲಾಖೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಬೇಕೆಂದು ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಸೂಚಿಸಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಕಾರ ಈ ಬಾರಿ ರಾಜ್ಯದ 176 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಸಾವಿರ ಆಂಗ್ಲಮಾಧ್ಯಮ ಶಾಲೆಗಳು ತಲೆ ಎತ್ತಲಿವೆ. ಈ ಹಿಂದೆ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದ ಮೊಟ್ಟ ಮೊದಲ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದರು.

ಆದರೆ ಇದಕ್ಕೆ ಸಾಹಿತಿಗಳು, ಬರಹಗಾರರು, ಚಿಂತಕರು ವಿರೋಧ ವ್ಯಕ್ತಪಡಿಸಿದ್ದರು. ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಈಗಾಗಲೇ ಆಂಗ್ಲ ಭಾಷೆಯ ಹಾವಳಿಯಿಂದಾಗಿ ಕನ್ನಡ ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆಯಾಗಿದೆ. ಸರ್ಕಾರ ನಿರ್ಧಾರವನ್ನು ಪುನರ್ ಪರಿಶೀಲನೆ ಮಾಡುವಂತೆ ಮನವಿ ಮಾಡಿದ್ದರು.

ಖುದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಆಂಗ್ಲಶಾಲೆಗಳನ್ನು ತೆರೆಯುವ ಸರ್ಕಾರದ ಪ್ರಸ್ತಾವನೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದರು. ಆದರೆ ಸರ್ಕಾರ ಯಾವುದನ್ನೂ ಪರಿಗಣಿಸದೆ ಆಂಗ್ಲ ಶಾಲೆಗಳಿಗೆ ಸ್ಪರ್ಧೆ ನೀಡಲು ಅನುಕೂಲವಾಗುವಂತೆ ಒಂದು ಸಾವಿರ ಶಾಲೆಗಳನ್ನು ತೆರೆಯಲು ಮುಂದಾಗಿದೆ.

ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ಇರುವ ಮಾಧ್ಯಮ ತರಗತಿಗಳ ಜೊತೆಗೆ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸಲಾಗುವುದು. ಇದರಿಂದ ಹೆಚ್ಚು ಮಕ್ಕಳನ್ನು ಸರ್ಕಾರಿ ಶಾಲೆಗೆ ಆಕರ್ಷಿಸಬಹುದಾಗಿದೆ. ಆರಂಭಿಕವಾಗಿ 1000 ಶಾಲೆಗಳನ್ನು ತೆರೆಯಲಾಗುವುದು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸರ್ಕಾರ ಪ್ರಕಟಿಸಿರುವ ಅಧಿಸೂಚನೆಯಲ್ಲಿ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳು, ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 4ರಂತೆ ತೆರೆಯಲಾಗುವುದು. ಅಲ್ಲದೆ ಒಂದು ಶಾಲೆ ಕಡ್ಡಾಯವಾಗಿ ವಿಧಾನಸಭಾ ಕ್ಷೇತ್ರದ ಕೇಂದ್ರ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಒಂದೇ ಆವರಣದಲ್ಲಿ ಒಂದರಿಂದ 10ನೇ ತರಗತಿಗಳು ನಡೆಯುತ್ತಿರುವ ಶಾಲೆಗಳಲ್ಲಿ ಪ್ರಥಮ ಆದ್ಯತೆ ನೀಡಬೇಕು.

1ರಿಂದ 10ನೇ ತರಗತಿಗಳು ಒಂದೇ ಆವರಣದಲ್ಲಿ ನಡೆದು ಕೊಠಡಿಗಳು ಲಭ್ಯವಿಲ್ಲದಿದ್ದರೆ ದಾಖಲಾತಿ ಹೆಚ್ಚಿರುವ 1ರಿಂದ 8 ತರಗತಿ ನಡೆಯುವ 100 ಮೀಟರ್‍ನಿಂದ 500 ಮೀಟರ್ ವ್ಯಾಪ್ತಿಯೊಳಗಿನ ಪ್ರೌಢಶಾಲೆಗಳನ್ನು ಆಯ್ಕೆ ಮಾಡುವಂತೆ ಸೂಚಿಸಲಾಗಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಇಂಗ್ಲೀಷ್ ಹಾಗೂ ಗಣಿತ ವಿಷಯಗಳಿಗೆ ಕೇಂದ್ರ ಪಠ್ಯಪುಸ್ತಕ (ಎನ್‍ಸಿಇಆರ್‍ಟಿ)ಗಳನ್ನು ಹಾಗೂ ಪರಿಸರ ಅಧ್ಯಯನ ಮತ್ತು ಕನ್ನಡ ವಿಷಯಗಳಿಗೆ ಕರ್ನಾಟಕದ ಪಠ್ಯ ಪುಸ್ತಕಗಳನ್ನು ಅನುಸರಿಸಬೇಕು.

ಎನ್‍ಸಿಇಆರ್‍ಟಿಯ ಕೃತಿ ಸ್ವಾಮ್ಯ (ಕಾಪಿರೈಟ್) ಪಡೆದು ಒಂದನೇ ತರಗತಿಯ ಗಣಿತ ವಿಷಯದ ಪಠ್ಯಪುಸ್ತಕಗಳನ್ನು ಕನ್ನಡಕ್ಕೆ ಭಾಷಾಂತರಿಸಬೇಕು. ಗಣಿತ ಪಠ್ಯ ಪುಸ್ತಕ ಹಾಗೂ ರಾಜ್ಯ ಪಠ್ಯಕ್ರಮದ ಪರಿಸರ ಅಧ್ಯಯನ ಪಠ್ಯ ಪುಸ್ತಕಗಳನ್ನು ದ್ವಿಭಾಷೆಯಲ್ಲಿ ಮುದ್ರಿಸಬೇಕು. ಆಯ್ಕೆಗೊಂಡ ಸಾವಿರ ಶಾಲೆಗಳಲ್ಲಿ ಪ್ರತಿ ಶಾಲೆಗೆ ಒಬ್ಬರು ಶಿಕ್ಷಕರಿಗೆ ಪ್ರಾದೇಶಿಕ ಆಂಗ್ಲಭಾಷೆ ತರಬೇತಿ ಸಂಸ್ಥೆ ಮೂಲಕ 15 ದಿನಗಳ ಪ್ರವೇಶ ತರಬೇತಿ ನೀಡಬೇಕು.

ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವುದರ ಜೊತೆಗೆ ಈ ವರ್ಷ ಸರ್ಕಾರ ರಾಜ್ಯದ ನಾನಾ ಕಡೆ 100 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲು ತೀರ್ಮಾನಿಸಿದೆ. ಪ್ರತಿ ಮಗುವೂ ಶಾಲೆಯಲ್ಲಿ ಉತ್ತಮ ಕಲಿಕೆಯೊಂದಿಗೆ ಎಂಬ ಘೋಷ ವಾಖ್ಯದೊಂದಿಗೆ ಶಿಕ್ಷಣ ಹಕ್ಕು ಕಾಯ್ದೆಯಡಿ ಗುಣಮಟ್ಟದ ಶಿಕ್ಷಣ ನೀಡುವ ಗುರಿಯೊಂದಿಗೆ 100 ಪಬ್ಲಿಕ್ ಶಾಲೆಗಳನ್ನು ಪ್ರಾರಂಭಿಸಲಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ 06, ಬಳ್ಳಾರಿಯಲ್ಲಿ 06, ಬೆಳಗಾವಿಗೆ 15, ಬೆಂಗಳೂರು ಉತ್ತರದಲ್ಲಿ 11, ಬೆಂಗಳೂರು ದಕ್ಷಿಣದಲ್ಲಿ 27, ಬೀದರ್‍ನಲ್ಲಿ 04, ಚಿಕ್ಕಮಗಳೂರಿನಲ್ಲಿ 3, ದಕ್ಷಿಣ ಕನ್ನಡ 10 , ದಾವಣಗೆರೆ 16, ಧಾರವಾಡದಲ್ಲಿ 06, ಗದಗ 05, ಹಾಸನ 06, ಕಲಬುರಗಿ 10, ಕೋಲಾರ 04, ಕೊಪ್ಪಳ 17, ಮಂಡ್ಯ 07, ಮೈಸೂರು 15, ರಾಯಚೂರು 12, ರಾಮನಗರ 06, ಶಿವಮೊಗ್ಗ 06, ತುಮಕೂರು 24, ಉಡುಪಿ 03, ಉತ್ತರ ಕನ್ನಡ 09, ಬಿಜಾಪುರ 18 ಸೇರಿದಂತೆ ಒಟ್ಟು 100 ಕರ್ನಾಟಕ ಪಬ್ಲಿಕ್ ಶಾಲೆಗಳು ಪ್ರಾರಂಭವಾಗಲಿವೆ. ಆಂಗ್ಲ ಶಾಲೆಗಳ ಮಾದರಿಯಲ್ಲೇ ಮಕ್ಕಳಿಗೆ ಪೂರ್ವ ಪ್ರಾಥಮಿಕ ಅಂದರೆ ನರ್ಸರಿ ಶಾಲೆಯೂ ಈ ವರ್ಷದಿಂದಲೇ ಆರಂಭವಾಗಲಿದೆ. (ಎನ್.ಬಿ)

Leave a Reply

comments

Related Articles

error: