ಕರ್ನಾಟಕಪ್ರಮುಖ ಸುದ್ದಿ

ಕಾಂಗ್ರೆಸ್‍ನಿಂದ ನ್ಯಾಯ ಸಿಗದಿದ್ದರೆ ಮುಸ್ಲಿಮರು ಬಿಜೆಪಿ ಪರ ಅಂದ್ರು ರೋಷನ್ ಬೇಗ್!

ಬೆಂಗಳೂರು (ಮೇ 21): ಇತ್ತೀಚೆಗೆ ಬಿಡುಗಡೆಯಾದ ಚುನಾವಣೋತ್ತರ ಸರ್ವೆಗಳು ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಸ್ಥಾನಗಳು ಲಭ್ಯವಾಗಲಿವೆ ಎಂಬ ಭವಿಷ್ಯ ನುಡಿದಿರುವ ಬೆನ್ನಲ್ಲೇ ಹಿರಿಯ ಕಾಂಗ್ರೆಸ್ ನಾಯಕ ರೋಶನ್ ಬೇಗ್ ಅವರು ಪಕ್ಷ ತೊರೆಯುವ ಸೂಚನೆ ನೀಡಿದ್ದಾರೆ. ಎನ್‌ಡಿಎ ಮರಳಿ ಅಧಿಕಾರಕ್ಕೆ ಬಂದಲ್ಲಿ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳುವಂತೆ ಮುಸ್ಲಿಂ ಸಹೋದರರಿಗೆ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಕೆಲ ಮಾಧ್ಯಮಗಳ ಜತೆ ಮಾತನಾಡುತ್ತಾ ಅವರು ಹೇಳಿದ್ದಾರೆ.

ಮುಸ್ಲಿಮರು ಬಿಜೆಪಿ ಜತೆ ಕೈಜೋಡಿಸಬೇಕೆಂಬುದು ನಿಮ್ಮ ಮಾತುಗಳ ಅರ್ಥವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೋಶನ್ ಬೇಗ್, ಅಗತ್ಯ ಬಿದ್ದರೆ ಬಿಜೆಪಿ ಜೊತೆ ಕೈಜೋಡಿಸಬೇಕು. ನಾವು ಒಂದೇ ಪಕ್ಷಕ್ಕೆ ನಿಷ್ಠರಾಗಿರಬಾರದು. ಮುಸ್ಲಿಮರಿಗೆ ಕರ್ನಾಟಕದಲ್ಲೇನಾಯಿತು? ಕಾಂಗ್ರೆಸ್ ಕೇವಲ ಒಂದು ಟಿಕೆಟ್ ನೀಡಿದೆ ಎಂದರು.

ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತೊರೆಯುತ್ತೀರಾ ಎಂದು ಕೇಳಿದಾಗ ಆಗತ್ಯ ಬಿದ್ದರೆ ನಾನು ಹಾಗೆ ಮಾಡುತ್ತೇನೆ, ಏಕೆಂದರೆ ನಾವು ಅವಮಾನದೊಂದಿಗೆ ಒಂದು ಪಕ್ಷದಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ. ನಾವು ಘನತೆ ಗೌರವದೊಂದಿಗೆ ಬಾಳುವವರು. ನಮಗೆ ಎಲ್ಲಿ ಗೌರವ ದೊರೆಯುವುದಿಲ್ಲವೋ ನಾವು ಅಲ್ಲಿರಲು ಬಯಸುವುದಿಲ್ಲ. ನಮ್ಮನ್ನು ಯಾರಾದರೂ ಪ್ರೀತಿ ಗೌರವದಿಂದ ಕೂರಿಸಿದರೆ ಅವರೊಂದಿಗೆ ಕೂರುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ಮುಸ್ಲಿಮರ ಈಗಿನ ಸ್ಥಿತಿಗತಿಗೆ ಯಾರನ್ನು ದೂರುತ್ತೀರಿ ಎಂದು ಕೇಳಿದಾಗ ರೋಶನ್ ಬೇಗ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರತ್ತ ಬೆರಳು ತೋರಿಸಿ ಅವರು  ವಿಫಲ ಚುನಾವಣಾ ಪ್ರಚಾರ ನಡೆಸಿದ್ದಾರೆ ಎಂದರಲ್ಲದೆ, ಸಿದ್ದರಾಮಯ್ಯ ಸಹಿತ ಕಾಂಗ್ರೆಸ್ ಶಾಸಕಾಂಗ ನಾಯಕರನ್ನೂ ಅವರು ಟೀಕಿಸಿದರು.

ಕಾಂಗ್ರೆಸ್ ಪಕ್ಷದ ಫ್ಲಾಪ್ ಪ್ರಚಾರಾಭಿಯಾನವನ್ನು ಗಮನಿಸಿ ಪಕ್ಷಕ್ಕೆ ಹೆಚ್ಚು ಸ್ಥಾನಗಳು ದೊರೆಯುವುದಿಲ್ಲವೆಂದು ಮೊದಲಿನಂದಲೂ ನನಗೆ ಗೊತ್ತಿದ್ದರಿಂದ ಚುನಾವಣೋತ್ತರ ಫಲಿತಾಂಶದಿಂದ ಅಚ್ಚರಿಯಾಗಿಲ್ಲ ಎಂದು ರೋಶನ್ ಬೇಗ್ ಹೇಳಿದರು. (ಎನ್.ಬಿ)

Leave a Reply

comments

Related Articles

error: