ಮೈಸೂರು

ಫಲಿತಾಂಶ ಘೋಷಣೆಯಾದ ಬಳಿಕ ಗೆದ್ದ ಅಭ್ಯರ್ಥಿ ವಿಜಯೋತ್ಸವ ಮೆರವಣಿಗೆ ಮಾಡುವಂತಿಲ್ಲ : ಅಭಿರಾಮ್ ಜಿ. ಶಂಕರ್

ಮತ ಎಣಿಕೆಗೆ ಖಾಕಿ‌ ಪಡೆ ಸಜ್ಜು

ಮೈಸೂರು,ಮೇ.21:- ಮೈಸೂರು-  ಕೊಡಗು ಲೋಕಸಭಾ ಕ್ಷೇತ್ರದ ಮತಗಳ ಎಣಿಕೆಗೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿ ಅಭಿರಾಂ ಜಿ ಶಂಕರ್, ಮೈಸೂರಿನ ಪಡುವಾರಹಳ್ಳಿಯ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮತಗಳ ಎಣಿಕೆ ನಡೆಯಲಿದೆ. ಹುಣಸೂರು, ಚಾಮುಂಡೇಶ್ವರಿ, ನರಸಿಂಹರಾಜ, ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ 19 ಸುತ್ತುಗಳಲ್ಲಿ ಮುಕ್ತಾಯವಾಗಲಿದೆ. ಮಡಿಕೇರಿ, ಕೃಷ್ಣರಾಜ ಕ್ಷೇತ್ರಗಳ ಮತ ಎಣಿಕೆ 18 ಸುತ್ತುಗಳಲ್ಲಿ ಮುಕ್ತಾಯಗೊಳ್ಳಲಿದೆ.  ಪಿರಿಯಾಪಟ್ಟಣ 16 ಸುತ್ತು ಹಾಗೂ ಚಾಮರಾಜ ಕ್ಷೇತ್ರದ ಮತಗಳ ಎಣಿಕೆ 17 ಸುತ್ತುಗಳಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮತ ಎಣಿಕೆ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಮೊದಲು ಅಂಚೆ ಮತಪತ್ರಗಳ ಎಣಿಕೆ ನಡೆಯಲಿದೆ. ನಂತರ ಎಲೆಕ್ಟ್ರಾನಿಕ್ ಮತಗಳ ಎಣಿಕೆ ನಡೆಯಲಿದೆ. ರೌಂಡ್ ವೈಸ್ ರಿಸಲ್ಟ್ ಗಳನ್ನು ಘೋಷಿಸಲಾಗುತ್ತದೆ. ಎಲ್ಲಾ ಸುತ್ತುಗಳ ಎಣಿಕೆ ಮುಗಿದ ನಂತರ ಚುನಾವಣಾ ವೀಕ್ಷಕರ ಅನುಮತಿ ಪಡೆದು ಫಲಿತಾಂಶವನ್ನು ಘೋಷಿಸಲಾಗುತ್ತದೆ. ಫಲಿತಾಂಶ ಘೋಷಣೆಯಾದ ಬಳಿಕ ಗೆದ್ದ ಅಭ್ಯರ್ಥಿ ವಿಜಯೋತ್ಸವ ಮೆರವಣಿಗೆ ಮಾಡುವಂತಿಲ್ಲ. ಪಟಾಕಿಗಳನ್ನು ಸಿಡಿಸುವಂತಿಲ್ಲ ಎಂದು ಡಿ.ಸಿ ಅಭಿರಾಮ್ ಜಿ. ಶಂಕರ್ ತಿಳಿಸಿದರು.

ಮೈಸೂರಿನ ಪಡುವಾರಳ್ಳಿಯಲ್ಲಿರುವ ಮಹಾರಾಣಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಮೊದಲ ಮಹಡಿಯಲ್ಲಿ ಮಡಿಕೇರಿಯ 169769 ಮತಗಳನ್ನು 15 ಟೇಬಲ್ ಗಳಲ್ಲಿ ಮತ ಎಣಿಸಲಾಗುತ್ತದೆ. ನೆಲ ಮಹಡಿಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ 159337 ಮತಗಳನ್ನು 15 ಟೇಬಲ್ ಗಳಲ್ಲಿ, ಮೂರನೇ ಮಹಡಿಯಲ್ಲಿ ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ 144812  ಮತಗಳನ್ನು 15 ಟೇಬಲ್ ಗಳಲ್ಲಿ ಎಣಿಕೆ ಕಾರ್ಯ ನಡೆಯಲಿದೆ.

ಮೊದಲ ಮಹಡಿಯಲ್ಲಿ ಹುಣಸೂರು ವಿಧಾನಸಭಾ ಕ್ಷೇತ್ರದ 175284 ಮತಗಳನ್ನು 15 ಟೇಬಲ್ ಗಳಲ್ಲಿ, ಮೊದಲನೇ ಮಹಡಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರ 217027ಚ ಮತಗಳನ್ನು 18 ಟೇಬಲ್ ಗಳಲ್ಲಿ ಎಣಿಕೆ ಮಾಡಲಾಗುತ್ತದೆ. ಎರಡನೇ ಮಹಡಿಯಲ್ಲಿ ಕೆ.ಆರ್. ವಿಧಾನಸಭಾ ಕ್ಷೇತ್ರದ 146907 ಮತಗಳನ್ನು 15 ಟೇಬಲ್ ಗಳಲ್ಲಿ ಎಣಿಕೆ ಮಾಡಲಾಗುತ್ತದೆ. ಎರಡನೇ ಮಹಡಿಯಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ 139809 ಮತಗಳನ್ನು 15 ಟೇಬಲ್ ಗಳ ಮೂಲಕ ಎಣಿಕೆ ನಡೆಯಲಿದೆ. ಹಾಗೆಯೇ ಎರಡನೇ ಮಹಡಿಯಲ್ಲಿ ಎನ್.ಆರ್. ಕ್ಷೇತ್ರದ 159569  ಮತಗಳನ್ನು 15 ಟೇಬಲ್ ಗಳಲ್ಲಿ ಎಣಿಕೆ ಮಾಡಲಾಗುತ್ತದೆ.

ಮತ ಎಣಿಕೆಗೆ ಖಾಕಿಪಡೆ ಸಜ್ಜು

ಮತ ಎಣಿಕೆಯ ಬಂದೋಬಸ್ತ್ ಗಾಗಿ ನಗರದಾದ್ಯಂತ 1930 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಮತ ಎಣಿಕೆಯ ಸುತ್ತಮುತ್ತ 1050 ಪೊಲೀಸರನ್ನು  ನಿಯೋಜಿಸಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ  ಮಾಡಲಿದೆ

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಪಿ ಮುತ್ತುರಾಜ್, ಬಂದೋಬಸ್ತ್ ಗಾಗಿ ನಾಲ್ಕು ಮಂದಿ ಡಿಸಿಪಿ, 6 ಮಂದಿ ಎಸಿಪಿ,  22 ಮಂದಿ  ಇನ್ಸ್ಪೆಕ್ಟರ್, 23 ಮಂದಿ ಪಿಎಸ್ಐ, ಎಎಸ್ ಐ103 ಮಂದಿ ಹಾಗೂ 582 ಪಿಸಿಗಳನ್ನು ನೇಮಕ ಮಾಡಲಾಗುತ್ತದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ ಅಶ್ವರೋಹಿದಳ, ಶ್ವಾನದಳದಿಂದಲೂ ಕೂಡ ಭದ್ರತೆ ವಹಿಸಲಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಪೊಲೀಸ್ ಹದ್ದಿನ ಕಣ್ಣಿಡಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಅನುರಾಧ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: