ಮೈಸೂರು

ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಎತ್ತ ನೋಡಿದರೂ ತ್ಯಾಜ್ಯದ ರಾಶಿ ! ಸಾಂಕ್ರಾಮಿಕ ರೋಗ ಭೀತಿ

ಮೈಸೂರು,ಮೇ.22:- ಮೈಸೂರು ಹೆಬ್ಬಾಳಿನ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ರಾಶಿ ರಾಶಿಯಲ್ಲಿ ಸೇರುತ್ತಿದೆ.

ಕೈಗಾರಿಕಾ ಪ್ರದೇಶದ ಕಂಡ ಕಂಡ ಕಡೆ ಮೈಸೂರು ನಗರ ಹಾಗೂ ಸುತ್ತಮುತ್ತಲ ತ್ಯಾಜ್ಯವನ್ನು, ಕಟ್ಟಡ ತ್ಯಾಜ್ಯವನ್ನು ಸಭೆ, ಸಮಾರಂಭ, ಹೋಟೆಲ್ ಗಳ ತ್ಯಾಜ್ಯವನ್ನು ಲಾರಿ, ಟ್ರ್ಯಾಕ್ಟರ್, ಆಟೋಗಳಲ್ಲಿ ತಂದು ಸುರಿಯಲಾಗುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಕೈಗಾರಿಕಾ ಪ್ರದೇಶ ತ್ಯಾಜ್ಯ ಸಂಗ್ರಹ ಸ್ಥಳವಾಗಿ ಬದಲಾಗಿಬಡಬಹುದೆನ್ನುವ ಆತಂಕ ಕೈಗಾರಿಕೋದ್ಯಮಿಗಳನ್ನು ಕಾಡುತ್ತಿದೆ.

ಮಳೆ ನೀರು ಚರಂಡಿಗೆ ಪ್ರತಿನಿತ್ಯ ರಾಸಾಯನಿಕ ಯುಕ್ತ ಕಲುಷಿತ ನೀರನ್ನು ಫಿಟ್ ಕ್ಲೀನಿಂಗ್ ಟ್ಯಾಂಕರ್ ಗಳಲ್ಲಿ ತುಂಬಿಕೊಂಡು ಬಂದು ಸುರಿಯಲಾಗುತ್ತಿದೆ. ಇದರಿಂದ ಸುತ್ತಮುತ್ತಲ ಪ್ರದೇಶಗಳು ದುರ್ವಾಸನೆ ಬೀರುತ್ತಿವೆ. ಹೆಚ್.ಪಿ ಗ್ಯಾಸ್ ರಸ್ತೆಯಲ್ಲಂತೂ  ಕಸದ ರಾಶಿಯೇ ಬಿದ್ದಿದೆ. ತ್ಯಾಜ್ಯದ ರಾಶಿಗಳು ಬಿದ್ದಿದ್ದರೂ ವಿಲೇವಾರಿಯಾಗುತ್ತಿಲ್ಲ. ತ್ಯಾಜ್ಯದ ರಾಶಿ ಹೆಚ್ಚುತ್ತಿರುವುದರಿಂದ ಕೊಳಚೆ ಪ್ರದೇಶದಂತೆ ಕಾಣಿಸುತ್ತಿದೆ.

ಹೆಬ್ಬಾಳು ಕೆರೆ ರಸ್ತೆಯಲ್ಲಿ ದೊಡ್ಡ ಟ್ರಕ್ ಗಳನ್ನು ಸಾಲಾಗಿ ನಿಲ್ಲಿಸಲಾಗುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಕೈಗಾರಿಕಾ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ಇಲ್ಲ. ಎಂಎಸ್ ಇಎಲ್ ಉಗ್ರಾಣಕ್ಕೆ ಬರುವ ಟ್ರಕ್ ಗಳನ್ನು ರಸ್ತೆ ಬದಿಯಲ್ಲೇ ಸಾಲಾಗಿ ನಿಲ್ಲಿಸಲಾಗುತ್ತದೆ. ಇದು ಇತರೇ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಲಾರಿ ಚಾಲಕರು ಫುಟ್ ಪಾತ್ ಪ್ರದೇಶವನ್ನೇ ಶೌಚಾಲಯವನ್ನಾಗಿಸಿಕೊಂಡಿದ್ದಾರೆ. ಕೂರ್ಗಳ್ಳಿ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಅಲ್ಲಿನ ಖಾಲಿ ನಿವೇಶನಗಳಲ್ಲಿ ಟ್ರ್ಯಾಕ್ಟರ್ ನಲ್ಲಿ ತ್ಯಾಜ್ಯ ತಂದು ಸುರಿಯಲಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಎಂದು ಕೈಗಾರಿಕಾ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಒತ್ತಾಯಿಸಿದ್ದಾರೆ. ಕಾರ್ಮಿಕರು, ಕೈಗಾರಿಕೋದ್ಯಮಿಗಳು ತ್ಯಾಜ್ಯ ಸಂಗ್ರಹದಿಂದ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಬಹುದೆಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

Leave a Reply

comments

Related Articles

error: