
ಮೈಸೂರು
ವೈದ್ಯನೆಂದು ಹೇಳಿಕೊಂಡು ರೋಗಿಗಳಿಗೆ ಔಷಧ ನೀಡುತ್ತಿದ್ದ ನಕಲಿ ವೈದ್ಯನ ಬಂಧನ
ಮೈಸೂರು,ಮೇ.22:- ವೈದ್ಯನೆಂದು ಹೇಳಿಕೊಂಡು ರೋಗಿಗಳಿಗೆ ಔಷಧ ನೀಡುತ್ತಿದ್ದ ನಕಲಿ ವೈದ್ಯನೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ತಿ.ನರಸೀಪುರ ತಾಲೂಕಿನ ತಲಕಾಡಿನಲ್ಲಿ ನಡೆದಿದೆ.
ಬಂಧಿತನನ್ನು ವೇದಮೂರ್ತಿ ಎಂದು ಗುರುತಿಸಲಾಗಿದೆ. ಈತ ಮೊದಲು ಶಾಮಿಯಾನ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ. ಕೆಲವು ಆಯುರ್ವೇದಿಕ್ ಮತ್ತು ನಾಟಿ ಔಷಧಗಳನ್ನು ನೀಡಲಾರಂಭಿಸಿದ. ಫೇಸ್ ಬುಕ್ ಪುಟದಲ್ಲಿ ಈ ಕುರಿತು ಸಾಕಷ್ಟು ಪ್ರಚಾರವನ್ನೂ ನಡೆಸಿದ್ದ. ಡಾಕ್ಟರ್ ಮೂರ್ತಿ ಎಂಬಿಬಿಎಸ್ ಎಂದು ಹೇಳಿಕೊಂಡು 45ಕ್ಕೂ ಹೆಚ್ಚು ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಿದ್ದಾಗಿ ಬರೆದುಕೊಂಡಿದ್ದ. ಫೇಸ್ ಬುಕ್ ಮೂಲಕ ಪರಿಚಯವಾದವರನೇಕರು ಈತನ ಬಳಿ ಔಷಧ ಪಡೆದಿದ್ದರು. ಮಾಂಬಳ್ಳಿ ನಿವಾಸಿ ಚಂದ್ರಶೇಖರ್ ಎಂಬವರು ಈತನನ್ನು ಹುಡುಕಿಕೊಂಡು ಗ್ರಾಮಕ್ಕೆ ಬಂದಾಗ ಸ್ಥಳೀಯರು ನಿಜಾಂಶ ತಿಳಿಸಿದ್ದು, ಚಂದ್ರಶೇಖರ್ ಅವರು ತಲಕಾಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅವರು ನೀಡಿದ ದೂರನ್ನು ಆಧರಿಸಿ ಪೊಲೀಸರು ವೇದಮೂರ್ತಿಯನ್ನು ಬಂಧಿಸಿದ್ದಾರೆ.
ಈತ ವೈದ್ಯನಲ್ಲ. ನಕಲಿ ವೈದ್ಯ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)