ಪ್ರಮುಖ ಸುದ್ದಿಮೈಸೂರು

ಗೆದ್ದೇ ಗೆಲ್ಲುತ್ತೇನೆ ಎನ್ನುವ ಜೋಶ್ ನಲ್ಲಿದ್ದಾರೆ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ : ಮೋದಿಯವರೇ ಪ್ರಧಾನಿ ಆಗುವ ವಿಶ್ವಾಸ

ಮೈಸೂರು,ಮೇ.22:- ಹಲವು ಸಮೀಕ್ಷೆಗಳಲ್ಲಿ ಚಾಮರಾಜನಗರದಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್  ಗೆದ್ದೇ ಗೆಲ್ಲುತ್ತೇನೆ ಎನ್ನುವ ಜೋಶ್ ನಲ್ಲಿದ್ದಾರೆ.

ಮೈಸೂರಿನಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ಸಮೀಕ್ಷೆಗಳು ಬಿಜೆಪಿ ಪರ ಬಂದಿರುವ ಹಿನ್ನೆಲೆ  ಕಾಂಗ್ರೆಸ್ ಹಾಗೂ ಜೆಡಿಎಸ್ ನವರಿಗೆ ಸಮೀಕ್ಷೆಗಳ ಮೇಲೆ ನಂಬಿಕೆ ಇಲ್ಲ. ಸಮೀಕ್ಷೆಗಳು ಎಂದೂ ಸುಳ್ಳಾಗಲ್ಲ. ಕ್ಷೇತ್ರದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ನನಗೆ ಲೀಡ್ ಸಿಗಲಿದೆ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲ್ಲಲಿದೆ. ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಮತ್ತೆ ಎನ್ ಡಿ ಎ ಸರ್ಕಾರ ಬರುತ್ತೆ ಮೋದಿಯವರೇ ಪ್ರಧಾನಿ ಆಗ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇಷ್ಟು ವರ್ಷಗಳಾದ್ರು ಕ್ಷೇತ್ರದ ಜನರು ನನ್ನ ನೆಲೆ ಪ್ರೀತಿ ವಿಶ್ವಾಸವಿಟ್ಟಿದ್ದಾರೆ. ಹೀಗಾಗಿ ಇದು  ನನ್ನ ರಾಜಕೀಯ ಜೀವನದಲ್ಲಿ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ ವೇಳೆ ಮಂಡ್ಯ ಮತ್ತು ಮೈಸೂರು –ಕೊಡಗು ಕ್ಷೇತ್ರದ ಬಗ್ಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್,  ಮಂಡ್ಯದಲ್ಲಿ ಸುಮಲತಾ ಮೈಸೂರಿನಲ್ಲಿ ಪ್ರತಾಪ್ ಸಿಂಹ ಗೆಲುವು ನಿಶ್ಚಿತ. ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ  ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಗೆ ಗೆಲುವಿನ ವಾತಾವರಣ ಇದೆ. ಹಾಗೆಯೇ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲ್ಲಲಿದ್ದಾರೆ ಎನ್ನುವ ಸ್ಪಷ್ಟ ಸಮೀಕ್ಷೆಗಳು ಬರ್ತಿದ್ದಾವೆ ಎಂದು ಹೇಳಿದರು.

ತುಮಕೂರು ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಗೆಲವು ಅಷ್ಟು ಸುಲಭವಲ್ಲ. ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಡವಳಿಕೆಯನ್ನು ನೋಡಿರುವ  ಜನತೆ ಈ ಚುನಾವಣೆಯಲ್ಲಿ ತಕ್ಕ ಫಲಿತಾಂಶ ನೀಡಲಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: