ಮೈಸೂರು

ಹೆಚ್1ಎನ್1 : 27 ಶಂಕಿತ ಪ್ರಕರಣಗಳು ಪತ್ತೆ

ಮೈಸೂರಿನಲ್ಲಿ ಹೆಚ್1 ಎನ್1 ಸೋಂಕು ಪ್ರಕರಣ ಕಂಡು ಬಂದಿದೆ. ಮೈಸೂರು ಜಿಲ್ಲೆಯಲ್ಲಿ 2016 ನೇ ಸಾಲಿನಲ್ಲಿ 76 ಶಂಕಿತ ಪ್ರಕರಣಗಳಲ್ಲಿ 5 ಪ್ರಕರಣಗಳು ಸೀಜನಲ್ ಹೆಚ್1ಎನ್1 ಇನ್‍ಫ್ಲೂಯೆಂಜಾ  ‘ಎ’ ಪ್ರಕರಣಗಳು ಧೃಢೀಕೃತವಾಗಿತ್ತು. ಆದರೆ ಇದೀಗ ರೋಗಿಗಳು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗಿದ್ದಾರೆ.   2017ರ ಆರಂಭದಲ್ಲೇ ಮತ್ತೆ ಕೆಲವು ಕಡೆ ಹೆಚ್.1ಎನ್1 ಕಾಣಿಸಿಕೊಂಡಿದ್ದು, ಜನರ ನಿದ್ದೆಗೆಡಿಸಿದೆ. ಜಿಲ್ಲಾ ಸರ್ವೇಕ್ಷಣಾ ಘಟಕ, ಮೈಸೂರು ಜಿಲ್ಲೆ, ಮೈಸೂರು ಇವರು ಸರ್ವೇಕ್ಷಣೆ ನಡೆಸಿ ಈ ವರದಿ ನೀಡಿದ್ದಾರೆ.

2017 ಪ್ರಾರಂಭದಲ್ಲೇ 27 ಶಂಕಿತ ಪ್ರಕರಣಗಳು

2017 ನೇ ಸಾಲಿನ ಜನವರಿ ಮಾಹೆಯಲ್ಲೇ 27 ಶಂಕಿತ ಪ್ರಕರಣಗಳು ಕಂಡು ಬಂದಿವೆ. ಇವುಗಳಲ್ಲಿ 8 ಧೃಢೀಕೃತ ಸೀಜನಲ್ ಹೆಚ್1ಎನ್1 ಇನ್‍ಫ್ಲೂಯೆಂಜಾ ‘ಎ’ ಪ್ರಕರಣಗಳು ವರದಿಯಾಗಿದೆ. ಈ ಪೈಕಿ 4 ರೋಗಿಗಳು ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾಗಿದ್ದಾರೆ. ಇನ್ನುಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾ ಮುಖ್ಯ ಅಧಿಕಾರಿ ಕುಸುಮ ಅವರು ಸಿಟಿ ಟುಡೇಗೆ ಮಾಹಿತಿ ನೀಡಿದರು.

ಎಲ್ಲೆಲ್ಲಿ ಕಂಡು ಬಂದಿದೆ

ಕೇವಲ 15 ದಿನದಲ್ಲಿ ನಗರ ಪ್ರದೇಶದಲ್ಲಿ 5 ಪ್ರಕರಣ ಹಾಗೂ ಗ್ರಾಮಾಂತರ ಭಾಗದಲ್ಲಿ 3 ಪ್ರಕರಣಗಳು ಕಂಡು ಬಂದಿವೆ. ಅವುಗಳಲ್ಲಿ ಪ್ರಮುಖವಾಗಿ, ಹುಣಸೂರಿನ ಹನಗೂಡು, ಮೈಸೂರಿನ ದಟ್ಟಗಳ್ಳಿ, ಹೆಬ್ಬಾಳು, ಸುಬ್ರಮಣ್ಯನಗರ ಹಾಗೂ ಕುವೆಂಪುನಗರ ಹಾಗೂ ಬೋಗಾದಿ 2ನೇ ಹಂತ, ನಂಜನಗೂಡಿನ ಬೊಕ್ಕಹಳ್ಳಿ, ಟಿವಿಎಸ್ ನಗರದಲ್ಲಿ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿ ತಲಾ ಒಂದೊಂದು ಪ್ರಕರಣಗಳು ಕಂಡು ಬಂದಿದೆ.

ಹೇಗೆ ಹರಡುತ್ತೆ ರೋಗ ?

ಹವಾಮಾನ ವೈಪರಿತ್ಯದಿಂದ ಹೆಚ್1ಎನ್1 ಇನ್‍ಫ್ಲೂಯೆಂಜಾ ಹೆಚ್,3, ಇನ್‍ಫ್ಲೂಯೆಂಜಾ ಬಿ ವೈರಾಣುಗಳಿಂದ ಈ ರೋಗದ ಲಕ್ಷಣ ಕಂಡು ಬರುತ್ತದೆ. ಪ್ರಮುಖವಾಗಿ ಕೆಮ್ಮುವುದರಿಂದ, ಸೀನುವುದರಿಂದ ಆ ವೇಳೆ ವೈರಾಣು ಕಣಗಳು ಗಾಳಿಯಲ್ಲಿ ಹರಡಿ ಈ ಸೋಂಕು ಕಂಡು ಬರುತ್ತವೆ. ಮಾತ್ರವಲ್ಲ, ಇದು ನಿತ್ಯದ ವಸ್ತುಗಳ ಮೇಲೆ ಕುಳಿತಾಗ ಅದರ ಮೇಲೆ ನಮ್ಮ ಸ್ಪರ್ಶ ಮಾಡಿದಾಗ ನಮ್ಮ ಕೈಗಳಿಂದ ಮುಖ ಹಾಗೂ ಮೂಗಿನ ಮೇಲಿಟ್ಟಾಗ ಈ ಸೋಂಕು ಹರಡುವ ಸಾಧ್ಯತೆ ಇವೆ.

ಎಚ್ಚರಿಕೆ ಕ್ರಮ ಅಗತ್ಯ

ನಾವು ಹೊರಗಡೆ ಹೋದ ವೇಳೆ  ಸಂಪೂರ್ಣವಾಗಿ ಧೂಳಿನಲ್ಲೇ ಇರುವ ಕಾರಣ, ಮನೆಗೆ ಬಂದ ಕೂಡಲೇ ಸೋಪಿನಿಂದ ಕೈತೊಳೆಯಬೇಕು. ಮುನ್ನೆಚ್ಚರಿಕೆ ಕ್ರಮವಾಗಿ ಆಲ್ಕೋಹಾಲ್ ಕಟೆಂಟ್‍ವುಳ್ಳ ಹ್ಯಾಂಡ್ ವಾಶನರ್‍ನಿಂದ ಕೈತೊಳೆಯುವುದು ಸೂಕ್ತ.  ಜೊತೆಯಲ್ಲಿ ಮಾಸ್ಕ್ ಉಪಯೋಗ ಮಾಡಿದರೆ ಮತ್ತಷ್ಟು ಒಳ್ಳೆಯದು. ದಿನನಿತ್ಯದ ವಸ್ತುಗಳನ್ನು  ಚೆನ್ನಾಗಿ ತೊಳೆಯಬೇಕು.

ಇನ್ನೂ ಸಾಮಾನ್ಯವಾಗಿ ಹೃದಯ ಸಂಬಂಧಿ ಕಾಯಿಲೆ ಅಥವಾ ಶ್ವಾಸಕೋಶದ ಸೋಂಕು ಮಧುಮೇಹದ ರೋಗಿಗಳಿಗೆ ಇದು ಬೇಗನೇ ಹರಡುತ್ತದೆ. ಈ ವೇಳೆ ಅತಿಯಾದ ಜ್ವರ, ನೆಗಡಿ, ಕೆಮ್ಮು ಉಂಟಾಗಿ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಟ್ಯಾಮಿಫ್ಲೋ ಮಾತ್ರೆಗಳನ್ನು ಸಂಬಂಧಪಟ್ಟ ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡುತ್ತಿದ್ದೇವೆ. ಈ ರೋಗದ ಲಕ್ಷಣ ಕಂಡು ಬಂದ ತಕ್ಷಣವೇ ಮಾತ್ರೆಯ ಜೊತೆಗೆ ಚಿಕಿತ್ಸೆ ಅತ್ಯವಶ್ಯಕ ಅಂತಾರೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಕುಸುಮ ಅವರು.

ಒಟ್ಟಿನಲ್ಲಿ ಹೆಚ್.1ಎನ್.1 ಜಿಲ್ಲೆಯಲ್ಲಿ ಹರಡುವುದನ್ನು ತಡೆಯಲು ಎಲ್ಲರೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲೇಬೇಕಾಗಿದೆ.

ಸುರೇಶ್.ಎನ್

Leave a Reply

comments

Related Articles

error: